ಸೋಮವಾರಪೇಟೆ, ಏ. 4: ಗೌಡಳ್ಳಿ ಹಿಂದೂ ಗೆಳೆಯರ ಬಳಗದ ವತಿಯಿಂದ 3ನೇ ವರ್ಷದ “ಹಿಂದೂ ಕಪ್” ಮುಕ್ತ ಫುಟ್ಬಾಲ್ ಪಂದ್ಯಾವಳಿ ತಾ. 6 ಮತ್ತು 7ರಂದು ನಡೆಯಲಿದ್ದು, ಪಂದ್ಯಾವಳಿಗೆ ಗೌಡಳ್ಳಿ ಬಿ.ಜಿ.ಎಸ್. ಶಾಲಾ ಮೈದಾನ ಸಜ್ಜುಗೊಳ್ಳುತ್ತಿದೆ.

ಬಳಗದ ಅಧ್ಯಕ್ಷ ನಾಗರಾಜು ಪ್ರಸನ್ನ, ಕಾರ್ಯದರ್ಶಿ ನವೀನ್ ಅಜ್ಜಳ್ಳಿ, ಖಜಾಂಚಿ ಎಚ್.ಎಂ. ಜಿತೇಂದ್ರ ಸೇರಿದಂತೆ ಪದಾಧಿಕಾರಿಗಳು ಮೈದಾನವನ್ನು ಸಜ್ಜುಗೊಳಿಸುತ್ತಿದ್ದು, ವಿಜೇತ ತಂಡಗಳಿಗೆ ನೀಡಲಾಗುವ ಆಕರ್ಷಕ ಟ್ರೋಫಿಯನ್ನು ಇಂದು ಅನಾವರಣಗೊಳಿಸಿದರು.

ಗ್ರಾಮೀಣ ಭಾಗದಲ್ಲಿ ಆಯೋಜನೆಗೊಂಡಿರುವ ಪಂದ್ಯಾವಳಿ ಯಲ್ಲಿ ನೈಜೀರಿಯ, ಐವರಿಕೋಸ್ಟ್ ಸೇರಿದಂತೆ ಕೇರಳ, ತಮಿಳುನಾಡಿನ ಪ್ರತಿಭಾವಂತ ಆಟಗಾರರು ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾರೆ ಎಂದು ನವೀನ್ ಅಜ್ಜಳ್ಳಿ ತಿಳಿಸಿದರು.

ವಿಜೇತ ತಂಡಗಳಿಗೆ ಪ್ರಥಮ ಬಹುಮಾನ 1 ಲಕ್ಷ ರೂ., ದ್ವಿತೀಯ 50ಸಾವಿರ ರೂ.ಗಳ ನಗದು ಹಾಗೂ ಆಕರ್ಷಕ ಟ್ರೋಫಿಗಳನ್ನು ನೀಡಲಾಗುತ್ತದೆ. 16 ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಲಿವೆ ಎಂದು ಆಯೋಜಕರು ಮಾಹಿತಿ ಒದಗಿಸಿದರು.