ಕುಶಾಲನಗರ, ಏ. 4: ಕೂಡಿಗೆಯ ಸೈನಿಕ ಶಾಲೆಯಲ್ಲಿ ವಾರ್ ಮೆಮೋರಿಯಲ್ ಮತ್ತು ವಾಲ್ ಆಫ್ ಹೀರೋಸ್ ಸ್ಮಾರಕದ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಏರ್ ಮಾರ್ಷಲ್ ಭಾರತೀಯ ವಾಯು ಪಡೆಯ ಕಮಾಂಡಿಂಗ್-ಇನ್-ಚೀಫ್ ಟ್ರೈನಿಂಗ್ ಕಮಾಂಡ್, ಆರ್.ಕೆ.ಎಸ್ ಬಧೂರಿಯಾ ಸ್ಮಾರಕ ಲೋಕಾರ್ಪಣೆಗೊಳಿಸಿದರು.

ನಂತರ ಮಾತನಾಡಿದ ಮುಖ್ಯ ಅತಿಥಿಗಳಾದ ಏರ್ ಮಾರ್ಷಲ್ ಆರ್‍ಕೆಎಸ್ ಬಧೂರಿಯ ಸೈನಿಕ ಶಾಲೆಯು ಸುಸಜ್ಜಿತವಾದ ಸೌಲಭ್ಯಗಳನ್ನು ಒಳಗೊಂಡಿದ್ದು, ಈ ಎಲ್ಲಾ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವದರ ಮೂಲಕ ವಿದ್ಯಾರ್ಥಿಗಳು ಏಕತೆ, ಪ್ರಾಮಾಣಿಕತೆ ಮತ್ತು ಧೀಮಂತಿಕೆಯ ಗುಣಗಳನ್ನು ಮೈಗೂಡಿಸಿ ಕೊಳ್ಳಬೇಕೆಂದು ಕರೆ ನೀಡಿದರು. ಜ್ಞಾನಾರ್ಜನೆ ಮಾಡಿಕೊಳ್ಳುವದು ಮಹತ್ವದ ವಿಷಯವಾಗಿದ್ದು ಅದರೊಂದಿಗೆ ಬೌದ್ಧಿಕ ಸ್ಥಿರತೆ ಹಾಗೂ ದೈಹಿಕ ಸದೃಢತೆಯನ್ನು ಕಾಯ್ದುಕೊಳ್ಳುವದು ಸಹ ಮಹತ್ವದ್ದಾಗಿದೆ ಎಂದರು.

ಶಾಲೆಯ ಪ್ರತಿಯೊಬ್ಬ ವಿದ್ಯಾರ್ಥಿಗಳು ತಮ್ಮ ಭವಿಷ್ಯದಲ್ಲಿ ಸೇನೆಗೆ ಸೇರ್ಪಡೆಗೊಳ್ಳಬೇಕೆಂದು ಕಿವಿಮಾತು ಹೇಳಿದರು.

ಭಾರತೀಯ ಸೈನಿಕರು ಯದ್ಧಭೂಮಿಯಲ್ಲಿ ತೋರಿಸಿದ ಅಪ್ರತಿಮ ಶೌರ್ಯವನ್ನು ಮನದಟ್ಟು ಮಾಡಿಕೊಡುವದು ಹಾಗೂ ಹುತಾತ್ಮರಾದ ಅವರೆಲ್ಲರಿಗೂ ಗೌರವವನ್ನು ಸೂಚಿಸುವ ಗುಣವನ್ನು ವಿದ್ಯಾರ್ಥಿಗಳಲ್ಲಿ ವೃದ್ಧಿಸುವ ನಿಟ್ಟಿನಲ್ಲಿ ಶಾಲೆಯಲ್ಲಿ ಸ್ಮಾರಕ ನಿರ್ಮಿಸಲಾಗಿದೆ. ಸ್ಮಾರಕವು 1962ರಲ್ಲಿ ಘಟಿಸಿದ ಇಂಡೋ-ಚೈನಾ ಯುದ್ಧ ಮತ್ತು 1947, 1965 ಹಾಗೂ 1971ರಲ್ಲಿ ಘಟಿಸಿದ ಇಂಡೋ-ಪಾಕ್ ಯುದ್ಧ ಹಾಗೂ 1999ರ ಕಾರ್ಗಿಲ್‍ನಲ್ಲಿ ಘಟಿಸಿದ ಆಪರೇಷನ್ ವಿಜಯ್‍ನಲ್ಲಿ ಅಮರರಾದ ವೀರಯೋಧರ ಸ್ಮರಣೆಯನ್ನು ಎತ್ತಿ ಹಿಡಿಯುವ ಕುರುಹಾಗಿದೆ ಎಂದರು.

ಸ್ಮಾರಕದಲ್ಲಿ 21 ಹುತಾತ್ಮರಾದ ಪರಮವೀರಚಕ್ರ ವಿಜೇತ ವೀರಯೋಧರ ಭಾವಚಿತ್ರಗಳು, ಕಲ್ಲಿನ ಕೆತ್ತನೆ ಮತ್ತು ವೀರಯೋಧರ ಸಂಕೇತ ಹಾಗೂ ಯುದ್ಧ ಭೂಮಿಯಲ್ಲಿ ಹೇಳಿದ ಪ್ರೇರೇಪಣಾ ಮಾತುಗಳನ್ನೊಳಗೊಂಡಿದೆ. ಪ್ರಸ್ತುತ ಸ್ಮಾರಕವು ಯುವಕರಲ್ಲಿ ರಾಷ್ಟ್ರೀಯತೆಯ ಭಾವನೆಯನ್ನು ಮೂಡಿಸುವಂತಿದ್ದು, ಪ್ರತಿಯೊಬ್ಬರಿಗೂ ಭಾರತೀಯ ಸೇನೆಗೆ ಸೇರ್ಪಡೆಗೊಳ್ಳಲು ಪ್ರೇರಣೆ ನೀಡುವಂತಿದೆ ಎಂದರು.

ಶಾಲೆಯ ಅಶ್ವದಳವು ಮುಖ್ಯ ಅತಿಥಿಗಳನ್ನು ಸ್ವಾಗತಿಸಿ, ಪೆರೇಡ್ ಮೈದಾನಕ್ಕೆ ಕರೆದೊಯ್ಯಲಾಯಿತು. ನಂತರ ಶಾಲೆಯ ವಿದ್ಯಾರ್ಥಿಗಳು ಪಥ ಸಂಚಲನದ ಮೂಲಕ ಮುಖ್ಯ ಅತಿಥಿಗಳಿಗೆ ಗೌರವ ವಂದನೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಗೌರವ ಅತಿಥಿಗಳಾಗಿ ಏರ್ ಮಾರ್ಷಲ್ ಕೆ.ಸಿ.ನಂದ ಕಾರ್ಯಪ್ಪ ಪಾಲ್ಗೊಂಡಿದ್ದರು. ಶಾಲೆಯ ಪ್ರಾಂಶುಪಾಲ ಗ್ರೂಪ್ ಕ್ಯಾಪ್ಟನ್ ಆರ್.ಆರ್. ಲಾಲ್, ಉಪಪ್ರಾಂಶುಪಾಲ ಲೆಫ್ಟಿನೆಂಟ್ ಕರ್ನಲ್ ಸೀಮಾ ತ್ರಿಪಾಠಿ, ಆಡಳಿತಾಧಿಕಾರಿ ಸ್ಕ್ವಾಡ್ರನ್ ಲೀಡರ್ ಡಿ. ಮ್ಯಾಥ್ಯು, ಬೋಧಕ, ಬೋಧಕೇತರ ವರ್ಗ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.