ಕೂಡಿಗೆ, ಏ. 4: ಬಾಣಾವರ ಮೀಸಲು ಅರಣ್ಯದಲ್ಲಿ ಕಾಡಾನೆಯೊಂದರ ಹಿಂಭಾಗದ ಎಡಗಾಲು ಗಾಯಗೊಂಡು ಊತವಾಗಿದ್ದನ್ನು ಗಮನಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಸಾಕಾನೆಗಳ ಸಹಾಯದಿಂದ ಆ ಕಾಡಾನೆಯನ್ನು ಹಿಡಿದು ಚಿಕಿತ್ಸೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದರು. ಇಂದು ಕೂಡ ಅರಣ್ಯ ಅಧಿಕಾರಿಗಳು ಕಾಡಾನೆಗೆ ಎರಡು ಸಾಕಾನೆಗಳ ಸಹಕಾರದಿಂದ ನಾಗರಹೊಳೆಯ ವೈದ್ಯಾಧಿಕಾರಿ ಡಾ.ಮುಜಿದ್ ಮತ್ತು ಡಾ.ರಂಜನ್ ಅವರು ಚಿಕಿತ್ಸೆಯನ್ನು ಮುಂದುವರೆಸಿದ್ದಾರೆ.

ಈ ಸಂದರ್ಭ ಸೋಮವಾರಪೇಟೆ ತಾಲೂಕು ಅರಣ್ಯ ಉಪ ಸಂರಕ್ಷಣಾಧಿಕಾರಿ ಚಿಣ್ಣಪ್ಪ, ಸೋಮವಾರಪೇಟೆ ವಲಯ ಅರಣ್ಯಾಧಿಕಾರಿ ಲಕ್ಷ್ಮಿಕಾಂತ್, ಬಾಣಾವರ ಉಪ ವಲಯ ಅರಣ್ಯಾಧಿಕಾರಿ ಮಹದೇವನಾಯಕ್, ಹುದುಗೂರು ಉಪ ವಲಯ ಅರಣ್ಯಾಧಿಕಾರಿ ಸತೀಶ್ ಸೇರಿದಂತೆ ಸಿಬ್ಬಂದಿ ವರ್ಗ ಮತ್ತು ನಾಗರಹೊಳೆಯ ಕ್ಷಿಪ್ರ ಪಡೆಯ ಸಿಬ್ಬಂದಿಗಳು ಇದ್ದರು.