ಮಡಿಕೇರಿ, ಏ.4 : ಮೋದಿ ಹವಾ ದೇಶವ್ಯಾಪಿ ಕಂಡುಬಂದಿರುವದು, ಮಹಿಳಾ ಹಾಗೂ ಯುವ ಮತದಾರರ ಒಲವು ಬಿಜೆಪಿಗಿರುವದರಿಂದಾಗಿ ಈ ಬಾರಿ ಅತ್ಯಧಿಕ ಸ್ಥಾನಗಳೊಂದಿಗೆ ಬಿಜೆಪಿ ಗೆಲವು ಸಾಧಿಸಲಿದೆ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
‘ಶಕ್ತಿ’ಯೊಂದಿಗೆ ಮಾತನಾಡಿದ ರಂಜನ್, ಕೊಡಗು ಮೈಸೂರು ಕ್ಷೇತ್ರದಲ್ಲಿ ಪ್ರತಾಪ್ ಸಿಂಹ ಅತ್ಯಧಿಕ ಅಂತರದ ಗೆಲವು ಸಾಧಿಸಲಿದ್ದಾರೆ. ಈ ಬಾರಿ ಕ್ಷೇತ್ರದಲ್ಲಿ ಯುವಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತಚಲಾಯಿಸಲಿರುವದು, ಮಹಿಳಾ ಮತದಾರರೂ ಮೋದಿ ಬಗ್ಗೆ ಮತ್ತೊಮ್ಮೆ ಒಲವು ಹೊಂದಿರುವದು ಕೂಡ ಬಿಜೆಪಿ ಗೆಲುವಿಗೆ ಸಹಕಾರಿಯಾಗಲಿದೆ ಎಂದರು. ರಾಜ್ಯದಲ್ಲಿ ಬಿಜೆಪಿ 22 ಸ್ಥಾನಗಳನ್ನು ಗಳಿಸಲಿದ್ದು, ಮೈತ್ರಿ ಪಕ್ಷ 4-5 ಸ್ಥಾನಗಳಿಗೆ ತೃಪ್ತಿ ಪಟ್ಟುಕೊಳ್ಳಬೇಕಾಗಿದೆ ಎಂದು ಭವಿಷ್ಯ ನುಡಿದರು. ಮೈತ್ರಿ ಪಕ್ಷಗಳ ನಡುವಿನ ಹೊಂದಾಣಿಕೆ ಕೊರತೆಯ ಜಗಳಗಳು ಜನತೆಯ ನಗೆಪಾಟಲಿಗೆ ಕಾರಣವಾಗಿದೆ ಎಂದೂ ರಂಜನ್ ಹೇಳಿದರು.
ಸಂಸದರಾಗಿ ಪ್ರತಾಪ್ ಸಿಂಹ ಈ ಕ್ಷೇತ್ರಕ್ಕೆ ಸಾಕಷ್ಟು ಅಭಿವೃದ್ದಿ ಯೋಜನೆ ಗಳನ್ನು ಕಾರ್ಯಗತಗೊಳಿಸಿರುವದು ಕೂಡ ಬಿಜೆಪಿ ಗೆಲುವಿಗೆ ಕಾರಣವಾ ಗಲಿದೆ. ಬೇರೆ ಕ್ಷೇತ್ರಗಳಿಗಿಂತ ಕೊಡಗಿನ ಎರಡೂ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗೆ ಅತ್ಯಧಿಕ ಮತಗಳನ್ನು ಗಳಿಸಲು ಜಿಲ್ಲೆಯ ಬಿಜೆಪಿ ಶಾಸಕರು ಕಾರ್ಯಕರ್ತರೊಂದಿಗೆ ಶ್ರಮಿಸುತ್ತಿದ್ದೇವೆ ಎಂದೂ ರಂಜನ್ ತಿಳಿಸಿದರು.
ಇದು ಗ್ರಾಮೀಣ ಮಟ್ಟದ ಕುಡಿಯುವ ನೀರು, ವಿದ್ಯುತ್, ರಸ್ತೆ ಮುಂತಾದ ವಿಚಾರಗಳ ಆಧಾರಿತ ಚುನಾವಣೆಯಾಗಿರದೇ ದೇಶ ಸಂರಕ್ಷಣೆ ನಿಟ್ಟಿನ ರಾಷ್ಟ್ರೀಯ ವಿಚಾರಗಳ ಹಿನೆÀ್ನಲೆಯ ಚುನಾವಣೆಯಾಗಿರುವದ ರಿಂದ; ಭಾರತದ ಸುರಕ್ಷತೆಯನ್ನು ಬೆಂಬಲಿಸುವ ನಿಟ್ಟಿನಲ್ಲಿ ಬಿಜೆಪಿಗೆ ಮತ ನೀಡುವಂತೆ ಮತದಾರರಿಗೆ ಮನವರಿಕೆ ಮಾಡಲಾಗುತ್ತಿದೆ ಎಂದೂ ಶಾಸಕರು ಹೇಳಿದರು.
ಕೊಡಗಿನಲ್ಲಿ ಅಸಮಾಧಾನ ಗೊಂಡಿರುವ ಜೆಡಿಎಸ್ ಮುಖಂಡರನ್ನೂ ಬಿಜೆಪಿ ವಿಶ್ವಾಸಕ್ಕೆ ತೆಗೆದುಕೊಂಡು ರಾಷ್ಟ್ರೀಯತೆ ಬೆಂಬಲಿಸಬೇಕಾದ ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯ ಪರ ಸಹಕಾರ ಕೋರುತ್ತೇವೆ ಎಂದೂ ರಂಜನ್ ಹೇಳಿದರು.
ಮಲತಾಯಿ ಧೋರಣೆ
ಪ್ರಕೃತಿ ವಿಕೋಪಕ್ಕೀಡಾದ ಕೊಡಗಿನತ್ತ ರಾಜ್ಯ ಸರ್ಕಾರ ಮಲತಾಯಿ ಧೋರಣೆ ತಾಳಿದೆ ಎಂದು ದೂರಿದ ಶಾಸಕ ರಂಜನ್, ಮನೆ, ಆಸ್ತಿ, ವಸ್ತುಗಳನ್ನು ಕಳೆದುಕೊಂಡ ಸಂತ್ರಸ್ತರಿಗೆ ಇನ್ನೂ ಸಮರ್ಪಕವಾಗಿ ಪರಿಹಾರ ನೀಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಕೇಂದ್ರ ಸರ್ಕಾರದಿಂದ ನೀಡಲಾದ ಅನುದಾನವನ್ನೂ ರಾಜ್ಯ ಸರ್ಕಾರ ಸಂತ್ರಸ್ತರಿಗೆ ತಲುಪಿಸುವಲ್ಲಿ ವಿಫಲವಾಗಿದೆ. ಮನೆ ಕಳೆದು ಕೊಂಡವರಿಗೆ ಮನೆ ನಿರ್ಮಾಣದ ಕಾರ್ಯ ಕೂಡ ನಿರೀಕ್ಷಿತ ವೇಗದಲ್ಲಿ ಸಾಗುತ್ತಿಲ್ಲ. ಹೀಗಾಗಿ ಮತ್ತೊಮ್ಮೆ ಮಳೆಗಾಲ ಕಾಲಿಡುತ್ತಿರುವ ಈ ದಿನಗಳಲ್ಲಿಯೂ ಸಂತ್ರಸ್ತರಿಗೆ ಮನೆ ನೀಡುವ ನಿಟ್ಟಿನಲ್ಲಿ ಸರ್ಕಾರದಿಂದ ಯಾವದೇ ಖಚಿತ ಭರವಸೆ ದೊರಕಿಲ್ಲ. ಈ ಮಳೆಗಾಲದಲ್ಲಿಯೂ ದುರಂತ ಸಂಭವಿಸುವ ಸಾಧ್ಯತೆ ಯಿದ್ದರೂ ಸರ್ಕಾರ ಮುಂಜಾಗ್ರತಾ ಕ್ರಮ ವಹಿಸಲು ಯಾವದೇ ಸಿದ್ದತೆ ನಡೆಸಿದಂತಿಲ್ಲ ಎಂದು ಟೀಕಿಸಿದರು. ಕೊಡಗಿನ ಜಲಪ್ರಳಯಕ್ಕೆ ಸಂಗ್ರಹಿಸಲಾದ 220 ಕೋಟಿ ರೂ. ಅನುದಾನದ ಪೈಕಿ 100 ಕೋಟಿ ರೂ. ವೆಚ್ಚ ಮಾಡಿದ್ದರೆ ತಲಾ 10 ಲಕ್ಷ ರೂ. ವೆಚ್ಚದಲ್ಲಿ ಈಗಾಗಲೇ 1 ಸಾವಿರ ಮನೆ ನಿರ್ಮಾಣ ಸಾಧ್ಯವಿತ್ತು. ದಾನಿಗಳಿಂದ ಬಂದ ಆರ್ಥಿಕ ನೆರವನ್ನೂ ಕೊಡಗಿಗೆ ವಿನಿಯೋಗಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಯಿತು ಎಂದು ರಂಜನ್ ಟೀಕಾಪ್ರಹಾರ ನಡೆಸಿದರು.
ಕೊಡಗು ಅಭಿವೃದ್ಧಿ ಪ್ರಾಧಿಕಾರ ರಚನೆಯಾಗಿದ್ದರೂ ಈವರೆಗೆ ಕೇವಲ ಒಂದು ಸಭೆ ಮಾತ್ರ ನಡೆದಿದ್ದು, ಸಭೆಯಲ್ಲಿ ಕೈಗೊಂಡ ನಿರ್ಣಯಗಳೂ ಜಾರಿಯಾಗುತ್ತಿಲ್ಲ. ರಾಜ್ಯದ ಸಮ್ಮಿಶ್ರ ಸರ್ಕಾರಕ್ಕೆ ಕೊಡಗೆಂದರೆ ಇಷ್ಟೊಂದು ನಿರ್ಲಕ್ಷ್ಯತೆಯಿದೆ ಎಂಬುದಕ್ಕೆ ಇದೂ ಉದಾಹರಣೆಯಾಗಿದೆ ಎಂದು ಅವರು ಟೀಕಿಸಿದರು. ಪ್ರಸಕ್ತ ಲೋಕ ಸಭಾ ಚುನಾವಣೆ ಬಳಿಕ; ಪ್ರಕೃತಿ ವಿಕೋಪ ಸಂತ್ರಸ್ತರ ಹಕ್ಕಿಗಾಗಿ ಬಿಜೆಪಿ ಸಾರ್ವಜನಿಕರ ಬೆಂಬಲದಿಂದ ತೀವ್ರ ಹೋರಾಟಕ್ಕೆ ಇಳಿಯಲಿದೆ ಎಂದು ಅವರು ಸುಳಿವು ನೀಡಿದರು.