ಮಡಿಕೇರಿ, ಏ. 4: ಲೈನ್ ಮನೆಯಲ್ಲಿ ಇರಿಸಿದ್ದ ಕರಿಮೆಣಸು ಹಾಗೂ ಅಂಗಡಿ ಮಳಿಗೆಯೊಂದ ರಿಂದ ಹಣ ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಡಿಕೇರಿ ಗ್ರಾಮಾಂತರ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ.

ಕಳೆದ ಮಾರ್ಚ್ ತಿಂಗಳಲ್ಲಿ ಮೂರ್ನಾಡು ಗ್ರಾಮದ ಮೂಡೇರ ಅಶೋಕ್ ಅಯ್ಯಪ್ಪ ಅವರ ಲೈನ್‍ಮನೆ ಯಲ್ಲಿರಿಸಿದ್ದ 180 ಕೆ.ಜಿ. ಕರಿಮೆಣಸು ಹಾಗೂ ಮೂರ್ನಾಡುವಿನ ಮೆಟ್ರೋ ಟ್ರೇಡರ್ಸ್ ಅಂಗಡಿ ಮಳಿಗೆಯ ಡ್ರಾಯರ್‍ನಲ್ಲಿದ್ದ ರೂ. 96 ಸಾವಿರ ನಗದು ಕಳವಾಗಿತ್ತು. ಈ ಬಗ್ಗೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಸಂಬಂಧ ಪೊಲೀಸ್ ಅಧೀಕ್ಷಕಿ ಡಾ. ಸುಮನ್ ಡಿ.ಪಿ. ಅವರ ನಿರ್ದೇಶನದ ಮೇರೆಗೆ ಡಿವೈಎಸ್‍ಪಿ ಕೆ.ಎಸ್. ಸುಂದರ್‍ರಾಜ್ ಅವರ ಮಾರ್ಗ ದರ್ಶನದಲ್ಲಿ ತನಿಖಾ ತಂಡವೊಂದನ್ನು ರಚಿಸಲಾಗಿತ್ತು.

ತನಿಖೆ ಮುಂದುವರಿಸಿದ ತಂಡವು ಹೊದ್ದೂರು ಗ್ರಾಮ ನಿವಾಸಿ, ಮೂರ್ನಾಡಿನಲ್ಲಿ ನೆಲೆಸಿರುವ ಶಿವಕುಮಾರ್ (22) ಎಂಬಾತನನ್ನು ಬಂಧಿಸಿದೆ. ವಿಚಾರಣೆ ಸಂದರ್ಭ ಐಷಾರಾಮಿ ಜೀವನ ನಡೆಸುವ ಸಲುವಾಗಿ ಹಾಗೂ ದುಬಾರಿ ಬೆಲೆಯ ಬೈಕ್ ಖರೀದಿಸಬೇಕೆಂದು ಈ ರೀತಿ ಕಳವು ಮಾಡಿರುವದಾಗಿ ಒಪ್ಪಿಕೊಂಡಿ ರುವದಾಗಿ ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಬಂಧಿತನಿಂದ 180 ಕೆ.ಜಿ. ಕರಿಮೆಣಸು ಹಾಗೂ ರೂ. 51 ಸಾವಿರ ನಗದು, ಮೊಬೈಲ್, ಬೆಳ್ಳಿಯ ಚೈನ್ ಸೇರಿದಂತೆ ಒಟ್ಟು ರೂ. 1.11 ಲಕ್ಷ ಮೌಲ್ಯದ ಸ್ವತ್ತನ್ನು ವಶಪಡಿಸಿಕೊಳ್ಳಲಾಗಿದೆ.

ಕಾರ್ಯಾಚರಣೆಯಲ್ಲಿ ಗ್ರಾಮಾಂತರ ವೃತ್ತ ನಿರೀಕ್ಷಕ ಸಿದ್ಧಯ್ಯ, ಉಪ ನಿರೀಕ್ಷಕ ಚೇತನ್, ಪ್ರಬಾರ ಉಪ ನಿರೀಕ್ಷಕ ಶ್ರವಣ್, ಶೇಷಾದ್ರಿ, ಸಿಬ್ಬಂದಿಗಳಾದ ತೀರ್ಥಕುಮಾರ್, ಚಂದ್ರಶೇಖರ್, ಸೋಮಶೇಖರ್, ಸಜನ್, ಕೃಷ್ಣಮೂರ್ತಿ, ಹನೀಫ್, ಜಯಣ್ಣ, ಚಾಲಕರಾದ ಸುನಿಲ್ ಮತ್ತು ಅರುಣ್ ಅವರುಗಳು ಪಾಲ್ಗೊಂಡಿದ್ದರು.