ಭಾಗಮಂಡಲ, ಏ. 4: ಇಡೀ ವಿಶ್ವವೇ ಪರಿಸರವನ್ನು ಉಳಿಸಿ ಕೊಳ್ಳಲು ಹರಸಾಹಸ ಪಡುತ್ತಿದ್ದು ಜಾಗತಿಕ ತಾಪಮಾನ ಹತೋಟಿಗೆ ತರಲು ಸರಕಾರ ಹಾಗೂ ಸರಕಾರೇತರ ಸಂಘ ಸಂಸ್ಥೆಗಳು ಪರಿಶ್ರಮ ಪಡುತ್ತಿರುವ ಈ ಕಾಲಘಟ್ಟದಲ್ಲಿ ಕೊಡಗು ಜಿಲ್ಲೆಯಲ್ಲಿ ವನ್ಯಧಾಮ ಹಾಗೂ ವನ್ಯ ಜೀವಿ ಸಂಕುಲಕ್ಕೆ ನಿರಂತರವಾಗಿ ಧÀಕ್ಕೆಯನ್ನುಂಟುಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲು ಅರಣ್ಯ ಇಲಾಖೆ ಹಿಂದೇಟು ಹಾಕುತ್ತಿರುವದು ದುರದೃಷ್ಟಕರ.ಕೊಡಗು ವೃತ್ತದ ಮಡಿಕೇರಿ ವನ್ಯ ಜೀವಿ ವಿಭಾಗದ ತಲಕಾವೇರಿ ವನ್ಯ ಧಾಮದೊಳಗೆ ಕೇರಳದ ಸಿನಿಮಾ ಚಿತ್ರೀಕರಣ ತಂಡದ ಆಮಿಷಕ್ಕೊಳಗಾಗಿ ರಾಜ್ಯ ಸರಕಾರದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯೊಬ್ಬರು ಕಾನೂನು ಬಾಹಿರವಾಗಿ ಅನುಮತಿ ನೀಡಿ ಚಿತ್ರೀಕರಣಕ್ಕೆ ಅವಕಾಶ ನೀಡಿದ್ದು ಮೊದಲ ಪುಟದಿಂದ) ಇದು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.ಕಳೆದ ಪೆಬ್ರವರಿಯಲ್ಲಿ ಕಾಡ್ಗಿಚ್ಚು ತಡೆಗಟ್ಟುವ ಹಿನ್ನೆಲೆಯಲ್ಲಿ ಮಡಿಕೇರಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಯವರು ಕೊಡಗಿನ ವನ್ಯಧಾಮ ದೊಳಗೆ ಸಾರ್ವಜನಿಕರ ಚಾರಣ ಹಾಗೂ ಇತರ ಪ್ರವೇಶವನ್ನು ನಿರ್ಬಂಧಿಸಿ ಆದೇಶ ಹೊರಡಿಸಿ ದ್ದರೂ ಇವೆಲ್ಲವನ್ನೂ ಗಾಳಿಗೆ ತೂರಿ ಪ್ರಭಾವಿ ಚಿತ್ರೀಕರಣ ತಂಡಕ್ಕೆ ಪ್ರವೇಶಕ್ಕೆ ಅವಕಾಶ ನೀಡಿದ ಇಲಾಖೆಯ ನಡೆ ಸಂಶಯಕ್ಕೆಡೆ ಮಾಡಿದೆ.
ಈ ಭಾಗದಲ್ಲಿ ಇದುವರೆಗೂ ಮಳೆಯಾಗಿಲ್ಲ ಅಲ್ಲದೆ ಸಿನಿಮಾ ಚಿತ್ರೀಕರಣ ಸಂದರ್ಭದಲ್ಲಿ ಇನ್ನೂರು ಜನರ ತಂಡ ಮತ್ತು ದೊಡ್ಡ ದೊಡ್ಡ ಜನರೇಟರ್ ಹಾಗೂ ವಾಹನಗಳ ಓಡಾಟದಿಂದ ವನ್ಯ ಜೀವಿಗಳ ಮೇಲೆ ದುಷ್ಪರಿಣಾಮ ಬೀರುವ ಸಾಧÀ್ಯತೆ ಹೆಚ್ಚು. ತಲಕಾವೇರಿ ದೇವಾಲಯ ದಿಂದ ಕೆಲವೇ ದೂರದ ಭಾಗ ಮಂಡಲ ವಲಯಕ್ಕೆ ಸಂಬಂಧಿಸಿದ ಮೂಲೆಮೊಟ್ಟೆ ಎಂಬಲ್ಲಿ ‘ನಲ್ಪತ್ತಿಒನ್’ ಎಂಬ ಚಲನಚಿತ್ರದ ಚಿತ್ರೀಕರಣ ಕಳೆದ ಎರಡು ಮೂರು ದಿನಗಳಿಂದ ನಡೆಯುತ್ತಿದ್ದು, ಸಾರ್ವಜನಿಕರು ಈ ಬಗ್ಗೆ ಪ್ರಶ್ನಿಸಿದಾಗ ನ್ಯಾಯಾಲಯ ದಿಂದ ಆದೇಶ ಪಡೆದು ವನ್ಯ ಧಾಮದೊಳಗೆ ಚಿತ್ರೀಕರಣ ನಡೆಸುತ್ತಿರುವದಾಗಿ ಉತ್ತರ ಸಿಗುತ್ತಿದೆ. ಆದರೆ ನ್ಯಾಯಾಲಯದ ಯಾವದೇ ಆದೇಶವಿರುವದಿಲ್ಲ ಬದಲಿಗೆ ರಾಜ್ಯದ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಯಿಂದ ಕೊಡಗು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಯಿಂದ ಹಗಲು ಮತ್ತು ರಾತ್ರಿ ಷರತ್ತುಗಳನ್ನು ವಿಧಿಸಿ ನೀಡಿದ ಆದೇಶ ಪ್ರತಿಗಳು ಮಾತ್ರ ‘ಶಕ್ತಿ’ಗೆ ಲಭ್ಯವಾಗಿದೆ. ಈ ರೀತಿ ವನ್ಯಧಾಮದೊಳಗೆ ಪ್ರವೇಶ ಹಾಗೂ ಚಿತ್ರೀಕರಣಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ ಆದ್ದರಿಂದ ಈ ಬಗ್ಗೆ ಸರಕಾರ ಕೂಡಲೇ ಎಚ್ಚೆತ್ತುಕೊಂಡು ಸೂಕ್ತ ರೀತಿಯಲ್ಲಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಂಡು ಮುಂದೆ ಇಂತಹ ಘಟನೆ ನಡೆಯದಂತೆ ಎಚ್ಚರಿಕೆ ವಹಿಸ ಬೇಕಾಗಿದೆ ಎಂದು ಸ್ಥಳೀಯ ಕೆಲವು ಪ್ರಮುಖರು ಆಗ್ರಹಿಸಿದ್ದಾರೆ.