ಮಡಿಕೇರಿ, ಏ. 4: ಕೊಡಗು ಜಿಲ್ಲಾ ಯುವ ಕಾಂಗ್ರೆಸ್‍ನ ಪ್ರಧಾನ ಕಾರ್ಯದರ್ಶಿ ಮುರುಗನ್ ಅವರ ಗಡಿಪಾರಿಗೆ ಆದೇಶ ಮಾಡುವ ಮೂಲಕ ವೀರಾಜಪೇಟೆ ಡಿವೈಎಸ್ಪಿ ಅವರು ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದಾರೆ ಎಂದು ಆರೋಪಿಸಿರುವ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಹನೀಫ್ ಸಂಪಾಜೆ, ಈ ಕ್ರಮದ ವಿರುದ್ಧ ಮಾನವ ಹಕ್ಕು ಆಯೋಗಕ್ಕೆ ದೂರು ನೀಡುವದಾಗಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯ ಹಲವಾರು ಮಂದಿ 307 ಹಾಗೂ 506 ಸೆಕ್ಷನ್‍ಗಳ ಅಡಿಯಲ್ಲಿ ಮೊಕದ್ದಮೆ ಎದುರಿಸುತ್ತಿದ್ದರೂ, ಅಂತಹವರ ವಿರುದ್ಧ ಕ್ರಮ ಕೈಗೊಳ್ಳದೆ, ಕೇವಲ ಒಂದು ಪ್ರಕರಣವಿರುವ ಮುರುಗನ್ ಅವರನ್ನು ಮಾತ್ರ ಉಪ ವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಡಿಸಿ ಗಡಿಪಾರಿಗೆ ಆದೇಶಿಸಿರುವದು ಹಲವು ಸಂಶಯಗಳಿಗೆ ಎಡೆಮಾಡಿ ಕೊಟ್ಟಿದೆ ಎಂದು ಆರೋಪಿದರು. ಮುರುಗನ್ ಭಾಗಿಯಾಗಿದ್ದ ಪ್ರಕರಣದಲ್ಲೇ ಆರೋಪಿಗಳಾಗಿರುವ ಗ್ರಾ.ಪಂ. ಮಾಜಿ ಸದಸ್ಯರೊಬ್ಬರು ಸೇರಿದಂತೆ ಆರು ಮಂದಿಯ ವಿರುದ್ಧವೂ ಮೊಕದ್ದಮೆ ಇದ್ದರೂ, ವೀರಾಜಪೇಟೆ ಡಿವೈಎಸ್‍ಪಿಯವರು ಕೇವಲ ಮುರುಗನ್ ಅವರನ್ನು ಮಾತ್ರ ‘ಟಾರ್ಗೆಟ್’ ಮಾಡಿದ್ದಾರೆ. ಇದನ್ನು ಗಮನಿಸಿದರೆ ಬಿಜೆಪಿ ಮಂದಿಯನ್ನು ರಕ್ಷಿಸಲು ಹೊರಟಿರುವ ಬಗ್ಗೆ ಸಂಶಯ ವ್ಯಕ್ತವಾಗುತ್ತಿದೆ. ಕಾನೂನು ಎಲ್ಲರಿಗೂ ಒಂದೇ ಆಗಿರುವಾಗ ದಲಿತ ಸಮುದಾಯಕ್ಕೆ ಸೇರಿದವರಾಗಿರುವ ಮುರುಗನ್ ಅವರ ವಿರುದ್ಧ ಮಾತ್ರ ಉದ್ದೇಶಪೂರ್ವಕವಾಗಿ ಕ್ರಮ ಕೈಗೊಂಡಿರುವಂತೆ ಕಾಣುತ್ತಿದೆ ಎಂದು ದೂರಿದರು. ಮುರುಗನ್ ಅವರ ವಿರುದ್ಧ ನೀಡಿರುವ ಆದೇಶವು ಮಾನವ ಹಕ್ಕಿನ ಚ್ಯುತಿಯಾಗಿದೆ ಎಂದು ಆರೋಪಿಸಿದ ಹನೀಫ್, ಈ ಬಗ್ಗೆ ಮಾನವ ಹಕ್ಕು ಆಯೋಗಕ್ಕೆ ದೂರು ನೀಡಲಾಗುವದಲ್ಲದೆ, ಡಿವೈಎಸ್‍ಪಿ ಅವರ ಇಬ್ಬಗೆ ನೀತಿಯ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೂ ದೂರು ಸಲ್ಲಿಸಲಾಗುವದು ಎಂದರು. ಜಿಲ್ಲಾ ಚುನಾವಣಾಧಿಕಾರಿಗಳಿಗೂ ದೂರು ನೀಡಿ, ಮುರುಗನ್ ಅವರ ಗಡಿಪಾರಿಗೆ ಸಂಬಂಧಿಸಿದಂತೆ ತನಿಖೆ ನಡೆಸಿ ವೀರಾಜಪೇಟೆ ಡಿವೈಎಸ್‍ಪಿ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಲಾಗುವದು ಎಂದು ಹನೀಫ್ ಸಂಪಾಜೆ ಹೇಳಿದರು.
ಗೋಷ್ಠಿಯಲ್ಲಿ ಯುವ ಕಾಂಗ್ರೆಸ್ ನಗರಾಧ್ಯಕ್ಷ ಸದಾ ಮುದ್ದಪ್ಪ, ಪ್ರಮುಖರಾದ ರಾಹುಲ್ ಮಾರ್ಷಲ್, ವಿವೇಕ್‍ರಾಜ್, ಮನ್ಸೂರ್ ಅಹ್ಮದ್ ಹಾಗೂ ಜಿಯೋ ಉಪಸ್ಥಿತರಿದ್ದರು.