ಗೋಣಿಕೊಪ್ಪ ವರದಿ, ಏ. 4: ಕಾಳುಮೆಣಸು ಬೆಲೆ ಕುಸಿತಕ್ಕೆ ಪರೋಕ್ಷವಾಗಿ ಸಂಸದರು ಕಾರಣವಾಗಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಂಜುನಾಥ್ ಆರೋಪಿಸಿದರು.
ಇಲ್ಲಿನ ನೀಲೇಶ್ವರ ಕಾಂಪ್ಲೆಕ್ಸ್ನಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷದ ಕಚೇರಿ ಉದ್ಘಾಟಿಸಿ ಅವರು ಮಾತನಾಡಿ, ಕಾಳುಮೆಣಸು ಬೆಲೆ ಕುಸಿತಕ್ಕೆ ಪರೋಕ್ಷವಾಗಿ ಸಂಸದರು ಕಾರಣವಾಗಿದ್ದಾರೆ. ಕಳ್ಳ ಮಾರ್ಗವಾಗಿ ದೇಶಕ್ಕೆ ಬರುವ ಉತ್ಪನ್ನಗಳನ್ನು ನಿಯಂತ್ರಿಸುವಲ್ಲಿ ಕೇಂದ್ರ ಸರ್ಕಾರ ಎಡವಿದೆ. ಸ್ಥಳೀಯ ಸಂಸದ ಪ್ರತಾಪ್ ಸಿಂಹ ಕೂಡ ಸ್ಥಳೀಯ ರೈತರ ಹಿತ ಕಾಯುವತ್ತ ಗಮನ ಹರಿಸಿಲ್ಲ ಎಂದರು.
ಕಾಂಗ್ರೆಸ್ ಪಕ್ಷದ ಚುನಾವಣಾ ವೀಕ್ಷಕ ಟಿ.ಎಂ. ಶಾಹಿದ್ ಮಾತನಾಡಿ, ಕೋಮುಗಲಭೆಗಳಲ್ಲಿ ಯುವಕರನ್ನು ಭಾಗವಹಿಸುವಂತೆ ಯುವಜನತೆಯನ್ನು ಬಿಜೆಪಿ ದಾರಿತಪ್ಪಿಸುತ್ತಿದೆ. ಬಿಜೆಪಿ ಕಾರ್ಯಕರ್ತರು ಬೂತ್ ಮಟ್ಟದ ಪ್ರಚಾರದಲ್ಲಿ ಮನೆಗಳಿಗೆ ತೆರಳಿ ಮೋದಿ ಉದ್ಯೋಗಸೃಷ್ಟಿ ಮಾಡಿದ್ದಾರೆ ಎಂದು ಹೇಳುತ್ತಿದ್ದಾರೆ. ಉದ್ಯೋಗ ಸೃಷ್ಟಿ ಯಾವ ದೃಷ್ಟಿಯಲ್ಲಿ ಅಧಿಕವಾಗಿದೆ ಎಂದು ಬಿಜೆಪಿ ಕಾರ್ಯಕರ್ತರು ವಿವರಣೆ ನೀಡಬೇಕು ಎಂದು ಹೇಳಿದರು. ಜೆಡಿಎಸ್ ಮುಖಂಡ ದಯಾ ಚಂಗಪ್ಪ ಮಾತನಾಡಿ, ಬಿಜೆಪಿ ಕಾರ್ಯಕರ್ತರು ಮೈತ್ರಿ ಸರಕಾರದ ಪರ ಮತ ಚಲಾಯಿಸಲು ಒಲವು ಹೊಂದಿರುವ ಜನರನ್ನು ದಾರಿ ತಪ್ಪಿಸುವ ಕಾರ್ಯದಲ್ಲಿ ತೊಡಗಿಸಿ ಕೊಂಡಿದ್ದಾರೆ. ಮೈತ್ರಿ ಸರ್ಕಾರದ ಸಾಧನೆಗಳನ್ನು ಮತದಾರರಿಗೆ ತಲುಪಿಸುವ ಕೆಲಸವನ್ನು ಮೈತ್ರಿ ಪಕ್ಷದ ಕಾರ್ಯಕರ್ತರು ಮಾಡಬೇಕು ಎಂದು ಕರೆ ನೀಡಿದರು.
ಕಾಂಗ್ರೆಸ್ ನಗರ ಅಧ್ಯಕ್ಷ ಕುಲ್ಲಚಂಡ ಗಣಪತಿ, ಕಾಂಗ್ರೆಸ್ ಮುಖಂಡ ಅರುಣ್ ಮಾಚಯ್ಯ, ಜೆಡಿಎಸ್ ಮುಖಂಡ ಮನೆಯಪಂಡ ಬೆಳ್ಯಪ್ಪ, ಜೆಡಿಎಸ್ ವಕ್ತಾರ ಎಂ.ಟಿ. ಕಾರ್ಯಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೀತೀರ ಧರ್ಮಜ, ಪರಿಶಿಷ್ಟ ವರ್ಗಗಳ ಅಧ್ಯಕ್ಷೆ ಪಂಕಜ, ಹಿಂದುಳಿದ ವರ್ಗಗಳ ಅಧ್ಯಕ್ಷ ಸರಾ ಚಂಗಪ್ಪ, ವಕ್ತಾರ ಟಾಟು ಮೊಣ್ಣಪ್ಪ, ಪ್ರಮುಖರುಗಳಾದ ಮೂಕಳೇರ ಕುಶಾಲಪ್ಪ, ಕುಸುಮಾ ಜೋಯಪ್ಪ, ಶ್ರೀಜಾ ಅಚ್ಚುತ್ತನ್, ಆಶಾ ಜೇಮ್ಸ್, ಮೂಕಳೇರ ಆಶಾ ಇದ್ದರು. ಈ ಸಂದರ್ಭ ಇತ್ತೀಚೆಗೆ ನಿಧನರಾದ ಕಾಂಗ್ರೆಸ್ ಮುಖಂಡ ಜಮ್ಮಡ ಕರುಂಬಯ್ಯ ಅವರ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
- ಸುದ್ದಿಪುತ್ರ