ಸೋಮವಾರಪೇಟೆ, ಏ. 4: ಲೋಕಸಭಾ ಚುನಾವಣೆಗೆ ಎರಡು ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳ ನಡುವೆ ಪೈಪೋಟಿ ನಡೆಯುತ್ತಿದೆ. ಸೋಮವಾರಪೇಟೆ ಭಾಗದಲ್ಲಿ ತಮ್ಮ ಪಕ್ಷದ ಅಭ್ಯರ್ಥಿಯ ಗೆಲುವಿಗಾಗಿ ಬಿಜೆಪಿ ಕಾರ್ಯಕರ್ತರು ಮನೆ ಮನೆ ಪ್ರಚಾರ ಕಾರ್ಯ ನಡೆಸುತ್ತಿದ್ದು, ಕಾಂಗ್ರೆಸ್ ಕಾರ್ಯಕರ್ತರು ಇನ್ನೂ ಸಹ ಅಧಿಕೃತ ಪ್ರಚಾರ ಕಾರ್ಯಕ್ಕೆ ಧುಮುಕಿಲ್ಲ.

ರಾಜ್ಯದಲ್ಲಿ ಆಡಳಿತ ನಡೆಸುತ್ತಿ ರುವ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳ ಮೈತ್ರಿ ಅಭ್ಯರ್ಥಿ ವಿಜಯ ಶಂಕರ್ ಅವರು ಚುನಾವಣೆ ಘೋಷಣೆಯಾದ ನಂತರ ಒಂದು ಬಾರಿಯೂ ಸೋಮವಾರಪೇಟೆ ವ್ಯಾಪ್ತಿಗೆ ಭೇಟಿ ನೀಡಿಲ್ಲ. ಮೈತ್ರಿ ಪಕ್ಷದ ಪ್ರಮುಖ ನಾಯಕ, ಜೆಡಿಎಸ್‍ನ ಮುಖಂಡ ಬಿ.ಎ. ಜೀವಿಜಯ ಅವರೂ ಸಹ ಚುನಾವಣಾ ಅಖಾಡಕ್ಕೆ ಇನ್ನೂ ಇಳಿದಿಲ್ಲ.

ಜೆಡಿಎಸ್ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ನಡೆದ ನಂತರ ಪಕ್ಷದ ವರಿಷ್ಠ ರೊಂದಿಗೆ ಮುನಿಸಿಕೊಂಡಿರುವಂತೆ ಕಂಡುಬರುತ್ತಿರುವ ಜೀವಿಜಯ ಮತ್ತು ಬೆಂಗಲಿಗರು ಲೋಕಸಭಾ ಚುನಾವಣಾ ಹೊಸ್ತಿಲಿನಲ್ಲಿಯೂ ಅಖಾಡಕ್ಕೆ ಇಳಿಯದಿರುವದು ಕಾಂಗ್ರೆಸ್ ಪಕ್ಷದ ಆತಂಕಕ್ಕೆ ಕಾರಣವಾಗಿದೆ. ಇಲ್ಲಿನ ಕೊಡವ ಸಮಾಜದಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಕಾರ್ಯಕರ್ತರು ಮತ್ತು ಮುಖಂಡರ ಸಭೆ, ಮಾನಸ ಸಭಾಂಗಣದಲ್ಲಿ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರ ಸಭೆ ನಡೆದಿರುವದನ್ನು ಹೊರತು ಪಡಿಸಿದರೆ ಬೇರಿನ್ಯಾವ ಚಟುವಟಿಕೆ ಗಳೂ ನಡೆಯುತ್ತಿಲ್ಲ ಎಂದು ಕಾಂಗ್ರೆಸ್ ಕಾರ್ಯಕರ್ತರೇ ಹೇಳುತ್ತಿದ್ದಾರೆ. ಚುನಾವಣೆ ಘೋಷಣೆಯಾದ ನಂತರ ಏರ್ಪಟ್ಟ ಮೊಟ್ಟಮೊದಲ ಸಭೆಯಲ್ಲಿ ಅಭ್ಯರ್ಥಿ ವಿಜಯ ಶಂಕರ್ ಅವರ ಗೈರು ಕಾರ್ಯಕರ್ತರಲ್ಲಿ ನಿರಾಸೆ ಮೂಡಿಸಿದೆ. ಇನ್ನು ಈ ಭಾಗದ ಜೆಡಿಎಸ್ ಪಕ್ಷದ ಕಾರ್ಯಕರ್ತರು ಲೋಕಸಭಾ ಚುನಾವಣೆಗೂ ತಮಗೂ ಸಂಬಂಧವೇ ಇಲ್ಲ ಎನ್ನುವಂತೆ ಇದ್ದಾರೆ. ಚುನಾವಣೆ ಘೋಷಣೆ ಯಾದ ನಂತರ ಈವರೆಗೂ ಪಕ್ಷದಿಂದ ಯಾವದೇ ಸಭೆ ನಡೆದಿಲ್ಲ. ಇದು ಮೈತ್ರಿ ಪಕ್ಷದ ಅಭ್ಯರ್ಥಿಯ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು ಎಂಬ ಬಗ್ಗೆ ಅಲ್ಲಲ್ಲಿ ಚರ್ಚೆಗಳು ನಡೆಯುತ್ತಲೇ ಇವೆ.

ಬಿಜೆಪಿ ಅಭ್ಯರ್ಥಿಯಾಗಿರುವ ಪ್ರತಾಪ್‍ಸಿಂಹ ಅವರು ಸ್ಥಳೀಯ ಶಾಸಕರು, ಪಕ್ಷದ ಮುಖಂಡರೊಂದಿಗೆ ಬಹುತೇಕ ಎಲ್ಲಾ ಪಂಚಾಯಿತಿ ಗಳಲ್ಲಿರುವ ಪಕ್ಷದ ಕಾರ್ಯಕರ್ತರನ್ನು ಭೇಟಿ ಮಾಡಿದ್ದಾರೆ. ಎರಡು-ಮೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾರ್ಯಕರ್ತರನ್ನು ಒಂದೆಡೆ ಸೇರಿಸಿ ಸಭೆ ನಡೆಸುವ ಮೂಲಕ ಚುನಾವಣಾ ಪ್ರಚಾರ ಕಣಕ್ಕೆ ಇಳಿಸಿದ್ದಾರೆ.

ಪರಿಣಾಮ ಬಿಜೆಪಿ ಕಾರ್ಯ ಕರ್ತರು ತಮ್ಮ ಬೂತ್ ವ್ಯಾಪ್ತಿಯಲ್ಲಿ ಈಗಾಗಲೇ ಸಭೆಗಳನ್ನು ನಡೆಸುತ್ತಿದ್ದು, ಮನೆ ಮನೆ ಪ್ರಚಾರಕ್ಕೆ ಮುಂದಾಗಿ ದ್ದಾರೆ. ಸ್ಥಳೀಯ ನಾಯಕರುಗಳು ನರೇಂದ್ರ ಮೋದಿ ಸರ್ಕಾರದ 5 ವರ್ಷಗಳ ಆಳ್ವಿಕೆಯ ಮಾಹಿತಿಯನ್ನು ಮನೆ ಮನೆಗೆ ಕೊಂಡೊಯ್ಯುವ ಮೂಲಕ ಪ್ರಚಾರ ನಡೆಸುತ್ತಿದ್ದಾರೆ.

ಬಿಜೆಪಿ ಪರ ಪ್ರಚಾರ: ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಮಡಿಕೇರಿ ಕ್ಷೇತ್ರದ ಅಭ್ಯರ್ಥಿಯಾಗಿದ್ದ ಅಪ್ಪಚ್ಚು ರಂಜನ್ ಅವರನ್ನು ವಿರೋಧಿಸಿದ್ದ, ವಿವಿಧ ಹಿಂದೂಪರ ಸಂಘಟನೆಗಳಲ್ಲಿ ಸಕ್ರಿಯರಾಗಿರುವ ಕೆಲವರು ಈ ಬಾರಿಯ ಲೋಕಸಭಾ ಚುನಾವಣೆ ಯಲ್ಲಿ ಪ್ರಚಾರಕ್ಕೆ ಇಳಿದಿದ್ದು, ಪ್ರತಾಪ್ ಸಿಂಹ ಪರ ಪ್ರಚಾರ ಕಾರ್ಯದಲ್ಲಿ ಚುರುಕಾಗಿದ್ದಾರೆ. ಎಂಎಲ್‍ಎ ಚುನಾವಣೆಯಲ್ಲಿ ಅಪ್ಪಚ್ಚು ರಂಜನ್ ಅವರನ್ನು ವಿರೋಧಿಸಿ, ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಲೇ ಬೇಕೆಂದು ಪಣತೊಟ್ಟಿದ್ದ ಈ ಗುಂಪು ಇದೀಗ ಬಿಜೆಪಿ ಸ್ಥಳೀಯ ಮುಖಂಡ ರನ್ನು ಬದಿಗಿಟ್ಟು ಪ್ರತ್ಯೇಕವಾಗಿ ಮೋದಿ ಪರ ಪ್ರಚಾರ ಕಾರ್ಯದಲ್ಲಿ ತೊಡಗಿರುವದು ಬಿಜೆಪಿ ಪಾಲಿಗೆ ಸಮಾಧಾನ ತಂದಿದೆ. ಆರ್‍ಎಸ್‍ಎಸ್ ಸೇರಿದಂತೆ ಪರಿವಾರ ಸಂಘಟನೆಗಳ ಮಾರ್ಗ ದರ್ಶನದಲ್ಲಿ ನಡೆಯುತ್ತಿರುವ ಸಮರ್ಥ ಭಾರತ ಎಂಬ ನಾಮಧೇಯದಡಿ ಮುದ್ರಿತವಾಗಿರುವ ಕರಪತ್ರಗಳನ್ನು ಮನೆಮನೆಗೂ ತಲಪಿಸುವ ಮೂಲಕ ಮತ್ತೊಮ್ಮೆ ಮೋದಿ ನೇತೃತ್ವದ ಸರ್ಕಾರ ರಚನೆಗೆ ಅವಕಾಶ ನೀಡುವಂತೆ ಮನವಿ ಮಾಡುತ್ತಿದ್ದಾರೆ.

ಕರಪತ್ರದಲ್ಲಿ ಬಿಜೆಪಿ ಪಕ್ಷದ ಚಿಹ್ನೆ, ಹೆಸರನ್ನು ಉಲ್ಲೇಖಿಸದೇ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಸಾಧನೆ ಗಳ ಬಗ್ಗೆ ಜನಜಾಗೃತಿ ಮೂಡಿಸ ಲಾಗುತ್ತಿದೆ. ದೇಶಕ್ಕಾಗಿ ಮೋದಿ ಅವರು ಅವಿರತ ಶ್ರಮಿಸು ತ್ತಿದ್ದು, ಮತ್ತೊಮ್ಮೆ ಪ್ರಧಾನಿಯಾಗ ಬೇಕಾದರೆ ಸ್ಥಳೀಯ ಕ್ಷೇತ್ರದಲ್ಲೂ ಅಭ್ಯರ್ಥಿ ಗೆಲ್ಲಬೇಕು. ಈ ಹಿನ್ನೆಲೆ ಜನಜಾಗೃತಿ ಅಭಿಯಾನದ ಮೂಲಕ ಮತದಾರರಲ್ಲಿ ಜಾಗೃತಿ ಮೂಡಿಸ ಲಾಗುತ್ತಿದೆ ಎಂದು ಕಾರ್ಯಕರ್ತ ರೋರ್ವರು ತಿಳಿಸಿದ್ದಾರೆ.

- ವಿಜಯ್