ಕೂಡಿಗೆ, ಏ. 3: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಅಭಿವೃದ್ಧಿ ಪರ ಜನಹಿತ ಕಾರ್ಯಕ್ರಮಗಳ ಬಗ್ಗೆ ಜನರಿಗೆ ತಿಳಿಸುವ ಮತ್ತು ಭಾರತೀಯ ಜನತಾ ಪಕ್ಷದ ಜನಪರ ಯೋಜನೆ ಗಳ ಸಂದೇಶವನ್ನು ಗ್ರಾಮಾಂತರ ಪ್ರದೇಶದ ಜನರಿಗೆ ತಿಳಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಮುಂದಿನ ದಿನಗಳಲ್ಲಿ ಗ್ರಾಮಾಂತರ ಪ್ರದೇಶದ ಬೂತ್ ಮಟ್ಟದ ಸದಸ್ಯರೊಂದಿಗೆ ಹಾಗೂ ಗ್ರಾಮಸ್ಥರ ಸಮಸ್ಯೆಗಳಿಗೆ ನಿರಂತರವಾಗಿ ಸ್ಪಂದಿಸುವ ಕಾರ್ಯಕ್ರಮವನ್ನು ಮಾಡುವದಾಗಿ ಬಿ.ಜೆ.ಪಿ. ಲೋಕಸಭಾ ಅಭ್ಯರ್ಥಿ ಪ್ರತಾಪ್ಸಿಂಹ ಹೇಳಿದರು.
ಹೆಬ್ಬಾಲೆಯ ಶ್ರೀ ಬನಶಂಕರಿ ದೇವಾಲಯದ ಮೈದಾನದಲ್ಲಿ ನಡೆದ ಹೆಬ್ಬಾಲೆ, ತೊರೆನೂರು, ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರ ಸಭೆ ಹಾಗೂ ಚುನಾವಣಾ ಪ್ರಚಾರದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಈಗಾಗಲೇ ಕೇಂದ್ರ ಸರ್ಕಾರದ ಅನೇಕ ಯೋಜನೆಗಳು ಕೊಡಗು ಮತ್ತು ಮೈಸೂರು ಕ್ಷೇತ್ರಗಳಲ್ಲಿ ನಡೆದಿವೆ ಎಂದರು.
ಮಡಿಕೇರಿ ಕ್ಷೇತ್ರದ ಶಾಸಕರ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ, ಕೇಂದ್ರ ಸರ್ಕಾರದ ನಿಲುವು ಮತ್ತು ಸ್ಪಷ್ಟತೆ ಪ್ರಪಂಚಕ್ಕೆ ಮಾದರಿಯಾಗಿದೆ ಎಂದರು. ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಬಿ. ಭಾರತೀಶ್ ಮಾತನಾಡಿದರು. ಹೆಬ್ಬಾಲೆ ಕ್ಷೇತ್ರದ ಜಿ.ಪಂ. ಸದಸ್ಯ ಹೆಚ್.ಆರ್. ಶ್ರೀನಿವಾಸ್, ಸೋಮವಾರಪೇಟೆ ತಾಲೂಕು ಪ್ರಧಾನ ಕಾರ್ಯ ದರ್ಶಿ ಕೆ. ವರದ, ತೊರೆನೂರು ಸಹಕಾರ ಸಂಘದ ನಿರ್ದೇಶಕ ಟಿ.ಕೆ. ಪಾಂಡುರಂಗ, ಕುಶಾಲ ನಗರ ಎ.ಪಿ.ಸಿ.ಎಂ.ಎಸ್. ನಿರ್ದೇಶಕ ಜಗದೀಶ್, ಸೋಮ ವಾರಪೇಟೆ ತಾ.ಪಂ. ಮಾಜಿ ಅಧ್ಯಕ್ಷೆ ಜ್ಯೋತಿ, ಹೆಬ್ಬಾಲೆ ಗ್ರಾ.ಪಂ. ಉಪಾಧ್ಯಕ್ಷೆ ಪ್ರಮೀಳ ಹಾಗೂ ಇತರರು ಇದ್ದರು.