ವೀರಾಜಪೇಟೆ, ಏ. 2: ಬೇಟೋಳಿ ಗ್ರಾಮ ಪಂಚಾಯಿತಿಗೆ ಒಳಪಡುವ ರಾಮನಗರದಿಂದ ಗುಂಡಿಗೆರೆಗೆ ಸಂಪರ್ಕ ಕಲ್ಪಿಸುವ ರಸ್ತೆಯು ತೀರಾ ಹದಗೆಟ್ಟಿದ್ದು ಶೋಚನೀಯ ಸ್ಥಿತಿಯಲ್ಲಿದೆ.
ವಿಧಾನಸಭಾ ಚುನಾವಣೆ ಕಳೆದು ಇದೀಗ ಲೋಕಸಭಾ ಚುನಾವಣೆಗೆ ದಿನಾಂಕ ನಿಗದಿ ಯಾಗಿದ್ದರೂ ಕಳೆದ 6 ವರ್ಷ ಗಳಿಂದ ಈ ರಸ್ತೆಗೆ ಕಾಯಕಲ್ಪ ದೊರೆತಿಲ್ಲ, ಯಾವದೇ ಜನಪ್ರತಿನಿಧಿಗಳು ಈ ರಸ್ತೆ ಬಗ್ಗೆ ಗಮನಹರಿಸುತ್ತಿಲ್ಲ. ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯಕ್ಕೆ ಈ ರಸ್ತೆ ತುತ್ತಾಗಿದ್ದು, ರಸ್ತೆಯನ್ನು ಶಾಪಗ್ರಸ್ಥ ರಸ್ತೆಯೆಂದೇ ಕರೆಯಬಹುದಾಗಿದೆ. ಕೊಟ್ಟೋಳಿ ಗ್ರಾಮಕ್ಕೂ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು ಪ್ರತಿದಿನ ಈ ರಸ್ತೆಯಲ್ಲಿ ಹಲವಾರು ವಾಹನಗಳು ಸಂಚರಿಸುತ್ತವೆ. ಮಾತ್ರವಲ್ಲದೆ ಈ ಪ್ರದೇಶದಲ್ಲಿ ಮುನ್ನೂರಕ್ಕೂ ಅಧಿಕ ಮನೆಗಳಿದ್ದು ಜನಸಂಖ್ಯೆಯೂ ಅಧಿಕವಾಗಿದೆ.
ರಸ್ತೆಯ ಸ್ಥಿತಿಯು ತುಂಬಾ ಹದಗೆಟ್ಟಿದ್ದು ಸಂಚಾರಕ್ಕೆ ತೊಂದರೆಯುಂಟಾಗಿದೆ. ಇನ್ನೂ ಮಳೆಗಾಲ ಪ್ರಾರಂಭವಾದರೆ ರಸ್ತೆ ಸಂಚಾರ ಸಂಕಷ್ಟವಾಗಲಿದೆ. ಸಂಬಂಧ ಪಟ್ಟವರು ಇದರ ಬಗ್ಗೆ ಗಮನಹರಿಸಬೇಕು ಎಂದು ಮಾಜಿ ಸೈನಿಕ ಬಿ.ಎಸ್. ಬಾಲಕೃಷ್ಣ ಮಾಹಿತಿ ನೀಡುತ್ತಾರೆ.
ಗ್ರಾಮಸ್ಥರು ಅನೇಕ ಬಾರಿ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಯಾವದೇ ಪ್ರಯೋಜನವಾಗಿಲ್ಲ. ಸ್ಥಳೀಯ ಗ್ರಾಮ ಪಂಚಾಯಿತಿ, ತಾಲೂಕು ಮತ್ತು ಜಿಲ್ಲಾ ಪಂಚಾಯಿತಿಯವರೂ ಸಮಸ್ಯೆಯತ್ತ ಗಮನಹರಿಸಿಲ್ಲ. ಜನಪ್ರತಿನಿಧಿಗಳು ರಾಜಕೀಯ ಮಾಡುವದರಲ್ಲೇ ನಿರತರಾಗಿದ್ದಾರೆ ಎಂಬದು ಇಲ್ಲಿನ ಗ್ರಾಮಸ್ಥರ ಅಭಿಪ್ರಾಯವಾಗಿದೆ. ಸ್ಥಳೀಯ ಶಾಸಕರ ಮತ್ತು ಸಂಸದರ ಅನುದಾನವು ಈ ರಸ್ತೆಗೆ ಬಂದಿರುವದಿಲ್ಲ. ವೀರಾಜಪೇಟೆಯಲ್ಲಿ ಹಲವಾರು ರಸ್ತೆಗಳು ಪ್ರಗತಿ ಕಂಡರೂ ಈ ಒಂದು ರಸ್ತೆ ಮಾತ್ರ ತೀರಾ ಮಲತಾಯಿ ಧೊರಣೆ ಅನುಭವಿಸುವಂತಾಗಿದೆ.
ಈ ರಸ್ತೆಯು ಸಮಸ್ಯೆಗಳ ಆಗರವಾಗಿದೆ, ಯಾರೂ ಇತ್ತ ಗಮನ ಹರಿಸುತ್ತಿಲ್ಲ. ಬೇರೆ ರಸ್ತೆಗಳನ್ನು ನೋಡಿ ಈ ರಸ್ತೆಯನ್ನು ನೋಡುವಾಗ ಮರುಕ ಹುಟ್ಟುತ್ತದೆ. ನಮಗೆ ಶಾಲೆಗೆ ಹೋಗಲು ತೊಂದರೆಯಾಗುತ್ತಿದೆ ಮಳೆಗಾಲದ ಪರಿಸ್ಥಿತಿ ನೆನೆಸಿಕೊಂಡರೆ ಭಯ ವಾಗುತ್ತಿದೆ ಎಂದು ವಿದ್ಯಾರ್ಥಿಗಳು ಅಳಲನ್ನು ತೋಡಿಕೊಳ್ಳುತ್ತಾರೆ.
ಸಮೀಪದ ವೀರಾಜಪೇಟೆಗೆ ಇಲ್ಲಿನ ವಿದ್ಯಾರ್ಥಿಗಳು ವಿದ್ಯಾರ್ಜನೆಗೆ ಹೋಗುತ್ತಿದ್ದಾರೆ. ಪ್ರತಿದಿನ ಶಾಲಾ ವಾಹನವು ಇದೆ ರಸ್ತೆಯಲ್ಲಿ ಸಂಚರಿಸುತ್ತಿದ್ದು, ಅವರಿಗೂ ಸಮಸ್ಯೆಯಾಗಿದೆ. ವಾಹನ ಚಾಲಕರು ಈ ರಸ್ತೆಯಲ್ಲಿ ಓಡಾಡಲು ಹಿಂದೇಟು ಹಾಕುತ್ತಿದ್ದು ಇಲ್ಲಿನ ನಾಗರಿಕರಿಗೆ ಬಹಳ ಪ್ರಯಾಸವಾಗಿದೆ.
ಇದುವರೆಗೆ ಗ್ರಾಮಸ್ಥರು ರಸ್ತೆಗೆ ಕಾಯಕಲ್ಪ ಕಲ್ಪಿಸಲು ಹಲವು ಬಾರಿ ಮನವಿಯನ್ನು ಸಲ್ಲಿಸಿ ಕಾದು ಕಂಗಾಲಾಗಿದ್ದಾರೆ. ಇನ್ನಾದರೂ ಜನಪ್ರತಿನಿಧಿಗಳು ಈ ರಸ್ತೆಯತ್ತ ಗಮನಹರಿಸಲಿ ಎಂಬದು ಗ್ರಾಮಸ್ಥರ ಆಗ್ರಹವಾಗಿದೆ. ಜನಪ್ರತಿನಿಧಿಗಳು ಧರ್ಮ, ರಾಜ ಕೀಯ, ಪಕ್ಷವನ್ನು ಪರಿಗಣಿಸದೆ ರಸ್ತೆ ಅಭಿವೃದ್ಧಿಗೆ ಶ್ರಮಿಸಬೇಕಿದೆ.
- ರಜಿತ ಕಾರ್ಯಪ್ಪ