ಸಿದ್ದಾಪುರ, ಏ. 3: ಕಳೆದ ಕೆಲವು ತಿಂಗಳುಗಳಿಂದ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ನಾಪತ್ತೆಯಾದ ಕಾಡಾನೆಗಳು ಇದೀಗ ಮತ್ತೊಮ್ಮೆ ಕಾಫಿ ತೋಟಗಳಲ್ಲಿ ಪ್ರತ್ಯಕ್ಷಗೊಂಡಿವೆ. ಕಾಫಿ ತೋಟಗಳಲ್ಲಿ ಬೀಡು ಬಿಟ್ಟಿದ್ದ ಕಾಡಾನೆಗಳ ಹಿಂಡುಗಳು ಕಳೆದ 2 ತಿಂಗಳಿನಿಂದ ನಾಪತ್ತೆ ಆಗಿದ್ದವು. ಇದೀಗ ಕಳೆದ ಎರಡು ವಾರಗಳಿಂದ ಸಿದ್ದಾಪುರದ ಗುಹ್ಯ ,ಕರಡಿಗೋಡು, ಚೆಟ್ಟಳ್ಳಿ, ಹೊಸೂರು, ಹಾಗೂ ಬೆಟ್ಟಗೇರಿ ಗ್ರಾಮಗಳ ಕಾಫಿ ತೋಟಗಳಲ್ಲಿ ಕಂಡು ಬಂದಿದ್ದು ಆತಂಕ ಸೃಷ್ಟಿಯಾಗಿದೆ.
ಕಾಫಿ ತೋಟಗಳಲ್ಲಿ ಬೀಡು ಬಿಟ್ಟಿದ್ದ ಕಾಡಾನೆಗಳ ಹಾವಳಿ ಯಿಂದಾಗಿ ಕಾಫಿ ತೋಟದ ಮಾಲೀಕರು ಹಾಗೂ ಕಾರ್ಮಿಕರು ಭಯ ಪಡುತ್ತಿದ್ದಾರೆ. ತೋಟದ ಮಾಲೀಕರು ಕಾಫಿ ತೋಟಗಳಲ್ಲಿ ಕಾಡಾನೆಗಳಿರುವ (ಮೊದಲ ಪುಟದಿಂದ) ಬಗ್ಗೆ ಅರಣ್ಯ ಇಲಾಖಾಧಿಕಾರಿಗಳಿಗೆ ಮಾಹಿತಿ ನೀಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖಾಧಿಕಾರಿಗಳು ಹಾಗೂ ಆರ್.ಆರ್.ಟಿ. ತಂಡ ಸೇರಿ ತೋಟಗಳಲ್ಲಿ ಬೀಡುಬಿಟ್ಟಿದ್ದ ಕಾಡಾನೆ ಗಳನ್ನು ಅರಣ್ಯಕ್ಕೆ ಅಟ್ಟುತ್ತಿದ್ದರು. ಆದರೆ ಇದೀಗ ಕಾಡಾನೆಗಳು ಮರಳಿ ಕಾಫಿ ತೋಟಗಳಿಗೆ ಲಗ್ಗೆ ಇಟ್ಟಿವೆ. ಇದರಿಂದ ಕಾರ್ಮಿಕರು ಹಾಗೂ ಸಾರ್ವಜನಿಕ ರಲ್ಲಿ ಭಯದ ವಾತಾವರಣ ಮೂಡಿದೆ. ಮರಿಯಾನೆ ಸೇರಿದಂತೆ 15ಕ್ಕೂ ಅಧಿಕ ಕಾಡಾನೆಗಳು ಗುಹ್ಯ ಹಾಗೂ ಕರಡಿಗೋಡು ಗ್ರಾಮಗಳ ವ್ಯಾಪ್ತಿಯಲ್ಲಿ ಕಂಡು ಬಂದಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಅರಣ್ಯ ಪ್ರದೇಶದೊಳಗೆ ಕಾಡಾನೆಗಳಿಗೆ ಬೇಕಾದ ಆಹಾರ ಇಲ್ಲದ ಹಿನ್ನೆಲೆಯಲ್ಲಿ ಆಹಾರ ಹಾಗೂ ನೀರನ್ನು ಅರಸಿಕೊಂಡು ನಾಡಿಗೆ ಬರುತ್ತಿದೆ. ಕೆಲವು ಕಾಡಾನೆಗಳು ತೋಟದೊಳಗೆ ಮರಿ ಹಾಕಿದ್ದು, ಅರಣ್ಯ ಕಾಣದ ಕಾಡಾನೆಗಳ ಮರಿಗಳು ತೋಟದಲ್ಲೇ ವಾಸ್ತವ್ಯ ಹೂಡುತ್ತಿವೆ. ಕಳೆದ ಕೆಲವು ತಿಂಗಳ ಹಿಂದೆ ಮಾಲ್ದಾರೆ ಸಮೀಪದಲ್ಲಿ 20ಕ್ಕೂ ಅಧಿಕ ಕಾಡಾನೆಗಳ ಹಿಂಡು ಸಾರ್ವಜನಿಕ ರಸ್ತೆಯಲ್ಲೇ ಅಡ್ಡಲಾಗಿ ತೆರಳಿದ್ದವು. ಕಾಫಿ ತೋಟಗಳಲ್ಲಿ ಕಾಡಾನೆಗಳು ಬೀಡುಬಿಟ್ಟಿರುವ ಹಿನ್ನೆಲೆಯಲ್ಲಿ ಕಾರ್ಮಿಕರಿಗೆ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ತಮ್ಮ ಜೀವವನ್ನು ಕೈಯಲ್ಲೇ ಹಿಡಿದುಕೊಂಡು ಕೆಲಸ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ
ಹಿಡಿಯಲು ವಿಳಂಬವೇ?
ಕಳೆದ 1 ವರ್ಷಗಳ ಹಿಂದೆ ರಾಜ್ಯದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಉಪಟಳವನ್ನು ನೀಡುವ 2 ಕಾಡಾನೆಗಳನ್ನು ಹಿಡಿಯುವದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದರು. ಆದರೆ ಈವರೆಗೂ ಅರಣ್ಯ ಇಲಾಖಾಧಿಕಾರಿಗಳು ಕಾರ್ಯಾಚರಣೆ ನಡೆಸಲಿಲ್ಲ. ತೋಟಗಳಲ್ಲಿ ಹಲಸಿನ ಕಾಯಿಗಳನ್ನು ತಿನ್ನಲು ಬರುತ್ತಿದ್ದು, ಅರಣ್ಯ ಇಲಾಖೆಯು ಹಲವಾರು ಯೋಜನೆಗಳನ್ನು ಜಾರಿಗೆ ತಂದರೂ ಕೂಡ ಸಮಸ್ಯೆಗಳು ಬಗೆಹರಿದಿಲ್ಲ. ಕೂಡಲೇ ಶಾಶ್ವತ ಯೋಜನೆಯನ್ನು ರೂಪಿಸಬೇಕೆಂದು ಗ್ರಾಮಸ್ಥರು ಸರಕಾರ ಹಾಗೂ ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.
ಕಳೆದ ಒಂದು ವಾರಗಳಿಂದ ಸಿದ್ದಾಪುರದ ಬೀಟಿಕಾಡು ಕಾಫಿ ತೋಟದೊಳಗೆ ಮರಿಯಾನೆ ಸೇರಿದಂತೆ 12ಕ್ಕೂ ಅಧಿಕ ಕಾಡಾನೆಗಳು ಬೀಡು ಬಿಟ್ಟಿದ್ದು ಕಾರ್ಮಿಕರಿಗೆ ಭಯದಿಂದಲೇ ಕೆಲಸ ಮಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬೀಟಿಕಾಡು ತೋಟದ ಕಾರ್ಮಿಕ ನಾರಾಯಣ ತಿಳಿಸಿದ್ದಾರೆ. ಸಿದ್ದಾಪುರ-ಮೈಸೂರು ರಸ್ತೆಯಲ್ಲಿರುವ ಸ್ವರ್ಣಗಿರಿ ಕಾಫಿ ತೋಟದೊಳಗೆ ಕಾಡಾನೆಗಳ ಹಿಂಡು ದಾಂಧಲೆ ನಡೆಸಿದ ಪರಿಣಾಮ ತೋಟ ನಿರ್ವಹಣೆ ಮಾಡುವದೇ ಕಷ್ಟವಾಗಿದೆ ಎಂದು ತೋಟದ ಮಾಲೀಕ ಅರ್ಜುನ್ ತಿಮ್ಮಯ್ಯ ಹೇಳುತ್ತಾರೆ.
ಇದೀಗ ಸುಡು ಬಿಸಿಲಿನ ತಾಪದಿಂದಾಗಿ ಕಾಡಾನೆಗಳು ನೀರಿಗಾಗಿ ಖಾಸಗಿ ತೋಟಗಳ ಕೆರೆಗಳಿಗೆ ತೆರಳುತ್ತಿವೆ. ಇತ್ತೀಚೆಗೆ ಹೊಸೂರು ಬಳಿ ಕಾಡಾನೆಗಳ ಹಿಂಡಿನ ಪೈಕಿ ನೀರು ಕುಡಿಯಲು ತೆರಳಿದ ಕಾಡಾನೆಯೊಂದು ಕಾಲು ಜಾರಿ ಕೆರೆಯಲ್ಲಿ ಮೃತಪಟ್ಟ ಘಟನೆಯೂ ನಡೆದಿತ್ತು. ಆನೆ-ಮಾನವ ಸಂಘರ್ಷ ಕಳೆದ ಸುಮಾರು ವರ್ಷಗಳಿಂದ ಇದ್ದರೂ ಕಾಡಾನೆಗಳ ಹಾವಳಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರಕಾರ ಹಾಗೂ ಅರಣ್ಯ ಇಲಾಖೆಯು ಶಾಶ್ವತ ಯೋಜನೆ ಯನ್ನು ಕೈಗೊಳ್ಳದೆ ಇರುವದು ಬೆಳೆಗಾರರಿಗೆ ಹಾಗೂ ಕಾರ್ಮಿಕರಿಗೆ ಸಮಸ್ಯೆಯಾಗಿದೆ. ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕು ವ್ಯಾಪ್ತಿಯಲ್ಲಿ ಹಾಗೂ ನಾಪೋಕ್ಲು ಸೇರಿದಂತೆ ಜಿಲ್ಲೆಯ ಬಹುತೇಕ ಭಾಗದಲ್ಲಿ ಬೀಡುಬಿಟ್ಟಿರುವ ಕಾಡಾನೆಗಳ ಹಾವಳಿಯಿಂದ ಗ್ರಾಮಸ್ಥರಿಗೆ ನೆಮ್ಮದಿ ಇಲ್ಲದಂತಾಗಿದೆ.
ಅರಣ್ಯ ಪ್ರದೇಶದೊಳಗೆ ಕಾಡಾನೆಗಳಿಗೆ ಬೇಕಾದ ಆಹಾರ ಹಾಗೂ ನೀರಿನ ಸೌಲಭ್ಯವನ್ನು ಕಲ್ಪಿಸದ ಹಿನೆÀ್ನಲೆಯಲ್ಲಿ ಕಾಫಿ ತೋಟ ಗಳಲ್ಲಿ ಕಾಡಾನೆಗಳು ಬೀಡುಬಿಟ್ಟು ಸಂತಾನೋತ್ಪತ್ತಿ ಪ್ರಾರಂಭಿಸಿದೆ. ಹಲವಷ್ಟು ಕಾಡಾನೆಗಳು ಮರಿಗಳು ಅರಣ್ಯವನ್ನೆ ನೋಡಿರದ ಸನ್ನಿವೇಶ ಕೂಡ ಕಂಡು ಬಂದಿದೆ. ಕೂಡಲೇ ಸರಕಾರ ಶಾಶ್ವತ ಯೋಜನೆಯನ್ನು ರೂಪಿಸಲಿ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. -ವಾಸು