ಮಡಿಕೇರಿ, ಏ. 3: ಕೊಡಗು ಜಿಲ್ಲೆಯ ಪ್ರತಿಷ್ಠಿತ ಸಂಸ್ಥೆಯಾಗಿರುವ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ (ಡಿಸಿಸಿ ಬ್ಯಾಂಕ್) ನ ನೂತನ ಆಡಳಿತ ಮಂಡಳಿಗೆ ತಾ. 4 ರಂದು (ಇಂದು) ಚುನಾವಣೆ ನಡೆಯಲಿದೆ. ಈ ಹಿಂದಿನ ಚುನಾವಣೆ ಒಂದು ರೀತಿಯಲ್ಲಿ ಎರಡು ಗುಂಪಿನ ನಡುವೆ ಜಿದ್ದಾಜಿದ್ದಿನ ಸ್ಪರ್ಧೆಗೆ ಕಾರಣವಾಗಿ ಸಂಚಲನ ಮೂಡಿಸಿದ್ದರೆ, ಪ್ರಸಕ್ತ ನಡೆಯುತ್ತಿರುವ ಚುನಾವಣೆ ಮತ್ತೊಂದು ಹೊಸ ಬೆಳೆವಣಿಗೆಯ ಸ್ಪರ್ಧೆಗೆ ಎಡೆಯಾಗಿರುವದು ವಿಶೇಷವಾಗಿದೆ. ಇದು ಪಕ್ಷದ ಚಿಹ್ನೆಯಡಿಯಲ್ಲಿ ನಡೆಯುವ ಚುನಾವಣೆ ಅಲ್ಲವಾದರೂ ಪ್ರಮುಖ ಪಕ್ಷಗಳ ಬೆಂಬಲಿತ ಅಭ್ಯರ್ಥಿಗಳೇ ಹುರಿಯಾಳುಗಳು. ಈ ಹಿಂದಿನ ಚುನಾವಣೆಯ ಸಂದರ್ಭದ ತನಕ ಮಾತಂಡ ಎಂ. ರಮೇಶ್ ಅವರ ನೇತೃತ್ವದಲ್ಲಿ ಜನತಾದಳ ಡಿಸಿಸಿ ಬ್ಯಾಂಕ್‍ನಲ್ಲಿ ಹಿಡಿತ ಸಾಧಿಸಿತ್ತು. ಆದರೆ ಕಳೆದ 5 ವರ್ಷಗಳ ಹಿಂದೆ ನಡೆದ ಚುನಾವಣೆಯಲ್ಲಿ ಬಿಜೆಪಿ ಪಕ್ಷ ತನ್ನ ಬೆಂಬಲಿತ ಅಭ್ಯರ್ಥಿಗಳನ್ನು ಸ್ಪರ್ಧೆಗಿಳಿಸಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‍ನ ಇತಿಹಾಸದಲ್ಲಿ ಪ್ರಥಮ ಬಾರಿಗೆ ಆಡಳಿತ ಮಂಡಳಿಯನ್ನು ತನ್ನ ತೆಕ್ಕೆಗೆ ಎಳೆದುಕೊಳ್ಳುವಲ್ಲಿ ಯಶಸ್ಸು ಕಂಡಿತ್ತು. ಇದೀಗ ಮತ್ತೊಂದು ಚುನಾವಣೆ ಎದುರಾಗಿದ್ದು, ಇನ್ನೊಂದು ಹೊಸ ಬೆಳವಣಿಗೆ ಕಂಡು ಬಂದಿದೆ. ಬಿಜೆಪಿ ಪಕ್ಷದಲ್ಲಿನ ಪ್ರಮುಖರೇ ಪರಸ್ಪರ ಸ್ಪರ್ಧಿಗಳಾಗಿರುವದು ಈ ಬೆಳವಣಿಗೆಯಾಗಿದ್ದರೆ, ಇತರ ಕೆಲವರೂ ಸ್ಪರ್ಧೆಯಲ್ಲಿದ್ದು, ಚುನಾವಣೆ ತೀವ್ರ ಕುತೂಹಲ ಕೆರಳಿಸಿದೆ.

13 ಸ್ಥಾನಗಳಿಗೆ ಚುನಾವಣೆ : ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಪ್ರಸ್ತುತ ಮಡಿಕೇರಿ, ವೀರಾಜಪೇಟೆ ಹಾಗೂ ಸೋಮವಾರಪೇಟೆ ತಾಲೂಕಿಗೆ ಸಂಬಂಧಿಸಿದಂತೆ ತಲಾ ಮೂವರು ನಿರ್ದೇಶಕರು ಸೇರಿದಂತೆ ಒಟ್ಟು 9 ನಿರ್ದೇಶಕ ಸ್ಥಾನ, ಧವಸ ಭಂಡಾರಗಳಿಗೆ ಸಂಬಂಧಿಸಿದ ಒಂದು ನಿರ್ದೇಶಕ ಸ್ಥಾನ, ಪಟ್ಟಣ ಸಹಕಾರ ಬ್ಯಾಂಕ್‍ಗಳು ಮತ್ತು ಕೃಷಿಯೇತರ ಪತ್ತಿನ ಸಹಕಾರ ಸಂಘಗಳ ಒಂದು ಸ್ಥಾನ, ಮಹಿಳಾ ಸಹಕಾರ ಸಂಘಗಳ ಒಂದು ಸ್ಥಾನ ಹಾಗೂ ಇನ್ನಿತರ ಸಹಕಾರ ಸಂಘಗಳಿಗೆ ಸಂಬಂಧಿಸಿದಂತೆ ಒಂದು ನಿರ್ದೇಶಕ ಸ್ಥಾನ ಸೇರಿದಂತೆ ಒಟ್ಟು 13 ನಿರ್ದೇಶಕ ಸ್ಥಾನಗಳನ್ನು ಒಳಗೊಂಡಿದೆ.

ಯಾರ್ಯಾರು ಅಭ್ಯರ್ಥಿಗಳು : ಜಿಲ್ಲೆಯ ಮೂರು ತಾಲೂಕುಗಳಿಗೆ ಸಂಬಂಧಿಸಿದಂತೆ ಒಟ್ಟು 9 ನಿರ್ದೇಶಕ ಸ್ಥಾನಕ್ಕೆ 15 ಮಂದಿ ಈ ಬಾರಿ ಸ್ಪರ್ಧೆಯಲ್ಲಿದ್ದಾರೆ. ಮಡಿಕೇರಿ ತಾಲೂಕಿನಲ್ಲಿ 7 ಹಾಗೂ ಸೋಮವಾರಪೇಟೆ ಮತ್ತು ವೀರಾಜಪೇಟೆಯಿಂದ ತಲಾ 4 ಮಂದಿ ಸ್ಪರ್ಧಿಗಳಾಗಿದ್ದಾರೆ.

ಮಡಿಕೇರಿ: ಮಡಿಕೇರಿ ತಾಲೂಕಿನಲ್ಲಿ ತಳೂರು ಕಿಶೋರ್‍ಕುಮಾರ್, ಕೋಡಿರ ಪ್ರಸನ್ನ ತಮ್ಮಯ್ಯ ಹಾಗೂ ಹಾಲಿ ಉಪಾಧ್ಯಕ್ಷರಾಗಿರುವ ಕೇಟೋಳಿರ ಹರೀಶ್ ಪೂವಯ್ಯ, ಮುದ್ದಂಡ ಬಿ. ದೇವಯ್ಯ ಹಾಗೂ ಕಿಮ್ಮುಡಿರ ಜಗದೀಶ್ ಕಣದಲ್ಲಿದ್ದಾರೆ. ವಿಶೇಷವೆಂದರೆ ಇವರೆಲ್ಲರೂ ಬಿಜೆಪಿಯ ಪ್ರಮುಖರು ‘ಶಕ್ತಿ’ಗೆ ತಿಳಿದು ಬಂದಂತೆ ಈ ಐವರಲ್ಲಿ ತಳೂರು ಕಿಶೋರ್, ಕೋಡಿರ ಪ್ರಸನ್ನ ತಮ್ಮಯ್ಯ ಹಾಗೂ ಹರೀಶ್ ಪೂವಯ್ಯ ಅವರಿಗೆ ಪಕ್ಷ ‘ಗ್ರೀನ್’ ಸಿಗ್ನಲ್ ಕೊಟ್ಟಿದ್ದರೆ, ಮುದ್ದಂಡ ಬಿ. ದೇವಯ್ಯ ಹಾಗೂ ಕಿಮ್ಮುಡಿರ ಜಗದೀಶ್ ಬಂಡಾಯ ಸ್ಪರ್ಧೆಯ ಬಿಸಿ ಮೂಡಿಸಿದ್ದಾರೆ. ಇವರುಗಳಲ್ಲದೆ ಕೊಕ್ಕಲೆರ ಬಿ. ತಿಮ್ಮಯ್ಯ ಹಾಗೂ ಹೊಸೂರು ಸತೀಶ್ ಕುಮಾರ್ ಅವರು ಈ ತಾಲೂಕಿನಿಂದ ಸ್ಪರ್ಧೆಗಳಾಗಿದ್ದಾರೆ.

ವೀರಾಜಪೇಟೆ : ವೀರಾಜಪೇಟೆ ತಾಲೂಕಿನಿಂದ ಕೊಡಂದೆರ ಬಾಂಡ್ ಗಣಪತಿ, ಪಟ್ರಪಂಡ ರಘು ನಾಣಯ್ಯ, ಹೊಟ್ಟೇಂಗಡ ರಮೇಶ್ ಸ್ಪರ್ಧೆಯಲ್ಲಿರುವ ಬಿಜೆಪಿ ಪಕ್ಷದ ಪ್ರಮುಖರಾಗಿದ್ದಾರೆ. ಇವರೊಂದಿಗೆ ಮಾತಂಡ ಸಿ. ಪೂವಯ್ಯ ಅವರೂ ಓರ್ವ ಸ್ಪರ್ಧಿಯಾಗಿದ್ದಾರೆ.

ಸೋಮವಾರಪೇಟೆ : ಸೋಮವಾರಪೇಟೆ ತಾಲೂಕಿನಿಂದ ಬಲ್ಲಾರಂಡ ಮಣಿ ಉತ್ತಪ್ಪ ಹಾಲಿ ಅಧ್ಯಕ್ಷ ಬಿ.ಡಿ. ಮಂಜುನಾಥ್ ಹಾಗೂ ಎಸ್.ಬಿ. ಭರತ್ ಕುಮಾರ್ ಬಿಜೆಪಿಯ ಪಕ್ಷದಲ್ಲಿನ ಪ್ರಮುಖರಾಗಿದ್ದಾರೆ. ಇವರೊಂದಿಗೆ ಬಿ.ಕೆ. ಚಿಣ್ಣಪ್ಪ ಅವರು ಮತ್ತೋರ್ವ ಉಮೇದುವಾರರಾಗಿದ್ದಾರೆ.

ಮಹಿಳಾ ಕ್ಷೇತ್ರ : ಜಿಲ್ಲೆಯಲ್ಲಿರುವ ಎಲ್ಲಾ ಮಹಿಳಾ ಸಹಕಾರ ಸಂಘಗಳ ಒಂದು ಕ್ಷೇತ್ರಕ್ಕೆ ಉಷಾ ತೇಜಸ್ವಿ ಹಾಗೂ ಲೀಲಾ ಮೇದಪ್ಪ ಸ್ಪರ್ಧಿಗಳಾಗಿದ್ದಾರೆ. ವಿಶೇಷವೆಂದರೆ ಇವರಿಬ್ಬರೂ ಬಿಜೆಪಿಯಲ್ಲಿ ಗುರುತಿಸಿಕೊಂಡಿರುವವರೇ.(ಮೊದಲ ಪುಟದಿಂದ)

ಇನ್ನಿತರೆ ಸಹಕಾರ ಸಂಘದ ಕ್ಷೇತ್ರ: ಜಿಲ್ಲೆಯಲ್ಲಿರುವ ಇನ್ನಿತರೆ ಸಹಕಾರ ಸಂಘಗಳ ಒಂದು ಕ್ಷೇತ್ರಕ್ಕೂ ಇಬ್ಬರು ಬಿಜೆಪಿಯ ಪ್ರಮುಖರೇ ಸ್ಪರ್ಧಿಗಳು. ಮೂಲಗಳ ಪ್ರಕಾರ ಇಲ್ಲಿ ಕೆ.ಎಂ. ಸೋಮಯ್ಯ ಅವರು ಪಕ್ಷ ಗುರುತಿಸಿದ ಅಭ್ಯರ್ಥಿಯಾಗಿದ್ದರೆ, ಎದುರಾಳಿಯಾಗಿರುವದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿರುವ ಎ.ಕೆ. ಮನು ಮುತ್ತಪ್ಪ ಎಂಬದು ಇನ್ನೊಂದು ಕುತೂಹಲದ ಸ್ಪರ್ಧೆಯಾಗಿದೆ.

ಪಟ್ಟಣ ಬ್ಯಾಂಕ್ - ಕೃಷಿಯೇತರ ಸಂಘ : ಪಟ್ಟಣ ಸಹಕಾರ ಬ್ಯಾಂಕ್‍ಗಳು ಮತ್ತು ಕೃಷಿಯೇತರ ಪತ್ತಿನ ಸಹಕಾರ ಸಂಘದ ಒಂದು ಕ್ಷೇತ್ರಕ್ಕೆ ಕನ್ನಂಡ ಸಂಪತ್ ಹಾಗೂ ಟಿ.ಆರ್. ಶವರಣಕುಮಾರ್ ಉಮೇದುವಾರರಾಗಿದ್ದಾರೆ.

ಅವಿರೋಧ ಆಯ್ಕೆ : ಸಹಕಾರ ಧವಸ ಭಂಡಾರಗಳ ಮತ ಕ್ಷೇತ್ರದ ಒಂದು ನಿರ್ದೇಶಕ ಸ್ಥಾನಕ್ಕೆ ಕೋಲತಂಡ ಸುಬ್ರಮಣಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಮತದಾರರು : ತಾಲೂಕುವಾರು ನಿರ್ದೇಶಕ ಸ್ಥಾನಕ್ಕೆ ಮಡಿಕೇರಿ ತಾಲೂಕಿನಿಂದ 20, ಸೋಮವಾರಪೇಟೆಯಿಂದ 19 ಹಾಗೂ ವೀರಾಜಪೇಟೆಯಿಂದ 28 ಮಂದಿಗೆ ಆಯಾ ಸಂಘದ ಪರವಾಗಿ ಮತದ ಹಕ್ಕಿದೆ. ಇದರಲ್ಲಿ ಮಡಿಕೇರಿ ತಾಲೂಕಿನಲ್ಲಿ ಸಂಪಾಜೆ ವಿಎಸ್‍ಎಸ್‍ಎನ್ ಅಧ್ಯಕ್ಷರಾಗಿದ್ದ ಬಾಲಚಂದ್ರ ಕಳಗಿ ಅವರು ಸಾವಿಗೀಡಾಗಿರುವದರಿಂದ ಈ ತಾಲೂಕಿನಲ್ಲಿ ಪ್ರಸ್ತುತ 19 ಜನರಿಗೆ ಮತದಾನದ ಅಧಿಕಾರವಿದೆ. ಮಹಿಳಾ ಕ್ಷೇತ್ರಕ್ಕೆ 10, ಪಟ್ಟಣ ಸಹಕಾರ ಬ್ಯಾಂಕ್ ಮತ್ತು ಕೃಷಿಯೇತರ ಪತ್ತಿನ ಸಹಕಾರ ಸಂಘದಿಂದ 21 ಹಾಗೂ ಇನ್ನಿತರ ಸಹಕಾರ ಸಂಘಗಳ ಕ್ಷೇತ್ರದಿಂದ 30 ಮಂದಿಗೆ ಮತದಾನದ ಅಧಿಕಾರವಿದೆ.

ಚುನಾವಣೆಗೆ ಸಿದ್ಧತೆ: ಈ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳ ಅಧಿಸೂಚನೆಯನ್ವಯ ಪ್ರಕ್ರಿಯೆ ನಡೆದಿದ್ದು, ಜಿಲ್ಲಾ ಪಂಚಾಯತ್‍ನ ಉಪಕಾರ್ಯದರ್ಶಿಗಳು ರಿಟರ್ನಿಂಗ್ ಅಧಿಕಾರಿಯಾಗಿದ್ದಾರೆ. ತಾ. 4 ರಂದು (ಇಂದು) ಬೆ. 9 ರಿಂದ ಸಂಜೆ 4ರ ತನಕ ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಚುನಾವಣೆ ನಡೆಯಲಿದೆ. ಫಲಿತಾಂಶ ಮತದಾನದ ಅವಧಿಯ ಬಳಿಕ ಪ್ರಕಟವಾಗಲಿದೆ.

ಮತದಾನಕ್ಕೆ ಸಂಬಂಧಿಸಿದಂತೆ ಅಂತಿಮ ಮತದಾರರ ಪಟ್ಟಿಯಲ್ಲಿರುವ ಎಲ್ಲಾ ಅರ್ಹ ಸದಸ್ಯ ಸಹಕಾರ ಸಂಘಗಳ ಪ್ರತಿನಿಧಿಗಳಿಗೆ ಸಹಕಾರ ಚುನಾವಣಾ ಪ್ರಾಧಿಕಾರದಿಂದ ನೀಡಲಾಗಿರುವ ಡೆಲಿಗೇಶನ್ ಫಾರಂ ಮತ್ತು ಗುರುತಿನ ಕಾರ್ಡುಗಳನ್ನು ವಿತರಿಸಲಾಗಿರುತ್ತದೆ.

ಎಲ್ಲಾ ಮತದಾರರು ಈಗಾಗಲೇ ನೀಡಲಾಗಿರುವ ಡೆಲಿಗೇಶನ್ ಫಾರಂ ಮತ್ತು ಗುರುತಿನ ಕಾರ್ಡಿನೊಂದಿಗೆ ಮತದಾನಕ್ಕೆ ಹಾಜರಾಗಿ ಮತ ಚಲಾಯಿಸಬಹುದಾಗಿದೆ. ಚುನಾವಣೆಯನ್ನು ಶಾಂತಿಯುತವಾಗಿ ನಡೆಸಲು ಪೊಲೀಸ್ ಬಂದೋಬಸ್ತ್ ವ್ಯವಸ್ಥೆಯ ಜೊತೆ ಸಕಲ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ ಎಂದು ಚುನಾವಣಾ ಅಧಿಕಾರಿಯಾದ ಜಿಲ್ಲಾಧಿಕಾರಿ ಅವರು ತಿಳಿಸಿದ್ದಾರೆ.