ಮಡಿಕೇರಿ, ಏ. 2: ಮನೆ ಎದುರಿನ ಚರಂಡಿ ಮೇಲಿನ ಚಪ್ಪಡಿ ಮೇಲೆ ಮಲಗಿರುತ್ತಿದ್ದ ನಾಯಿಗೆ ನಮ್ಮ ನಾಯಿಗಳೆಂದರೆ ಸಿಟ್ಟು! ಯಾವತ್ತು ಬೊಗಳುತ್ತಾ ಹತ್ತಿರ ಬರದಂತೆ ನೋಡಿಕೊಳ್ಳುತ್ತಿತ್ತು. ಕಾರಣ ಹುಡುಕಿದಾಗ ಚಪ್ಪಡಿ ಕೆಳಗಿನ ಚರಂಡಿಯೊಳಗೆ ಇನ್ನೂ ಕಣ್ಣು ಬಿಡದ ಮರಿಗಳನ್ನು ಅಡಗಿಸಿಟ್ಟ ವಿಷಯ ತಿಳಿಯಿತು.
ಇತ್ತೀಚೆಗೆ ಬೆಳಗ್ಗಿನ 5 ಗಂಟೆ ಜಾವದಲ್ಲಿ ಭಾರೀ ಮಳೆ ಬಂದಾಗ ತಾಯಿಯ ಆಕ್ರಂದನ ಜೋರಾಗಿತ್ತು. ವಿದ್ಯುತ್ ಸಂಪರ್ಕವೂ ಕಡಿತಗೊಂಡು ಅಲ್ಲಿ ಏನಾಗಿದೆ ಅನ್ನುವದೂ ಗೊತ್ತಾಗುತ್ತಿರಲಿಲ್ಲ.
ಬೆಳಿಗ್ಗೆ 7ರ ವೇಳೆಗೆ ಎಲ್ಲೋ ಪಕ್ಕದಲ್ಲಿ ನಾಯಿ ಮರಿಗಳ ಕಿರುಚಾಟವೂ ಕೇಳಿ ಬಂತು.
ಜನರೆಲ್ಲಾ ಹುಡುಕಾಡಿದರು. ಪಕ್ಕದಲ್ಲಿ ಖಾಲಿ ಇದ್ದ ಕೊಠಡಿಯೊಂದರ ಹಿಂಬಾಗಿಲಿನ ಮೂಲಕ ತಾಯಿ ನಾಯಿ ಮೂರು ಮರಿಗಳನ್ನು ಕಚ್ಚಿ ತಂದು ಒಳಗಿಟ್ಟಿತ್ತು. ಒದ್ದೆಯ ಮುದ್ದೆಯಾಗಿದ್ದ ಮರಿಗಳನ್ನು ನೆಕ್ಕಿ ನೆಕ್ಕಿ ತಾಯಿ ಸ್ಪಚ್ಛ ಮಾಡುತ್ತಿತ್ತು. ಒಂದೆರಡು ದಿನಗಳಲ್ಲಿ ಮೂರು ಮರಿಗಳ ಜೊತೆ ಇನ್ನೆರಡು ಮರಿಗಳೂ ಸೇರ್ಪಡೆಗೊಂಡವು.
ಮರಿಗಳನ್ನು ರಕ್ಷಿಸಿದ ತೃಪ್ತಿಯಲ್ಲಿ ‘ಅಮ್ಮ’ ಹಲವು ದಿನ ಅಲ್ಲೇ ವಾಸ್ತವ್ಯ ಹೂಡಿ ಇದೀಗ ಬೇರೆಡೆಗೆ ಸ್ಥಳಾಂತರಗೊಂಡಿದೆ.
ಕೆಲ ದಿನಗಳಲ್ಲೇ ‘ಬೀದಿ ನಾಯಿ’ಗಳ ಪಾಲಿಗೆ ಐದು ಮರಿಗಳು ಸೇರ್ಪಡೆಗೊಳ್ಳಲಿವೆ!