ಮಡಿಕೇರಿ, ಏ. 3: ವಿದ್ಯಾರ್ಥಿಗಳು ಮೂಲ ವಿಜ್ಞಾನ ಕಲಿಕೆಯಲ್ಲಿ ಹೆಚ್ಚಿನ ಆಸಕ್ತಿ ಬೆಳಸಿಕೊಂಡು ತಮ್ಮನ್ನು ವೈಜ್ಞಾನಿಕ ಸಂಶೋಧನಾ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಉತ್ತಮ ಸಾಧನೆ ಮಾಡಬೇಕೆಂದು ಕಾಲೇಜು ಶಿಕ್ಷಣ ಇಲಾಖೆಯ ಮಂಗಳೂರು ವಲಯದ ಜಂಟಿ ನಿರ್ದೇಶಕ ಡಾ.ಎಸ್.ಬಿ ಅಪ್ಪಾಜಿಕಾಡ ಬುಧೂರ ಕರೆ ನೀಡಿದರು.

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಬೆಂಗಳೂರು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕಾಲೇಜು ಶಿಕ್ಷಣ ಇಲಾಖೆ, ರಾಜ್ಯ ವಿಜ್ಞಾನ ಪರಿಷತ್ತು, ಕೊಡಗು ಜಿಲ್ಲಾ ಸಮಿತಿ ಹಾಗೂ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ಮಂಗಳೂರು ವಲಯದ ಪದವಿ ವಿಜ್ಞಾನ ವಿದ್ಯಾರ್ಥಿಗಳಿಗೆ ಮನುಕುಲಕ್ಕಾಗಿ ವಿಜ್ಞಾನ, ತಂತ್ರಜ್ಞಾನ ಮತ್ತು ಆವಿಷ್ಕಾರ ಎಂಬ ಕೇಂದ್ರ ವಿಷಯದಡಿ ಏರ್ಪಡಿಸಿದ್ದ ವಿಜ್ಞಾನ ವಸ್ತುಪ್ರದರ್ಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸ್ವಸ್ಥ ಸಮಾಜ ನಿರ್ಮಾಣಕ್ಕೆ ಇಂದು ವಿಜ್ಞಾನದ ಅವಶ್ಯಕತೆ ಇದ್ದಲ್ಲಿ ಸಮಾಜದಲ್ಲಿ ಬೇರೂರಿರುವ ಕಂದಾಚಾರ, ಮೌಢ್ಯ ನಿವಾರಣೆಗೆ ವಿದ್ಯಾರ್ಥಿಗಳು ಸಂಕಲ್ಪ ತೋರಬೇಕು ಎಂದರು.

ವಿಜ್ಞಾನ ಪರಿಷತ್ತಿನ ವತಿಯಿಂದ ವಿದ್ಯಾರ್ಥಿಗಳು ಮತ್ತು ಸಮುದಾಯದಲ್ಲಿ ವಿಜ್ಞಾನದಲ್ಲಿ ಆಸಕ್ತಿ ಹಾಗೂ ಮೌಢ್ಯ ನಿವಾರಣೆಗೆ ಹೆಚ್ಚಿನ ಒತ್ತು ನೀಡುವದು ಹೆಮ್ಮೆಯ ಸಂಗತಿ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ.ಟಿ.ಡಿ. ತಿಮ್ಮಯ್ಯ ಮಾತನಾಡಿ ವಿದ್ಯಾರ್ಥಿಗಳು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಹೊಸ ಆವಿಷ್ಕಾರಗಳ ಬಗ್ಗೆ ಅಧ್ಯಯನ ಕೈಗೊಂಡು ವಿಜ್ಞಾನ ಕ್ಷೇತ್ರದಲ್ಲಿ ಉತ್ತಮ ಸಾಧನೆ ಹೊಂದಬೇಕು. ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವ ಬೆಳೆಸಿಕೊಂಡು ಜನರಲ್ಲಿ ವಿಜ್ಞಾನದ ಜನಪ್ರಿಯತೆ ಬೆಳೆಸಬೇಕು ಎಂದರು.

ಮುಖ್ಯ ಅತಿಥಿಯಾಗಿದ್ದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಕಚೇರಿಯ ಪರಿಸರ ಅಧಿಕಾರಿ ಜಿ.ಆರ್.ಗಣೇಶನ್ ಅವರು ಮಾತನಾಡಿ ನಾವು ಪ್ರತಿನಿತ್ಯ ನಮ್ಮ ಚಟುವಟಿಕೆಗಳಲ್ಲಿ ಪ್ಲಾಸ್ಟಿಕ್ ಮಾಲಿನ್ಯವನ್ನು ತಡೆಗಟ್ಟುವ ಮೂಲಕ ಪರಿಸರ ಸ್ನೇಹಿ ವಸ್ತುಗಳನ್ನು ಬಳಕೆ ಮಾಡಬೇಕು ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಕಾರ್ಯಕ್ರಮದ ಸಂಯೋಜಕ ಟಿ.ಜಿ. ಪ್ರೇಮಕುಮಾರ್, ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ, ಕ್ರಿಯಾಶೀಲತೆ ಹಾಗೂ ವೈಜ್ಞಾನಿಕ ಮನೋಭಾವ ಬೆಳೆಸುವ ಉದ್ದೇಶದಿಂದ ವಿಜ್ಞಾನ ವಸ್ತುಪ್ರದರ್ಶನ ಸ್ಪರ್ಧೆಯನ್ನು ಸಂಘಟಿಸಲಾಗಿದೆ ಎಂದರು.

ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಆಯುಕ್ತ ಜಿಮ್ಮಿ ಸಿಕ್ವೇರಾ, ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಜಿ.ಜೆ. ಮಂಜುನಾಥ, ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಎಂ.ಎನ್. ರವಿಶಂಕರ್, ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿ ಉಪಾಧ್ಯಕ್ಷ ಎಂ.ಇ. ಮೊಯಿದ್ದೀನ್, ಎಂ.ಎನ್. ವೆಂಕಟನಾಯಕ್, ಸಹ ಕಾರ್ಯದರ್ಶಿ ಜಿ.ಶ್ರೀಹರ್ಷ, ವಿಜ್ಞಾನ ಪರಿಷತ್ ಕಚೇರಿ ಸಿಬ್ಬಂದಿ ನಾಗೇಶ್ ಹಿರೇಮಠ ಪಾಲ್ಗೊಂಡಿದ್ದರು.

ವಸ್ತು ಪ್ರದರ್ಶನದಲ್ಲಿ ಶುದ್ಧ ಮತ್ತು ಹಸಿರು ಶಕ್ತಿ, ಆಹಾರ, ಆರೋಗ್ಯ ಮತ್ತು ನೈರ್ಮಲ್ಯ, ಬಾಹ್ಯಾಕಾಶ ಹುಡುಕಾಟ, ಪರಿಸರ ಸ್ನೇಹಿ ತಂತ್ರಜ್ಞಾನ ಮತ್ತು ಪ್ಲಾಸ್ಟಿಕ್ ಮಾಲಿನ್ಯ ಹಿಮ್ಮೆಟ್ಟಿಸುವದು ಮತ್ತು ಜೈವಿಕ ತಂತ್ರಜ್ಞಾನ ಮತ್ತು ಆರೋಗ್ಯ ಎಂಬ ಐದು ಉಪ ವಿಷಯಗಳ ಕುರಿತು ವಿದ್ಯಾರ್ಥಿಗಳು ವಿಜ್ಞಾನ ಮಾದರಿ ಪ್ರದರ್ಶಿಸಿ ಗಮನ ಸೆಳೆದರು.