ಮಡಿಕೇರಿ, ಏ.3 : ಕಳೆದ ವರ್ಷ ಜಿಲ್ಲೆಯಲ್ಲಿ ಸುರಿದ ಮಹಾಮಳೆಗೆ ಸಿಲುಕಿ ಸಂಕಷ್ಟವನ್ನು ಅನುಭವಿಸುತ್ತಿರುವ ಸಂತ್ರಸ್ತ ಕುಟುಂಬಗಳ ವಿದ್ಯಾರ್ಥಿಗಳಿಗೆ ಕೊಡವ ಸಮಾಜಗಳ ಒಕ್ಕೂಟ ಆರ್ಥಿಕ ನೆರವನ್ನು ನೀಡಿದೆ. ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ 19 ವಿದ್ಯಾರ್ಥಿಗಳಿಗೆ ತಲಾ 10 ಸಾವಿರ ರೂ. ಗಳಂತೆ 1.90 ಲಕ್ಷ ರೂ.ಗಳನ್ನು ವಿತರಿಸಲಾಯಿತು.
ಕಾಲೇಜು ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೊಡವ ಸಮಾಜಗಳ ಒಕ್ಕೂಟದ ಪೋಷಕ ಸದಸ್ಯ ಎಂ.ಸಿ.ನಾಣಯ್ಯ ಹಾಗೂ ಪ್ರಮುಖರು ವಿದ್ಯಾರ್ಥಿಗಳಿಗೆ ಚೆಕ್ ವಿತರಿಸಿದರು.
ಈ ಸಂದರ್ಭ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ, ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಕಾಫಿ, ಕಿತ್ತಳೆ, ಏಲಕ್ಕಿ, ಕಾಳುಮೆಣಸು ನೆಲಕಚ್ಚಿದ್ದು, ಬೆಳೆಗಾರರಾದಿಯಾಗಿ ಪ್ರತಿಯೊಬ್ಬರೂ ಸಂಕಷ್ಟಕ್ಕೆ ಸಿಲುಕಿದ್ದಾರೆ. ವಿದ್ಯಾರ್ಥಿಗಳ ಮೇಲೂ ಅತಿವೃಷ್ಟಿ ಪರಿಣಾಮ ಬೀರಿದೆ. ಸಂತ್ರಸ್ತರು ಆತ್ಮಸ್ಥೈರ್ಯವನ್ನು ಕುಗ್ಗಿಸಿಕೊಳ್ಳದೆ ಜೀವನ ಸಾಗಿಸಿದರೆ ಯಶಸ್ಸು ಕಾಣಲು ಸಾಧ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ.ಟಿ.ಡಿ.ತಿಮ್ಮಯ್ಯ, ಪ್ರಕೃತಿಗೆ ವಿರುದ್ಧವಾಗಿ ನಡೆದುಕೊಂಡರೆ ಏನಾಗುತ್ತದೆ ಎನ್ನುವದಕ್ಕೆ ಕಳೆದ ವರ್ಷ ಸಂಭವಿಸಿದ ಜಲಸ್ಫೋಟದಂತಹ ಅನಾಹುತಗಳೇ ಸಾಕ್ಷಿಯಾಗಿದೆ ಎಂದರು.
ಅತಿವೃಷ್ಟಿ ಸಂಕಷ್ಟದ ಸಂದರ್ಭ ಕಾಲೇಜಿನ ವತಿಯಿಂದ ವಿದ್ಯಾರ್ಥಿಗಳಿಗೆ ವಸತಿ ನಿಲಯದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ವಿದ್ಯಾರ್ಥಿಗಳ ವಸತಿ ನಿಲಯದ ಶುಲ್ಕ ಹಾಗೂ ಪರೀಕ್ಷಾ ಶುಲ್ಕವನ್ನು ಮನ್ನಾ ಮಾಡುವಂತೆ ಮತ್ತು ವಿಶ್ವವಿದ್ಯಾನಿಲಯಗಳ ಶುಲ್ಕದಲ್ಲೂ ವಿನಾಯಿತಿ ನೀಡುವಂತೆ ಕೋರಿಕೊಳ್ಳಲಾಗಿದೆ ಎಂದು ಡಾ.ತಿಮ್ಮಯ್ಯ ತಿಳಿಸಿದರು.
ದಾನಿಗಳಾದ ಅನಿತಾ ಅಯ್ಯಣ್ಣ ಮಾತನಾಡಿ, ವಿದ್ಯಾರ್ಥಿಗಳು ಸತತ ಪರಿಶ್ರಮದ ಮೂಲಕ ಶೈಕ್ಷಣಿಕ ಸಾಧನೆ ಮಾಡಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಎಂ.ಸಿ.ನಾಣಯ್ಯ ಅವರ ಪತ್ನಿ ರೂಪಾನಾಣಯ್ಯ, ಕೊಡವ ಸಮಾಜಗಳ ಒಕ್ಕೂಟದ ಕಾರ್ಯದರ್ಶಿ ವಾಟೇರಿರ ಶಂಕರಿ ಪೂವಯ್ಯ, ಖಜಾಂಚಿ ಕಳ್ಳಿಚಂಡ ಶಾಲಿನಿ ಕಾರ್ಯಪ್ಪ, ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ ಹಾಗೂ ಕಾಲೇಜಿನ ಉಪನ್ಯಾಸಕ ಮಾದೇವಯ್ಯ ಉಪಸ್ಥಿತರಿದ್ದರು.
ಕಾವ್ಯ ಪ್ರಾರ್ಥಿಸಿ, ಪ್ರೊ.ರವಿಶಂಕರ್ ಸ್ವಾಗತಿಸಿ, ಡಾ.ಶ್ರೀಧರ್ ಹೆಗಡೆ ವಂದಿಸಿದರು.