ಮಡಿಕೇರಿ, ಏ. 3: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರವು ರಾಜ್ಯದ ಹೈವೋಲ್ಟೇಜ್ ಕ್ಷೇತ್ರದ ಪಟ್ಟಿಯಲ್ಲಿ ಒಂದಾಗಿದೆ. ರಾಜ್ಯದಲ್ಲಿ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಮೈತ್ರಿ ಮಾಡಿಕೊಂಡು ಅಧಿಕಾರ ನಡೆಸುತ್ತಿರುವ ಕೈ ಹಾಗೂ ತೆನೆ ಪಕ್ಷವು ಮೈತ್ರಿ ಮುಖಾಂತರವೇ ಚುನಾವಣೆಯನ್ನು ಎದುರಿಸುತ್ತಿದೆ.

ಕಳೆದ 2014 ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಮೈಸೂರು-ಕೊಡಗು ಕ್ಷೇತ್ರದಲ್ಲಿ ಕಮಲ ಪಾಳಯದಿಂದ ಕ್ಷೇತ್ರದ ಪರಿಚಯವಿಲ್ಲದ ಪತ್ರಕರ್ತ, ಅಂಕಣಗಾರ, ಕಣಕ್ಕಿಳಿಯುತ್ತಾರೆ ಎಂದು ಯಾರೂ ಕೂಡ ಊಹಿಸಿಕೊಂಡಿರಲಿಲ್ಲ.

ರಾಜಕೀಯವನ್ನು ಅರೆದು ಕುಡಿದ ಹೆಚ್. ವಿಶ್ವನಾಥ್ ವಿರುದ್ಧ ಸಿಂಹ ಘರ್ಜಿಸಲ್ಲ ಎಂದು ವಿಶ್ವನಾಥ್ ಸುಮ್ಮನಾದರು. ಆದರೆ ಫಲಿತಾಂಶ ಬಂದಾಗ ಎಲ್ಲಾ ರಾಜಕೀಯ ವಿಶ್ಲೇಷಕರ ವಿಶ್ಲೇಷಣೆಯನ್ನು ಬುಡಮೇಲು ಮಾಡಿ ಮೋದಿ ಅಲೆಯಲ್ಲಿ ಪ್ರತಾಪ್ ಸಿಂಹ ತೇಲಿ... ಗೆದ್ದೇ ಬಿಟ್ಟರು.

ಆದರೆ ಈಗ ಪರಿಸ್ಥಿತಿ ಭಿನ್ನ ರೀತಿಯಲ್ಲಿದೆ. ಏಕೆಂದರೆ ರಾಜ್ಯ ರಾಜಕೀಯದಲ್ಲಿ ಬದ್ಧ ವೈರಿಗಳಾದ ಮೈಸೂರು ಭಾಗದಲ್ಲಿ ಬಲಿಷ್ಠವಾಗಿರುವ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುತ್ತಿದೆ.

ಹಾಗಾಗಿ ಅಲ್ಪಸಂಖ್ಯಾತ ಮತಗಳು ಹಾಗೂ ಹಿಂದುಳಿದ ಮತಗಳು ವಿಭಜನೆಯಾಗುವದಿಲ್ಲ ಎಂಬದು ರಾಜಕೀಯ ಧುರೀಣರ ವಿಶ್ಲೇಷಣೆ. 2014 ರಲ್ಲಿ ಗೆದ್ದಿದು ಕೇವಲ 31,608 ಮತಗಳ ಅಂತರದಿಂದ. ಬಿಜೆಪಿ 5,03,908 ಮತಗಳು, ಕಾಂಗ್ರೆಸ್ 4,73,300 ಹಾಗೂ ಜೆಡಿಎಸ್ 1,38,587 ಮತಗಳನ್ನು ಪಡೆದಿದ್ದವು.

ಆದರೆ ಈಗ ಸಿಂಹಗೆ ದೊಡ್ಡ ಸವಾಲಾಗಿ ಪರಿಣಮಿಸಿರುವದು ಮೈತ್ರಿ ಅಭ್ಯರ್ಥಿಯನ್ನು ಎದುರಿಸುವದು. ಸಾಮಾನ್ಯವಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಒಟ್ಟಾಗಿ ಚುನಾವಣೆ ಎದುರಿಸಿದರೆ ಜಾತ್ಯತೀತ ಮತಗಳು ವಿಭಜನೆವಾಗುವದಿಲ್ಲ.

- ಕೆ.ಎಂ. ಇಸ್ಮಾಯಿಲ್ ಕಂಡಕರೆಪ್ರತಾಪ್ ಸಿಂಹ ಪ್ಲಸ್ ಪಾಯಿಂಟ್-ಮೈನಸ್ ಪಾಯಿಂಟ್

ಪ್ಲಸ್ ಪಾಯಿಂಟ್

*ಅತೀ ಹೆಚ್ಚು ಅನುದಾನ ತರಿಸಿರುವ ಹೆಗ್ಗಳಿಕೆ

*ಮೈಸೂರಿಗೆ ರೈಲು, ಹೆದ್ದಾರಿ ವಿಸ್ತರಣೆಗೆ ವಿಶೇಷ ಪ್ರಯತ್ನ

*ಮೋದಿ ಅಲೆಯ ನೆರವು

*ಕಾಂಗ್ರೆಸ್-ಜೆಡಿಎಸ್‍ನಲ್ಲಿ ಬಿರುಕು

*ಎಂಟು ವಿಧಾನಸಭಾ ಕ್ಷೇತ್ರದಲ್ಲಿ ನಾಲ್ಕರಲ್ಲಿ ಬಿಜೆಪಿ

ಮೈನಸ್ ಪಾಯಿಂಟ್

*ಮೈಸೂರಿಗೆ ಆದ್ಯತೆ ನೀಡಿ ಕೊಡಗನ್ನು ನಿರ್ಲಕ್ಷಿಸಿರುವ ಆರೋಪ

*ಕಾರ್ಯಕರ್ತರ ಕೈಗೆ ಸಿಗುವದಿಲ್ಲ ಎಂಬ ಆರೋಪ

*ಕೆಲವು ನಾಯಕರೊಂದಿಗೆ ಅಷ್ಟಕ್ಕಷ್ಟೆ ಸಂಬಂಧ

*ಮೈತ್ರಿ ಅಭ್ಯರ್ಥಿಯನ್ನು ನೇರವಾಗಿ ಎದುರಿಸುವದು

*ಅಲ್ಪಸಂಖ್ಯಾತ ಮತಗಳು ಸಮೀಕರಣಗೊಳ್ಳುವದು

*ಬೆಳೆಗಾರರ ಸಮಸ್ಯೆಗೆ ಸ್ಪಂದಿಸಿಲ್ಲ ಎಂಬ ಆರೋಪ

ಕಳೆದ ಲೋಕಸಭಾ ಚುನಾವಣೆಯಲ್ಲಿ ವಿಧಾನಸಭಾವಾರು

ಬಿಜೆಪಿ ಹಾಗೂ ಕಾಂಗ್ರೆಸ್ ಪಡೆದ ಮತಗಳು:

ಮಡಿಕೇರಿ: ಬಿಜೆಪಿ: 81,837, ಕಾಂಗ್ರೆಸ್: 56,791,

ವೀರಾಜಪೇಟೆ: ಬಿಜೆಪಿ: 77,754, ಕಾಂಗ್ರೆಸ್: 59,939

ಪಿರಿಯಾಪಟ್ಟಣ: ಬಿಜೆಪಿ: 37,272, ಕಾಂಗ್ರೆಸ್: 56,549

ಹುಣಸೂರು: ಬಿಜೆಪಿ: 48,731, ಕಾಂಗ್ರೆಸ್: 65,099

ಚಾಮುಂಡೇಶ್ವರಿ: ಬಿಜೆಪಿ: 65,663, ಕಾಂಗ್ರೆಸ್: 78,823

ಕೃಷ್ಣರಾಜ: ಬಿಜೆಪಿ: 79,824, ಕಾಂಗ್ರೆಸ್: 45,152

ಚಾಮರಾಜ: ಬಿಜೆಪಿ: 72,658, ಕಾಂಗ್ರೆಸ್: 39,379

ನರಸಿಂಹರಾಜ: ಬಿಜೆಪಿ: 40,166, ಕಾಂಗ್ರೆಸ್: 75,558