ಪೊನ್ನಂಪೇಟೆ, ಏ. 3: ವೀರ ಸೇನಾನಿಗಳ ಜಿಲ್ಲೆಯಾದ ಕೊಡಗಿನ ಯೋಧ ಪೊನ್ನಂಪೇಟೆಯ ಹೆಚ್.ಎನ್. ಮಹೇಶ್ ಅವರಿಗೆ ಶೌರ್ಯಚಕ್ರ ಪ್ರಶಸ್ತಿ ದೊರೆತಿದ್ದು, ಈ ನಿಟ್ಟಿನಲ್ಲಿ ಕೊಡಗಿನ ಜಿಲ್ಲಾಡಳಿತ ಚುನಾವಣೆ ಮುಗಿದ ನಂತರ ಮಹೇಶ್ ಅವರನ್ನು ಸನ್ಮಾನಿಸಿ ಗೌರವಿಸ ಬೇಕೆಂದು ಪೊನ್ನಂಪೇಟೆಯ ನಾಗರಿಕ ವೇದಿಕೆ ಒತ್ತಾಯಿಸಿದೆ. ವೇದಿಕೆ ವತಿಯಿಂದ ಪೊನ್ನಂಪೇಟೆಯಲ್ಲಿ ಹೆಚ್.ಎನ್. ಮಹೇಶ್ ಅವರನ್ನು ಗೌರವಿಸಲಾಯಿತು.
ಈ ಸಂದರ್ಭ ಮಾತನಾಡಿದ ಸಾಹಿತಿ ಅಡ್ಡಂಡ ಕಾರ್ಯಪ್ಪ ವೀರ ಮಹೇಶ್ ಅವರು ತನ್ನ ಸಾಹಸಕ್ಕೆ ಶೌರ್ಯಚಕ್ರ ಪ್ರಶಸ್ತಿಯನ್ನು ಪಡೆದಿದ್ದಾರೆ. ಇವರ ಶೌರ್ಯ ಯುವಕರಿಗೆ ಸೇನೆಗೆ ಸೇರಲು ಪ್ರೇರಣೆಯಾಗಲಿ. ದೇಶದ ರಕ್ಷಣೆಯಲ್ಲಿ ಕೊಡಗಿನ ಯುವಕರು ಮತ್ತೊಮ್ಮೆ ಕೀರ್ತಿ ಪತಾಕೆಯನ್ನು ಸಾಧಿಸಲೆಂದು ಹಾರೈಸಿದರು. ವೇದಿಕೆಯ ಉಪಾಧ್ಯಕ್ಷರಾದ ಚೆಪ್ಪುಡೀರ ಸೋಮಯ್ಯ ಮಾತನಾಡಿ, ಭಾರತ ಸೇನೆಗೆ ಪೊಲೀಸ್ ಇಲಾಖೆಗೆ ಭಾರೀ ಪ್ರಮಾಣದಲ್ಲಿ ಕೊಡುಗೆ ನೀಡಿದ ಪೊನ್ನಂಪೇಟೆಯ ಹೆಸರನ್ನು ದೇಶ-ವಿದೇಶದಲ್ಲಿ ಮಹೇಶ್ ಅವರ ಶೌರ್ಯ ಸಾಧನೆಯಿಂದ ಗುರುತಿಸುವಂತಾಗಿದೆ ಎಂದರು. ನಿವೃತ್ತ ಪೊಲೀಸ್ ಅಧಿಕಾರಿ ಅಣ್ಣಾಳಮಡ ಸೋಮಯ್ಯ ಮಾತನಾಡಿ, ಮಹೇಶ್ ಅವರನ್ನು ಎಲ್ಲಾ ಸಂಘ-ಸಂಸ್ಥೆಗಳು ಗುರುತಿಸಿ, ಗೌರವಿಸು ವಂತಾಗಬೇಕು. ಎಲೆ ಮರೆಯಲ್ಲಿ ರುವ ಯುವಕರು ದೇಶ ಸೇವೆಗೆ ತಮ್ಮನ್ನು ತೊಡಗಿಸಿ ಕೊಳ್ಳಬೇಕೆಂದರು.
ವೇದಿಕೆಯ ಅಧ್ಯಕ್ಷ ಪೊಕ್ಕಳಚಂಡ ಪೂಣಚ್ಚ ಸ್ವಾಗತಿಸಿ ದರು. ಉಪಾಧ್ಯಕ್ಷ ಚೆಪ್ಪುಡೀರ ಸೋಮಯ್ಯ ಮಹೇಶ್ ಅವರ ಪರಿಚಯ ಮಾಡಿದರು. ಕಾರ್ಯದರ್ಶಿ ಮತ್ರಂಡ ಅಪ್ಪಯ್ಯ ವಂದಿಸಿದರು.
ಕಾರ್ಯಕ್ರಮದಲ್ಲಿ ಪೊನ್ನಂಪೇಟೆ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಐನಂಡ ಕೆ. ಮಂದಣ್ಣ, ನಿವೃತ್ತ ಯೋದಾಧಿಕಾರಿ ಕಟ್ಟೇರ ಲಾಲಪ್ಪ, ದೇವಸ್ಥಾನ ಸಮಿತಿಯ ಅಧ್ಯಕ್ಷ ಚೆಪ್ಪುಡಿರ ಪೊನ್ನಪ್ಪ, ಎರ್ಮು ಹಾಜಿ, ನಿವೃತ್ತ ಉಪ ತಹಶೀಲ್ದಾರ್ ಕಳ್ಳಂಗಡ ಗಣಪತಿ, ನಿವೃತ್ತ ಅರಣ್ಯಾಧಿಕಾರಿ ಅಪ್ಪೇಂಗಡ ಸೋಮಯ್ಯ, ನಿವೃತ್ತ ಕಂದಾಯಾಧಿಕಾರಿ ಚೇಂದಿರ ಅಪ್ಪಯ್ಯ ಹಾಗೂ ನಾಗರಿಕ ವೇದಿಕೆಯ ಸದಸ್ಯರು ಭಾಗವಹಿಸಿದ್ದರು.