ವೀರಾಜಪೇಟೆ, ಏ. 1: ವೀರಾಜಪೇಟೆ ಕೇರಳ ಹೆದ್ದಾರಿಯ ಪೆರುಂಬಾಡಿ ಚೆಕ್ ಪೋಸ್ಟ್‍ನಲ್ಲಿ ಮಾ.28ರ ರಾತ್ರಿ ಕರ್ತವ್ಯದಲ್ಲಿದ್ದ ಜಿಲ್ಲಾ ಸಾರಿಗೆ ಅಧಿಕಾರಿ ಗಂಗಾಧರ್ ಅವರಿಗೆ ಚುನಾವಣಾ ಸಿಬ್ಬಂದಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಪ್ರಕರಣದ ವಿಚಾರಣೆ ವೀರಾಜಪೇಟೆ ಚುನಾವಣಾಧಿಕಾರಿ ಶ್ರೀನಿವಾಸ್ ಸಮ್ಮುಖದಲ್ಲಿ ಮಿನಿ ವಿಧಾನಸೌಧದ ತಹಶೀಲ್ದಾರರ ಕಚೇರಿಯಲ್ಲಿ ನಡೆಯಿತು.
ಈ ಹಿಂದೆ ವರದಿಯಾದಂತೆ ಅಂದು ರಾತ್ರಿ ಎಂದಿನಂತೆ ಗಡಿಭಾಗದಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ಜಿಲ್ಲಾ ಸಾರಿಗೆ ಅಧಿಕಾರಿ ಗಂಗಾಧರ್ ಅವರಿಗೆ ಪೆರುಂಬಾಡಿ ಚೆಕ್ ಪೋಸ್ಟ್‍ನಲ್ಲಿದ್ದ ಚುನಾವಣಾ ಸಿಬ್ಬಂದಿಯಾದ ಹಾತೂರು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ತಿಮ್ಮಯ್ಯ ಎಂಬವರು ಕರ್ತವ್ಯಕ್ಕೆ ಅಡ್ಡಿಪಡಿಸಿ ಅನುಚಿತವಾಗಿ ನಡೆದುಕೊಂಡಿದ್ದರು ಎಂದು ಆರೋಪಿಸಿದರು. ಅಲ್ಲದೆ ಅವರಿಗೆ ಕಿರುಕುಳ ನೀಡಿ ಶೂ ಬಿಚ್ಚಿಸಿ, ಚೆಕ್ ಪುಸ್ತಕ ಕಸಿದುಕೊಂಡು ಚುನಾವಣಾ ಕಾರಣ, ನೀವು ಕೆಲಸ ಮಾಡಬಾರದು. ಇದಕ್ಕೆ ನಿಮಗೆ ಅನುಮತಿ ಇಲ್ಲ ಎಂದು ಹೇಳಿ, ರಾತ್ರಿ 12 ರಿಂದ ಬೆಳಗ್ಗಿನ 3 ರವರೆಗೆ ತಮ್ಮ ಕಚೇರಿಯಲ್ಲಿ ಕೂರಿಸಿ ಚೆಕ್ ಪುಸ್ತಕ ಹಾಗೂ ಸಂಗ್ರಹಿತ ಹಣವನ್ನು ನೀಡಿರಲಿಲ್ಲ. ಕೊನೆಗೆ ವಿಚಾರ ತಿಳಿದು ವೀರಾಜಪೇಟೆ ನಗರ ಠಾಣಾಧಿಕಾರಿ ಸಂತೋಷ್ ಕಶ್ಯಪ್ ಮಧ್ಯ ಪ್ರವೇಶ ಮಾಡಿದ್ದರು.
ಈ ಕುರಿತು ಗಂಗಾಧರ್ ಜಿಲ್ಲಾಧಿಕಾರಿಗೆ ದೂರು ನೀಡಿದರೆ, ತಿಮ್ಮಯ್ಯ ವೀರಾಜಪೇಟೆ ಚುನಾವಣಾಧಿಕಾರಿ ಶ್ರೀನಿವಾಸ್‍ಗೆ ದೂರು ನೀಡಿದರು. ಇಂದು ಈ ಬಗ್ಗೆ ವೀರಾಜಪೇಟೆಯಲ್ಲಿ ವಿಚಾರಣೆ ನಡೆಯಿತು.
ದೂರಿನಂತೆ ಇಬ್ಬರನ್ನು ಕರೆಯಿಸಿ ಅವರಿಂದ ಹೇಳಿಕೆ ಪಡೆದು ಸರಕಾರಕ್ಕೆ ಕಳುಹಿಸುತ್ತೇನೆ. ಈ ಕುರಿತು ಬಹಿರಂಗವಾಗಿ ಹೇಳಲಾಗದು ಎಂದು ವಿ.ಪೇ ಎ.ಆರ್.ಓ. ಶ್ರೀನಿವಾಸ್ ಪತ್ರಿಕೆಗೆ ಉತ್ತರಿಸಿದರು
ನಮ್ಮನ್ನು ಈ ಕುರಿತು ವಿಚಾರಣೆಗೆ ಹಾಜರಾಗಿ ಹೇಳಿಕೆ ನೀಡುವಂತೆ ವಿ.ಪೇ ಚುನಾವಣಾಧಿಕಾರಿ ಕರೆದಿದ್ದಾರೆ ವಿಚಾರಣೆಗೆ ಬಂದಿರುತ್ತಾನೆ ಎಂದು ಜಿಲ್ಲಾ ಸಾರಿಗೆ ಅಧಿಕಾರಿ ಗಂಗಾಧರ್ ಹೇಳಿದರು.