ಮಡಿಕೇರಿ, ಏ. 3: ವಾಹನ ಸಂಚಾರ ಒತ್ತಡದಿಂದ ಉಂಟಾಗಬಹುದಾದ ಸಂಭವನೀಯ ಅಪಘಾತಗಳನ್ನು ನಿಯಂತ್ರಿಸಲು ವಾಹನಗಳ ಸುಗಮ ಸಂಚಾರ ಮತ್ತು ಸಾರ್ವಜನಿಕ ಸುರಕ್ಷತೆಯ ದೃಷ್ಟಿಯಿಂದ ಏಕಮುಖ ಸಂಚಾರ ವ್ಯವಸ್ಥೆ ಹಾಗೂ ಕೆಲವು ವರ್ಗದ ವಾಹನ ಸಂಚಾರ ನಿರ್ಬಂಧಿಸುವದು ಸೂಕ್ತವೆಂದು ಗಣನೆಗೆ ತೆಗೆದುಕೊಂಡು ಮೋಟಾರು ವಾಹನ ಕಾಯ್ದೆ 198 ಕಲಂ 115 ಕರ್ನಾಟಕ ಪೊಲೀಸ್ ಕಾಯ್ದೆ 1963ರ ವಿಧಿ 31 ಹಾಗೂ ಕರ್ನಾಟಕ ಮೋಟಾರು ವಾಹನಗಳ ನಿಯಮ 1989ರ (ತಿದ್ದುಪಡಿ ನಿಯಮಾವಳಿ 1990) ರ ಅನುಸಾರ ನಿಯಮ 221ಎ(5) ರಡಿಯಲ್ಲಿ ದತ್ತವಾದ ಅಧಿಕಾರದಂತೆ ಏಕಮುಖ ಸಂಚಾರ ಹಾಗೂ ವಾಹನ ನಿರ್ಬಂಧಕ್ಕೆ ಜಿಲ್ಲಾ ದಂಡಾಧಿಕಾರಿ ಮತ್ತು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷೆ ಅನೀಸ್ ಕಣ್ಮಣಿ ಜಾಯ್ ಅವರು ಆದೇಶ ಹೊರಡಿಸಿದ್ದಾರೆ.
ವಿವರ ಇಂತಿದೆ: ಗೋಣಿಕೊಪ್ಪ ನಗರಕ್ಕೆ ಮೈಸೂರು ರಸ್ತೆಯಿಂದ ಬರುವ ವಾಹನಗಳನ್ನು ಪೊನ್ನಂಪೇಟೆ ಜಂಕ್ಷನ್ ನೇರವಾಗಿ ಬಸ್ ನಿಲ್ದಾಣ ಹಾಗೂ ವೀರಾಜಪೇಟೆ ಕಡೆಗೆ ತೆರಳುವದು.
ವೀರಾಜಪೇಟೆ ಕಡೆಯಿಂದ ಬರುವ ವಾಹನಗಳು ಬಸ್ (ನೇರವಾಗಿ ಮುಖ್ಯ ರಸ್ತೆಯಲ್ಲಿ ಸಂಚರಿಸುವದು)ಗಳನ್ನು ಹೊರತುಪಡಿಸಿ, ಐಪಿ ಬಂಕ್‍ನಿಂದ ಬೈಪಾಸ್ ರಸ್ತೆಗಾಗಿ ಪೊನ್ನಂಪೇಟೆ ರಸ್ತೆ ಮೂಲಕ ನಗರವನ್ನು ಪ್ರವೇಶಿಸುವದು.
ಪೊನ್ನಂಪೇಟೆ ಕಡೆಯಿಂದ ಬರುವ ವಾಹನಗಳು ಪೊನ್ನಂಪೇಟೆ ರಸ್ತೆ ಜಂಕ್ಷನ್ ಮೂಲಕ ನಗರವನ್ನು ಪ್ರವೇಶಿಸುವದು ಹಾಗೂ ಮೈಸೂರು ರಸ್ತೆಯಲ್ಲಿ ತೆರಳುವದು.
ಗೋಣಿಕೊಪ್ಪ ನಗರದ ಮುಖ್ಯ ರಸ್ತೆ ಅಂದರೆ ಉಮಾಮಹೇಶ್ವರಿ ದೇವಸ್ಥಾನದಿಂದ ಪಾಲಿಬೆಟ್ಟ ಜಂಕ್ಷನ್‍ವರೆಗೆ ಪ್ರತಿ ತಿಂಗಳ 1 ರಿಂದ 15ನೇ ತಾರೀಖಿನವರೆಗೆ ಒಂದು ಕಡೆ ವಾಹನ ನಿಲುಗಡೆ ವ್ಯವಸ್ಥೆ ಮಾಡುವದು. ನಂತರ ತಿಂಗಳ 16 ರಿಂದ 31 ರವರೆಗೆ ಮತ್ತೊಂದು ಕಡೆ ವಾಹನ ನಿಲುಗಡೆ ವ್ಯವಸ್ಥೆಯನ್ನು ಮಾಡುವದು.
ಗೋಣಿಕೊಪ್ಪ ನಗರದ ಪೊನ್ನಂಪೇಟೆ ರಸ್ತೆ ಹಾಗೂ ಬೈಪಾಸ್ ರಸ್ತೆಯಲ್ಲಿ ಅಂದರೆ ಪೊನ್ನಂಪೇಟೆ ಬೈಪಾಸ್ ಜಂಕ್ಷನ್‍ನಿಂದ ಐಪಿ ಪೆಟ್ರೋಲ್ ಬಂಕ್‍ವರೆಗೆ ಪ್ರತಿ ತಿಂಗಳ 1 ರಿಂದ 15 ರವರೆಗೆ ಒಂದು ಕಡೆ ವಾಹನ ನಿಲುಗಡೆ ವ್ಯವಸ್ಥೆ ಮಾಡುವದು. ನಂತರ ತಿಂಗಳ 16 ರಿಂದ 31 ರವರೆಗೆ ಮತ್ತೊಂದು ಕಡೆ ವಾಹನ ನಿಲುಗಡೆ ವ್ಯವಸ್ಥೆಯನ್ನು ಮಾಡುವದು.
ದ್ವಿಚಕ್ರ ವಾಹನಗಳಿಗೆ ಗೊತ್ತು ಮಾಡಿದ ಸ್ಥಳದಲ್ಲಿ ಅಂದರೆ ಶಾಲೀಮಾರ್ ಮುಂಭಾಗದಲ್ಲಿ 15 ಮೀಟರ್ ಉದ್ದದಲ್ಲಿ ಹಾಗೂ ಎಸ್.ಕುಮಾರ್ ಬಟ್ಟೆ ಅಂಗಡಿಯ ಮುಂಭಾಗದಲ್ಲಿ 15 ಮೀಟರ್ ಉದ್ದ, ಮಾನಸ ಮೆಡಿಕಲ್ಸ್ ಮುಂಭಾಗದಲ್ಲಿ 50 ಮೀಟರ್ ಉದ್ದದಲ್ಲಿ ನಿಲುಗಡೆ ವ್ಯವಸ್ಥೆಯನ್ನು ಮಾಡುವದು.
ಗೋಣಿಕೊಪ್ಪ ನಗರದ ಬಸ್ ನಿಲ್ದಾಣದಿಂದ ಅರುವತ್ತೊಕ್ಲು ಕಡೆಗೆ ಹೋಗುವ ರಸ್ತೆಯ ಮಹೇಂದ್ರ ಅವರ ಕಟ್ಟಡದ ತಿರುವು ರಸ್ತೆಯವರೆಗೆ ಏಕಮುಖ ಸಂಚಾರ ರಸ್ತೆಯನ್ನಾಗಿ ಅಂದರೆ ಬಸ್ ನಿಲ್ದಾಣದಿಂದ ಪ್ರವೇಶ, ಅಭಿಮುಖ ಚಾಲನೆಯನ್ನು ನಿಷೇಧ ಮಾಡುವದು.
ಗೋಣಿಕೊಪ್ಪ ನಗರದ ಬಸ್ ನಿಲ್ದಾಣದಿಂದ ಅರವತ್ತೊಕ್ಲು ಕಡೆಗೆ ಹೋಗುವ ರಸ್ತೆಯ ಮಹೇಂದ್ರರವರ ಕಟ್ಟಡದ ತಿರುವು ರಸ್ತೆಯವರೆಗೆ ಎರಡು ಕಡೆಯಲ್ಲಿ ವಾಹನ ನಿಲುಗಡೆಯನ್ನು ನಿಷೇದಿಸುವದು.
ಈ ಬಗ್ಗೆ ಮೋಟಾರು ವಾಹನ ಕಾಯ್ದೆ 1988 ಸೆಕ್ಷನ್ 116 ಕರ್ನಾಟಕ ಮೋಟಾರು ವಾಹನಗಳ ನಿಯಮ 1989ರ (ತಿದ್ದುಪಡಿ ನಿಯಮಾವಳಿ 1990)ರ ಅನುಸಾರ ನಿಯಮ 221ಎ(2), ರ ಅನ್ವಯ ಅವಶ್ಯವಿರುವ ಸೂಚನಾ ಫಲಕಗಳನ್ನು ಅಳವಡಿಸಲು ಪೊಲೀಸ್ ಅಧೀಕ್ಷಕರು, ಕೊಡಗು ಜಿಲ್ಲೆ, ಮಡಿಕೇರಿ ಇವರು ಅಧಿಕಾರ ಹೊಂದಿರುತ್ತಾರೆ ಎಂದು ಜಿಲ್ಲಾ ದಂಡಾಧಿಕಾರಿ ಮತ್ತು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷೆ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.