ಕೂಡಿಗೆ, ಏ. 3: ಬಾಣಾವರ ಮೀಸಲು ಅರಣ್ಯದಲ್ಲಿ ಕಾಡಾನೆಯೊಂದರ ಹಿಂಭಾಗದ ಎಡಗಾಲು ಗಾಯಗೊಂಡು ಊತವಾಗಿದ್ದನ್ನು ಗಮನಿಸಿದ ಅರಣ್ಯ ಸಿಬ್ಬಂದಿಗಳು ಮೇಲಾಧಿಕಾರಿಗಳಿಗೆ ತಿಳಿಸಿ, ಸಾಕಾನೆಗಳ ಸಹಾಯದಿಂದ ಆ ಕಾಡಾನೆಯನ್ನು ಹಿಡಿದು ಚಿಕಿತ್ಸೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾಡಾನೆಯು ಬಾಣಾವರ ಮೀಸಲು ಅರಣ್ಯದಂಚಿನ ಭುವಂಗಾಲದ ಕೆರೆಯಲ್ಲಿ ನೀರು ಕುಡಿಯುತ್ತಿದ್ದ ಸಂದರ್ಭ ಕಾಡಾನೆಯ ಹಿಂಭಾಗದ ಎಡಗಾಲು ಗಾಯಗೊಂಡು, ರಕ್ತ ಸುರಿಯುತ್ತಿದ್ದದನ್ನು ಮತ್ತು ಊತವಾಗಿದುದ್ದನ್ನು ಗಮನಿಸಿದ ಅರಣ್ಯ ಸಿಬ್ಬಂದಿ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದ್ದಾರೆ. ನಂತರ ಮೇಲಾಧಿಕಾರಿಗಳ ಆದೇಶದಂತೆ ಆ ಕಾಡಾನೆಯ ಚಲನವಲನವನ್ನು ಗಮನಿಸಿ, ಈ ಕಾಡಾನೆಯು ಕಳೆದ 15 ದಿನಗಳಿಂದ ಬಾಣವಾರ ಅರಣ್ಯ ತಪಾಸಣಾ ಸರಹದ್ದಿನಲ್ಲಿ ತಿರುಗಾಡುತ್ತಿದ್ದನ್ನು ಕಂಡುಹಿಡಿದು ಅದಕ್ಕೆ ಚಿಕಿತ್ಸೆ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಸೋಮವಾರಪೇಟೆ ಅರಣ್ಯ ಇಲಾಖೆಯ ವತಿಯಿಂದ ಜಿಲ್ಲಾ ಅರಣ್ಯ ಇಲಾಖೆಯ ಅಧಿಕಾರಿಗಳ ಆದೇಶದಂತೆ ಚಿಕಿತ್ಸೆ ನೀಡಲು ತೀರ್ಮಾನ ಕೈಗೊಂಡು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಅವರ ಮಾರ್ಗದರ್ಶನದಲ್ಲಿ ಬುಧವಾರ ನಾಗರಹೊಳೆ ಅರಣ್ಯದ ಆನೆಗಳ ಕ್ಷಿಪ್ರ ಕಾರ್ಯಪಡೆ ತಂಡದ ಸಹಕಾರ, ಮತ್ತಿಗೋಡು ಆನೆ ಶಿಬಿರದ ಅಭಿಮನ್ಯು ಮತ್ತು ಕೃಷ್ಣ ಹಾಗೂ ದುಬಾರೆಯ ವಿಕ್ರಮ್ ಆನೆಗಳ ಸಹಕಾರದೊಂದಿಗೆ ಸತತ 4 ಗಂಟೆಗಳ ಕಾರ್ಯಾಚರಣೆ ಕೈಗೊಂಡು, ನಾಗರಹೊಳೆಯ ಸಾಕಾನೆಗಳ ವೈದ್ಯಾಧಿಕಾರಿ ಡಾ.ಮುಜಿದ್ ಮತ್ತು ಡಾ.ರಂಜನ್ ಅವರ ಸಲಹೆಯಂತೆ ಕಾಡಾನೆಗೆ ಮತ್ತುಬರುವ ಔಷಧಿಯನ್ನು ನೀಡಲಾಯಿತು. ನಂತರ ಕಾಡಾನೆಯು ಮಂಕು ಏರುವವರೆಗೂ ಒಂದು ಗಂಟೆಗೂ ಹೆಚ್ಚು ಕಾಲ ಮನಬಂದತೆ ಮೀಸಲು ಅರಣ್ಯದ ಮಧ್ಯ ಭಾಗದಿಂದ ಬಾಣಾವರ ಮುಖ್ಯ ರಸ್ತೆಗೆ ಧಾವಿಸಿ, ಮುಖ್ಯ ರಸ್ತೆಯನ್ನು ದಾಟಿ, ಇನ್ನೊಂದು ಬದಿಯ ಮೀಸಲು ಅರಣ್ಯದೊಳಗೆ ಕಂದಕವನ್ನು ಇಳಿದು ಹತ್ತಿ ಅರಣ್ಯದೊಳಗೆಲ್ಲಾ ಓಡಾಡಿತು. ಸಾಕಾನೆಗಳ ಸಹಾಯದಿಂದ ಕಾಡಾನೆಯನ್ನು ಬೆನ್ನಟ್ಟಿದ ಅರಣ್ಯ ಸಿಬ್ಬಂದಿ, ಅಧಿಕಾರಿಗಳನ್ನು, ಕ್ಷಿಪ್ರ ತಂಡವನ್ನು ಕಾಡಾನೆ ಗೀಳಿಟ್ಟು ಬೆನ್ನಟ್ಟಿದ್ದ ಘಟನೆಯೂ ನಡೆಯಿತು. ನಂತರ ಸಾಕಾನೆಗಳು ಕಾಡಾನೆಯನ್ನು ಸುತ್ತುವರೆದವು. ಒಂದು ಮರದ ಕೆಳಗೆ ನಿಂತಿದ್ದ ಕಾಡಾನೆಯು ಚಲಿಸದಂತೆ ಮೂರು ಸಾಕಾನೆಗಳು ಸುತ್ತುವರೆದ ಸಂದರ್ಭ ನಾಗರಹೊಳೆ ಅರಣ್ಯದ ಆನೆಗಳ ಕ್ಷಿಪ್ರ ಕಾರ್ಯಪಡೆ ತಂಡದ 25 ಮಂದಿ ಸಿಬ್ಬಂದಿಗಳು ಆನೆಯ ಒಂದು ಕಾಲನ್ನು ಮರಕ್ಕೆ ಸೇರಿಸಿ ಕಟ್ಟಿ, ನಂತರ ಸಾಕಾನೆಗಳು ಕಾಡಾನೆಯನ್ನು ಅಲುಗಾಡದಂತೆ ಹಿಡಿದಿದ್ದ ಸಂದರ್ಭದಲ್ಲಿ ಪಶುವೈದ್ಯಾಧಿಕಾರಿ ಡಾ.ಮುಜಿದ್ ಮತ್ತು ಡಾ.ರಂಜನ್ ಅವರು ಕಾಡಾನೆಯ ಕಾಲಿನಲ್ಲಿ ಆಗಿದ್ದ ಗಾಯವನ್ನು ಔಷಧಿಗಳಿಂದ ಶುಚಿಗೊಳಿಸಿ, ರಕ್ತ ಸುರಿಯುತ್ತಿದ್ದ ಜಾಗಕ್ಕೆ ಔಷಧಿಯನ್ನು ಹಾಕಿ, ಕಾಡಾನೆಗೆ ಚುಚ್ಚುಮದ್ದು ನೀಡಿ, ಚಿಕಿತ್ಸೆಯನ್ನು ಪೂರ್ಣಗೊಳಿಸಲಾಯಿತು.

ಈ ಸಂದರ್ಭ ಸೋಮವಾರಪೇಟೆ ತಾಲೂಕು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಚಿಣ್ಣಪ್ಪ ಮಾತನಾಡಿ, ಗಾಯಗೊಂಡ 30 ವರ್ಷ ಪ್ರಾಯದ ಗಂಡಾನೆಗೆ ಯಶಸ್ವಿಯಾಗಿ ಚಿಕಿತ್ಸೆ ನೀಡಲಾಗಿದ್ದು, ಕಾಡಾನೆಯನ್ನು ಅರಣ್ಯದೊಳಕ್ಕೆ ಅಟ್ಟಲಾಗಿದೆ. ಮುಂದಿನ ದಿನಗಳಲ್ಲಿ ಅದರ ಚಲನವಲನ ಅರಿತು ನಂತರ ಚಿಕಿತ್ಸೆ ಬೇಕಾದಲ್ಲಿ ಚಿಕಿತ್ಸೆ ನೀಡುವ

(ಮೊದಲ ಪುಟದಿಂದ) ಕ್ರಮಕೈಗೊಳ್ಳಲಾಗುವದು ಎಂದರು. ಈ ಕಾರ್ಯಾಚರಣೆಯಲ್ಲಿ ಸೋಮವಾರಪೇಟೆ ತಾಲೂಕು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಚಿಣ್ಣಪ್ಪ, ಸೋಮವಾರಪೇಟೆ ವಲಯ ಅಣ್ಯಾಧಿಕಾರಿ ಲಕ್ಷ್ಮಿಕಾಂತ್, ಶನಿವಾರಸಂತೆ, ಹುದುಗೂರು, ಬಾಣಾವರ ವಿಭಾಗದ ಉಪ ವಲಯಗಳ ಅರಣ್ಯಾಧಿಕಾರಿಗಳು, 50ಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿ, ನಾಗರಹೊಳೆ ಅರಣ್ಯದ ಆನೆಗಳ ಕ್ಷಿಪ್ರ ಕಾರ್ಯಪಡೆಯ 25 ಸಿಬ್ಬಂದಿಗಳು ಪಾಲ್ಗೊಂಡಿದ್ದರು. ಕಾಡಾನೆಗೆ ಚಿಕಿತ್ಸೆ ನೀಡುವ ಕಾರ್ಯಾಚರಣೆ ಸಂದರ್ಭ ನೂರಾರು ಗ್ರಾಮಸ್ಥರು, ಸಾರ್ವಜನಿಕರು ಆಗಮಿಸಿದ್ದ ಹಿನ್ನೆಲೆಯಲ್ಲಿ ಸೋಮವಾರಪೇಟೆ ಠಾಣಾಧಿಕಾರಿ ಶಿವರಂಜನ್ ಮತ್ತು ಸಿಬ್ಬಂದಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಯನ್ನು ಕಲ್ಪಿಸಿದ್ದರು. -ಕೆ.ಕೆ.ನಾಗರಾಜಶೆಟ್ಟಿ