ಕೂಡಿಗೆ, ಏ. 3: ಜಿಲ್ಲೆಯ ಪ್ರಮುಖ ಕಾಫಿ ಸಂಸ್ಕರಣಾ ಕೇಂದ್ರವಾಗಿರುವ ಕೂಡುಮಂಗಳೂರು ಗ್ರಾಮ ಪಂಚಾಯಿತಿಯ ಕೂಡ್ಲೂರು ಕೈಗಾರಿಕಾ ಪ್ರದೇಶದಲ್ಲಿ ಕಳೆದ ಎರಡು ತಿಂಗಳುಗಳಿಂದ ಬೀದಿ ದೀಪಗಳು ಇಲ್ಲದೆ ಕತ್ತಲು ಆವರಿಸಿದೆ.

ಕೈಗಾರಿಕಾ ಪ್ರದೇಶದಲ್ಲಿ 25ಕ್ಕೂ ಹೆಚ್ಚು ಕಾಫಿ ಸಂಸ್ಕರಣಾ ಘಟಕ, ಕೈಗಾರಿಕೆಗೆ ಸಂಬಂಧಿಸಿದ ಬೇರೆ ಬೇರೆ ಘಟಕಗಳು ಈ ಕೇಂದ್ರದಲ್ಲಿದ್ದು, ದಿನಂಪ್ರತಿ ಈ ಘಟಕಗಳು ಕಾರ್ಯನಿರ್ವಹಿಸುತ್ತವೆ. ದಿನದ 24 ಗಂಟೆ ಕಾಲವು ಕೆಲಸಗಳು ನಡೆಯುತ್ತಿದ್ದು, ರಾತ್ರಿ ಸಂದರ್ಭ ಮುಖ್ಯ ರಸ್ತೆಯಿಂದ ಕೈಗಾರಿಕಾ ಬಡಾವಣೆಗಳಿಗೆ ತೆರಳುವ ಕಾರ್ಮಿಕರಿಗೆ ಕಗ್ಗತ್ತಲೆಯಲ್ಲೆ ಭಯದಿಂದ ತಿರುಗಾಡುವ ಪ್ರಸಂಗ ಎದುರಾಗಿದೆ.

ಕೈಗಾರಿಕಾ ಪ್ರದೇಶವು ಕೈಗಾರಿಕಾ ಮಂಡಳಿಗೆ ಸೇರಿದ್ದರೂ ಬೀದಿ ದೀಪಗಳನ್ನು ಅಳವಡಿಸುವ ಕೆಲಸ ಆಗಿಲ್ಲ. ಬರೀ ವಿದ್ಯುತ್ ಕಂಬಗಳಿದ್ದು, ಈ ಹಿಂದೆ ಇದ್ದ ಬಲ್ಬ್‍ಗಳು ಎಲ್ಲವೂ ನಿಷ್ಕ್ರಿಯಗೊಂಡಿದ್ದರೂ ಸಹ ಬೇರೆ ಬಲ್ಬ್‍ಗಳನ್ನು ಅಳವಡಿಸಿಲ್ಲ. ಈ ಸಾಲಿನಲ್ಲಿ ಕೂಡುಮಂಗಳೂರು ಗ್ರಾಮ ಪಂಚಾಯ್ತಿಯು ಈ ವ್ಯಾಪ್ತಿಯಲ್ಲಿ ಇರುವ ಕಾಫಿ ಸಂಸ್ಕರಣಾ ಘಟಕ ಮತ್ತು ಇನ್ನಿತರ ಕೈಗಾರಿಕಾ ಘಟಕಗಳಿಂದ ನಿರ್ವಹಣಾ ವೆಚ್ಚಕ್ಕಾಗಿ ತೆರಿಗೆ ರೂಪದಲ್ಲಿ ಹಣ ಪಡೆದಿದ್ದರೂ ಇದುವರೆಗೂ ಈ ಕೈಗಾರಿಕಾ ಘಟಕದ ಮುಖ್ಯ ರಸ್ತೆಗಳಿಗೆ ಹಾಗೂ ಬಡಾವಣೆಗಳಿಗೆ ಬೀದಿ ದೀಪಗಳನ್ನು ಅಳವಡಿಸಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಕೈಗಾರಿಕಾ ಪ್ರದೇಶಕ್ಕೆ ಬೀದಿ ದೀಪಗಳನ್ನು ಅಳವಡಿಸಿ, ಕಾರ್ಮಿಕರಿಗೆ ಮತ್ತು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಕೈಗಾರಿಕಾ ಪ್ರದೇಶದ ಕಾರ್ಮಿಕ ಮುಖಂಡರು ಆಗ್ರಹಿಸಿದ್ದಾರೆ.