ಮಡಿಕೇರಿ. ಏ. 3: ಜಲಪ್ರಳಯದಲ್ಲಿ ಸಂತ್ರಸ್ತರಾದ 10 ಮಂದಿಗೆ ಬೆಂಗಳೂರಿನ ಕೆ.ಪಿ. ರೋಡ್ ಔಷಧಿ ವ್ಯಾಪಾರಿಗಳ ಸಂಘದಿಂದ ತಲಾ 10 ಸಾವಿರ ರೂಪಾಯಿ ಆರ್ಥಿಕ ನೆರವು ನೀಡಲಾಯಿತು. ರಾಜ್ಯ ಔಷಧಿ ವ್ಯಾಪಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿ, ಕೊಡಗು ಔಷಧಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಅಂಬೆಕಲ್ ಜೀವನ್ ಕುಶಾಲಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಕೆ.ಪಿ. ರೋಡ್ ಔಷಧಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಚಂದ್ರಶೇಖರ್ 10 ಮಂದಿ ಸಂತ್ರಸ್ತರಿಗೆ ನೆರವು ನೀಡಿದರು.

ಎರಡನೇ ಮೊಣ್ಣಂಗೇರಿಯ ಭಾಸ್ಕರ್, ಶಶಿಕಲಾ, ಕೆ.ಎನ್. ರಾಧಾಕೃಷ್ಣ, ಎಂ.ಕೆ. ಪುರಂದರ್, ಎಸ್.ಡಿ. ಗಿರೀಶ್, ಕೆದಕಲ್‍ನ ಬಿ.ಕೆ. ಕೇಶವ, ಮಂಗಳಾದೇವಿ ನಗರದ ಸುಶೀಲ, ಇಂದಿರಾನಗರದ ಕೆ.ಪಿ. ವೇದಾವತಿ, ಹೆಚ್.ಜಿ. ಅರುಣ್ ಕುಮಾರ್, ಪಿ. ಕಲಾ ಅವರು ನೆರವು ಪಡೆದರು. ಈ ಸಂದರ್ಭ ಮಾತನಾಡಿದ ಜಿಲ್ಲಾ ಜಾನಪದ ಪರಿಷತ್ ಉಪಾಧ್ಯಕ್ಷ ಅಂಬೆಕಲ್ ಕುಶಾಲಪ್ಪ, ಕೆ.ಪಿ. ರೋಡ್ ಔಷಧಿ ವ್ಯಾಪಾರಿಗಳ ಸಂಘದವರು ತಾವು ಸಂಗ್ರಹಿಸಿದ ಅನುದಾನವನ್ನೇ ಪ್ರತೀ ತಿಂಗಳೂ ಕೊಡಗಿನ ಪ್ರಕೃತಿ ವಿಕೋಪ ಸಂತ್ರಸ್ತರಿಗೆ ನೀಡುತ್ತಿರುವದು ಶ್ಲಾಘನೀಯ. ಕೊಡಗಿನ ಜನತೆಯ ಸಂಕಷ್ಟಗಳು ನಿವಾರಣೆಯಾಗುವಲ್ಲಿ ಇಂತಹ ದಾನಿಗಳ ಪಾತ್ರ ಪ್ರಮುಖವಾದದ್ದು ಎಂದು ಅಭಿಪ್ರಾಯಪಟ್ಟರು.