ಮಡಿಕೇರಿ, ಏ. 3: ರಾಜ್ಯದ 6 ಕಡೆಗಳಲ್ಲಿ ಖಾಯಂ ಜನತಾ ನ್ಯಾಯಾಲಯ ಸ್ಥಾಪಿಸಲಾಗಿದ್ದು, ಖಾಯಂ ಜನತಾ ನ್ಯಾಯಾಲಯ ಗಳಲ್ಲಿನ ಸೌಲಭ್ಯಗಳನ್ನು ಪಡೆದುಕೊಳ್ಳುವಂತಾಗಬೇಕು ಎಂದು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂಜೀವಕುಮಾರ್ ಹಂಚಾಟೆ ಕೋರಿದ್ದಾರೆ.
ಬೆಂಗಳೂರಿನಿಂದ ವಿಡಿಯೋ ಸಂವಾದ ಮೂಲಕ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಸಾರ್ವಜನಿಕ ಉಪಯುಕ್ತ ಸೇವೆಗಳಲ್ಲಿ ವಿಳಂಬವಾದಾಗ ಖಾಯಂ ಜನತಾ ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು. ಇಲ್ಲಿ ಪ್ರಕರಣಗಳು ತ್ವರಿತಗತಿಯಲ್ಲಿ ವಿಲೇವಾರಿಯಾಗುತ್ತವೆ. ಜೊತೆಗೆ ಇಲ್ಲಿ ಯಾವದೇ ಶುಲ್ಕ ತೆರಬೇಕಿಲ್ಲ ಎಂದು ಅವರು ಹೇಳಿದರು.
ಕೊಡಗು, ಮೈಸೂರು, ಚಾಮರಾಜನಗರ, ಹಾಸನ, ಮತ್ತು, ಮಂಡ್ಯ ಜಿಲ್ಲೆಗಳ ಪ್ರಕರಣಗಳನ್ನು ಮೈಸೂರಿನ ಜಯನಗರ ನ್ಯಾಯಾಲಯದ ಸಂಕೀರ್ಣದಲ್ಲಿರುವ ಖಾಯಂ ಜನತಾ ನ್ಯಾಯಾಲಯದಲ್ಲಿ ವಿಲೇವಾರಿ ಮಾಡಲಾಗುತ್ತದೆ. ಅತ್ಯಂತ ಸರಳವಾಗಿ ಒಂದು ಬಿಳಿ ಹಾಳೆಯಲ್ಲಿ ಸೇವೆಯಲ್ಲಿ ಉಂಟಾಗಿರುವ ಕುರಿತು ದೂರು ನೀಡಿದರೆ ಸಾಕು ಎಂದರು.
ದೂರಿನ ಜೊತೆಗೆ ಸೇವಾ ನ್ಯೂನತೆಗೆ ಸಂಬಂಧಿಸಿದ ದಾಖಲಾತಿ ಗಳನ್ನು ನೀಡಬೇಕು. ತಕ್ಷಣ ಪ್ರತಿ ದೂರುದಾರರಿಗೆ ನೋಟಿಸ್ ನೀಡಲಾಗುತ್ತದೆ. ಇಲ್ಲಿ ನೀಡುವ ತೀರ್ಪು ಸಿವಿಲ್ ನ್ಯಾಯಾಲಯದ ತೀರ್ಪಿನಷ್ಟೇ ಪ್ರಾಮುಖ್ಯತೆ ಪಡೆದಿದೆ. ಸಿವಿಲ್ ನ್ಯಾಯಾಲಯದಲ್ಲಾಗಲಿ ಅಥವಾ ಗ್ರಾಹಕ ವ್ಯವಹಾರಗಳ ವೇದಿಕೆಯಲ್ಲಾಗಲಿ ಸಾಕಷ್ಟು ಸಮಯ ಹಿಡಿಯುತ್ತದೆ. ಆದರೆ ಇಲ್ಲಿ ಎರಡು ಅಥವಾ ಮೂರು ತಿಂಗಳಲ್ಲೇ ಬಗೆಹರಿಯುತ್ತದೆ ಎಂದು ಮಾಹಿತಿ ನೀಡಿದರು.
ರಾಜ್ಯದಲ್ಲಿ ವಿವಿಧ ಜಿಲ್ಲೆಗಳನ್ನು ಒಟ್ಟುಗೂಡಿಸಿ ಒಟ್ಟು 6 ಕಡೆ ಇಂತಹ ನ್ಯಾಯಾಲಯಗಳನ್ನು ಸ್ಥಾಪಿಸಲಾಗಿದೆ. ಬೆಂಗಳೂರು, ಬೆಳಗಾವಿ, ಮೈಸೂರು, ಮಂಗಳೂರು, ಧಾರವಾಡ ಹಾಗೂ ಕಲಬುರಗಿಗಳಲ್ಲಿ ನ್ಯಾಯಾಲಯಗಳಿವೆ ಎಂದು ಹೇಳಿದರು.
ಖಾಯಂ ನ್ಯಾಯಾಲಯದಲ್ಲಿ ಜಿಲ್ಲಾ ನ್ಯಾಯಾಧೀಶರಾಗಿರುವ ಅಥವಾ ಜಿಲ್ಲಾ ನ್ಯಾಯಾಧೀಶರಾಗಿದ್ದ ಅಥವಾ ಜಿಲ್ಲಾ ನ್ಯಾಯಾಧೀಶರಿಗಿಂತ ಹೆಚ್ಚಿನ ಶ್ರೇಣಿಯ ನ್ಯಾಯಿಕ ಅಧಿಕಾರಿಯಾಗಿರುವ ವ್ಯಕ್ತಿ ಯೊಬ್ಬರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಜತೆಗೆ, ಸಾರ್ವಜನಿಕ ಉಪಯುಕ್ತ ಸೇವೆಗಳಿಗೆ ಸಂಬಂಧಿಸಿದಂತೆ ಸಾಕಷ್ಟು ಅನುಭವ ಹೊಂದಿರುವ ಇಬ್ಬರು ವ್ಯಕ್ತಿಗಳನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ ಎಂದರು.
ವಿವಾದ ಇರುವ ಸ್ವತ್ತಿನ ಬೆಲೆಯು ರೂ. 1 ಕೋಟಿ ಮೀರಿದ್ದರೆ ಹಾಗೂ ಯಾವದೇ ಕಾನೂನಿನಡಿ ರಾಜಿ ಮಾಡಿಕೊಳ್ಳುವ ಅವಕಾಶ ಇರದ ಅಪರಾಧಕ್ಕೆ ಸಂಬಂಧಿಸಿದ ಪ್ರಕರಣ ಗಳನ್ನು ಇಲ್ಲಿ ದಾಖಲಿಸುವಂತಿಲ್ಲ ಎಂದು ಅವರು ತಿಳಿಸಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸ ಇದ್ದರು.