ವೀರಾಜಪೇಟೆ, ಏ. 3: ವೀರಾಜಪೇಟೆ ನಗರದ ಬೊರೇಗೌಡ ಕಾಂಪ್ಲೆಕ್ಸ್‍ನ ಸಂಗೀತಾ ಲಾಡ್ಜ್‍ನಲ್ಲಿ ಐಪಿಎಲ್ ಬೆಟ್ಟಿಂಗ್ ನಡೆಯುತ್ತಿದೆ ಎಂಬ ಮಾಹಿತಿ ದೊರೆತ ಮೇರೆಗೆ ಎಸ್‍ಪಿ ಡಾ. ಸುಮನ್ ಡಿ.ಪಿ. ಹಾಗೂ ವೀರಾಜಪೇಟೆ ಪೊಲೀಸ್ ವೃತ್ತ ನಿರೀಕ್ಷಕ ಕ್ಯಾತೇಗೌಡ ಅವರ ನೇತೃತ್ವದಲ್ಲಿ ನಗರ ಪೊಲೀಸ್ ಠಾಣೆಯ ಪಿಎಸ್‍ಐ ಆರ್. ಸಂತೋಷ್ ಕಶ್ಯಪ್ ಹಾಗೂ ಸಿಬ್ಬಂದಿಯವರಾದ ಸುಬ್ರಮಣಿ, ಮುನೀರ್, ಗಿರೀಶ್, ಲೋಹಿತ್, ಸಂತೋಷ್ ಹಾಗೂ ಚಾಲಕ ಯೋಗೇಶ್ ಅವರುಗಳು ಕ್ರಿಕೆಟ್ ಬೆಟ್ಟಿಂಗ್ ನಡೆಯುತ್ತಿದ್ದ ಲಾಡ್ಜ್‍ನಲ್ಲಿ ಧಾಳಿ ನಡೆಸಿ ಕ್ರಿಕೆಟ್ ಬೆಟ್ಟಿಂಗ್‍ನಲ್ಲಿ ತೊಡಗಿದ್ದ ಮರ್ಷಿದ್, ಕವನ್, ರಾಕೇಶ್, ಕುಶಾಲಪ್ಪ ಅವರುಗಳನ್ನು ದಸ್ತಗಿರಿ ಮಾಡಿ ಅವರುಗಳಿಂದ ಬೆಟ್ಟಿಂಗ್ ಆಡಲು ಪಣವಾಗಿಟ್ಟಿದ್ದ 10,000 ನಗದು ಹಾಗೂ ಬೆಟ್ಟಿಂಗ್ ಆಡಲು ಉಪಯೋಗಿಸುತ್ತಿದ್ದ ಮೊಬೈಲ್ ಸೆಟ್‍ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಹೆಚ್ಚಿನ ತನಿಖೆಯಿಂದ ವೀರಾಜಪೇಟೆಯ ಅರಸುನಗರದ ನಿವಾಸಿ ಸುಭಾಷ್ ಅವರ ಮನೆಯ ಮೇಲೆ ಧಾಳಿ ಮಾಡಿ ಬೆಟ್ಟಿಂಗ್ ನಡೆಸಲು ಬಳಸುತ್ತಿದ್ದ ಪ್ರೊಜೆಕ್ಟರ್, ಸ್ಕ್ರೀನ್, ಡೆನ್ ಕೇಬಲ್ ಸೆಟ್ ಟಾಪ್ ಬಾಕ್ಸ್, ಎಲೆಕ್ಟ್ರಾನಿಕ್ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.ಕ್ರಿಕೆಟ್ ಬೆಟ್ಟಿಂಗ್‍ನಲ್ಲಿ ತೊಡಗಿರುವ ಸುಭಾಷ್, ಗುರು, ಮೋಹನ್ ಮತ್ತು ಬಿಳಿಕೆರೆ ನಿವಾಸಿಗಳಾದ ರೇವಣ್ಣ ಹಾಗೂ ಮಹೇಶ್ ತಲೆಮರೆಸಿ ಕೊಂಡಿದ್ದು, ಅವರುಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ. ಕ್ರಿಕೆಟ್ ಬೆಟ್ಟಿಂಗ್ ನಡೆಸುವವರ ಬಗ್ಗೆ ಮಾಹಿತಿ ಇದ್ದಲ್ಲಿ ಪೊಲೀಸ್ ಠಾಣೆಗೆ ಮಾಹಿತಿ ನೀಡ ಬೇಕಾಗಿ ಈ ಮೂಲಕ ಕೋರಲಾಗಿದೆ.