ಸುಂಟಿಕೊಪ್ಪ, ಏ. 1: ಯುವ ಜನತೆಗೆ ಜವಾಬ್ದಾರಿ ಹೆಚ್ಚಿದ್ದು ಸಾಮಾಜಿಕ ಕಾಳಜಿ ವಹಿಸಿ ಸಮಾಜ ಮುಖಿ ಕೆಲಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕೆಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಕೆವಿಜಿ ಕಾನೂನು ಕಾಲೇಜಿನ ಉಪನ್ಯಾಸಕ ಕೌಶಿಕ್ ಹೇಳಿದರು. ಇಲ್ಲಿನ ಗದ್ದೆ ಹಳ್ಳದ ಜನಾಸೇವಾ ಟ್ರಸ್ಟ್ ಜೀವನ ದಾರಿ ವೃದ್ಧಾಶ್ರಮ ಹಾಗೂ ಕೆವಿಜಿ ಕಾನೂನು ಕಾಲೇಜಿನ ರೋಟರ್ಯಾಕ್ಟ್ ಕ್ಲಬ್‍ನ ಸಂಯೋಗದಲ್ಲಿ ಆಶ್ರಮದ ವೃದ್ಧರೂ, ವಿಶೇಷಚೇತನರೂ ಬೆರೆತ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಜೀವನ ಸಾರ್ಥಕವಾಗ ಬೇಕಾದರೆ ಇತರರು ಕಷ್ಟದಲ್ಲಿರುವಾಗ ಸ್ಪಂದಿಸುವಂತಾಗಬೇಕು ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಮ್ಮ ಸುಂಟಿಕೊಪ್ಪ ಬಳಗದ ಅಧ್ಯಕ್ಷ ರಂಜಿತ್‍ಕುಮಾರ್, ಸಂದ್ಯಾಕಾಲದಲ್ಲಿ ಮನೆಯ ಹಿರಿಯರನ್ನು ಮಕ್ಕಳು ಮನೆಯಿಂದ ಹೊರ ಹಾಕದೆ ತಂದೆ ತಾಯಿಯನ್ನು ಕೊನೆ ಉಸಿರು ಇರುವವರೆಗೆ ಪಾಲನೆ ಪೋಷóಣೆ ಮಾಡಬೇಕೆಂದರು. ಜೇಸಿ ಸಂಸ್ಥೆಯ ಮಾಜಿ ಅಧ್ಯಕ್ಷ ಜಾಹೀದ್ ಅಹ್ಮದ್ ಮಾತನಾಡಿ ಅನಾಥ ಆಶ್ರಮದಲ್ಲಿರುವ ಹಿರಿಯರನ್ನು, ವಿಶೇಷಚೇತನರನ್ನು ಜನಾಸೇವಾ ಟ್ರಸ್ಟ್ ಜೀವನ ದಾರಿ ವೃದ್ಧಾಶ್ರಮದ ಅಧಕ್ಷ ರಮೇಶ ಅವರು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ಯುವಜನತೆ ಅದರಲ್ಲೂ ಕಾನೂನು ವಿದ್ಯಾರ್ಥಿಗಳು ಈಗಿನಿಂದಲೇ ಸಮಾಜದಲ್ಲಿ ನೊಂದವರಿಗೆ ನೆರವು ನೀಡುವ ಮನೋವೈಶಾಲ್ಯತೆ ತೋರ ಬೇಕೆಂದರು.

ಅಧ್ಯಕ್ಷತೆ ವಹಿಸಿದ್ದ ಜನಸೇವಾ ಟ್ರಸ್ಟ್ ಜೀವನ ದಾರಿ ವೃದ್ಧಾಶ್ರಮದ ಅಧ್ಯಕ್ಷ ರಮೇಶ ಜನ ಸೇವೆಗೆ ಒಳ್ಳೆಯ ಮನಸ್ಸು ಮತ್ತು ಸಮಾಜ ಸೇವೆ ಮಾಡುವವರಿಗೆ ಸಾರ್ವಜನಿಕರ ಸಹಾಯ ಹಸ್ತ ಮುಖ್ಯವೆಂದರು. ಮುಂದೆ ಆಶ್ರಮದಲ್ಲಿ ಅಗರ ಬತ್ತಿ, ಟೈಲರಿಂಗ್ ವೃತ್ತಿ ನಡೆಸುವ ಇರಾದೆ ಇದೆ ಎಂದು ಹೇಳಿದರು. ಆಶ್ರಮದಲ್ಲಿರುವ ಪ್ರಕಾಶ್ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ವೇದಿಕೆಯಲ್ಲಿ ಕೆವಿಜಿ ಕಾಲೇಜಿನ ಕ್ಷೇಮಾಭಿವೃದ್ಧಿ ಸಮಿತಿ ಅಧ್ಯಕ್ಷೆ ಟೀನಾ, ರೋಟರ್ಯಾಕ್ಟ್ ಸಂಸ್ಥೆಯ ಕಾರ್ಯದರ್ಶಿ ಶ್ಯಾಮ್ ಪ್ರಸಾದ್ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶ್ಯಾಮ್ ಉಪಸ್ಥಿತರಿದ್ದರು. ಗಾಯನ ಸ್ವಾಗತಿಸಿ, ಕೃಷ್ಣ ಪ್ರಾರ್ಥಿಸಿ, ಅರುಣ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.