ಮಡಿಕೇರಿ, ಏ. 1: ದಕ್ಷಿಣ ಭಾರತದ ವಿವಿಧೆಡೆಗಳಿಂದ ಮಡಿಕೇರಿಗೆ ಬಂದು ಮೂರು ದಿನಗಳ ಕ್ರಾಫ್ಟ್ ಮೇಳದಲ್ಲಿ ಭಾರತೀಯ ಕಲಾಪ್ರಕಾರಗಳನ್ನು ವಿವಿಧ ಶಾಲೆಗಳ 800 ವಿದ್ಯಾರ್ಥಿಗಳಿಗೆ ಪರಿಚಯಿಸು ವಲ್ಲಿ ಕಲಾಪರಿಣಿತರು ಯಶಸ್ವಿಯಾಗಿ ದ್ದಾರೆ. ಕೊಡಗಿನ ಮಕ್ಕಳಲ್ಲಿನ ಕಲಾಕಲಿಕೆಯಲ್ಲಿನ ಆಸಕ್ತಿ, ತಾಳ್ಮೆ ಬಗ್ಗೆ ಕಲಾತಜ್ಞರಿಂದ ಶ್ಲಾಘನೆ ವ್ಯಕ್ತವಾಗಿದೆ.

ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದಲ್ಲಿ ಸ್ಪಿಕ್ ಮೆಕೆ ಸಂಯುಕ್ತಾಶ್ರಯದಲ್ಲಿ ಆಯೋಜಿತ ಕ್ರಾಫ್ಟ್ ಮೇಳದಲ್ಲಿ ದಕ್ಷಿಣ ಭಾರತದ ಹಲವೆಡೆಗಳಿಂದ ಕಲಾಪರಿಣಿತರು ಪಾಲ್ಗೊಂಡು ಮೂರು ದಿನಗಳ ತರಬೇತಿ ನೀಡಿದರು.

ಅಂತರ್ರಾಷ್ಟ್ರೀಯ ಖ್ಯಾತಿಯ ಹೆಸರಾಂತ ನೃತ್ಯಕಲಾವಿದೆ ವೈಜಯಂತಿ ಕಾಶಿ ಮಕ್ಕಳಿಗೆ ನೃತ್ಯಪ್ರಕಾರದಲ್ಲಿ ತರಬೇತಿ ನೀಡಿದರು. ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಡಿಕೇರಿಯ ನಿಸರ್ಗ ಸಂಪತ್ತು ಯಾವದೇ ಕಲಾ ಪ್ರಕಾರದ ತಿಳುವಳಿಕೆಗೆ ಅತ್ಯಂತ ಸೂಕ್ತವಾಗಿದ್ದು, ನಿಸರ್ಗದ ನಡುವೆ ಕಲೆಯನ್ನು ಯುವಪೀಳಿಗೆಗೆ ಹೇಳಿಕೊಡುವದೇ ವಿನೂತನ ಅನುಭವ ಎಂದರು. ಭಾರತಕ್ಕೆ ಆಧ್ಯಾತ್ಮಿಕ ಮತ್ತು ಕಲಾರಂಗ ಜೀವಾಳವಾಗಿದ್ದು, ಭಾರತೀಯ ಕಲಾಪ್ರಕಾರಗಳನ್ನು ನಶಿಸಲು ಬಿಡದಂತೆ ಯುವಪೀಳಿಗೆಗೂ ಪರಿಚಯಿಸಬೇಕಾಗಿದೆ ಎಂದು ಹೇಳಿದರು.

ಬಾಲ್ಯದಲ್ಲಿಯೇ ಕಲೆಯ ಮಹತ್ವವನ್ನು ತಿಳಿಸಿದರೆ ಅದು ಮನದಲ್ಲಿ ಶಾಶ್ವತವಾಗಿರುತ್ತದೆ. ಶಾರೀರಿಕ, ಮಾನಸಿಕ ಏಕಾಗ್ರತೆ, ದೃಢÀತೆಗಾಗಿ ಕಲೆ ಅತ್ಯಂತ ಅಗತ್ಯ ಎಂದೂ ವೈಜಯಂತಿಕಾಶಿ ಪ್ರತಿಪಾದಿಸಿದರು.

ಚಿತ್ತಾರ ಕಲೆ: ಚಿತ್ತಾರ ಎಂಬ ನೈಸರ್ಗಿಕ ವಸ್ತುಗಳಿಂದ ರೂಪುಗೊಳ್ಳುವ ಕಲೆಯ ಬಗ್ಗೆ 120 ಮಕ್ಕಳಿಗೆ ತರಬೇತಿ ನೀಡಿದ ಶಿರಸಿಯ ಹೆಸರಾಂತ ಕಲಾವಿದ ಈಶ್ವರ ನಾಯಕ್, ಪ್ರಾಚೀನ ಕಾಲದಿಂದಲೂ ಧಾರ್ಮಿಕತೆಯ ಭಾಗವಾಗಿರುವ ಚಿತ್ತಾರ ಕಲೆಯನ್ನು ರಕ್ಷಿಸುವ ನಿಟ್ಟಿನಲ್ಲಿ ತರಬೇತಿ ಮೂಲಕ ದೇಶದಾದ್ಯಂತ ತರಬೇತಿ ಮೂಲಕ ಹೇಳಿಕೊಡುತ್ತಿರುವ ದಾಗಿ ತಿಳಿಸಿದರು. ವೃಕ್ಷಗಳ ಎಲೆ, ಪ್ರಕೃತಿದತ್ತವಾದ ವಸ್ತುಗಳಿಂದ ತಯಾರಾಗುವ ಬಣ್ಣಗಳನ್ನು ಬಳಸಿ ಚಿತ್ತಾರ ಕಲೆ ರೂಪುಗೊಳ್ಳುತ್ತದೆ. ಮಂಗಳ ಕಾರ್ಯಗಳಿಗೆ ಚಿತ್ತಾರ ಕಲೆ ಬಳಸಲ್ಪಡುತ್ತದೆ ಎಂದು ನಾಯಕ್ ಮಾಹಿತಿ ನೀಡಿದರು.

ಕಂಸಾಳೆ: ರಾಜ್ಯದ ಹೆಸರಾಂತ ಕಂಸಾಳೆ ಕಲಾವಿದ ಮೈಸೂರಿನ ರೇವಣ್ಣ, ಮಕ್ಕಳಿಗೆ ಕಂಸಾಳೆಯಲ್ಲಿ ತರಬೇತಿ ನೀಡುತ್ತಿದ್ದಾರೆ. 80 ಮಕ್ಕಳು ಮೂರು ದಿನಗಳಲ್ಲಿ ಕಂಸಾಳೆ ನೃತ್ಯ ತರಬೇತಿ ಪಡೆದಿದ್ದಾರೆ. ಕನ್ನಡನಾಡಿನ ಹೆಮ್ಮೆಯ ಕಲೆಯಾದ ಕಂಸಾಳೆಯನ್ನು ಯುವಪೀಳಿಗೆಗೆ ತಿಳಿಸಿಕೊಡುವ ಕೈಂಕರ್ಯ ತನ್ನದಾಗಿದ್ದಕ್ಕೆ ಹೆಮ್ಮೆಯಿದೆ ಎಂದು ರೇವಣ್ಣ ಹೇಳಿದರು. ಕೊಡಗಿನ ಮಕ್ಕಳ ಗ್ರಹಿಕೆಮಟ್ಟ ಅದ್ಬುತವಾಗಿದೆ ಎಂದು ಶ್ಲಾಘಿಸಿದರು.

ವರ್ಣಕಲೆ: ಹುಣಸೆಹಣ್ಣಿನ ಬೀಜದಿಂದ ತಯಾರಿಸಲ್ಪಟ್ಟ ಪುಡಿಯಿಂದ ರೂಪುಗೊಳ್ಳುವ ‘ಚೆರಿಯಲ್’ ಎಂಬ ವರ್ಣಮಯ ಮುಖವಾಡಗಳ ತರಬೇತಿ ನೀಡಿದ ತೆಲಂಗಾಣ ಮೂಲದ ನಾಗೇಶ್ವರ್ ಪ್ರತಿಕ್ರಿಯಿಸಿ, 400 ವರ್ಷಗಳ ಕಲಾಶ್ರೀಮಂತಿಕೆಯನ್ನು ಹೊಂದಿರುವ ಚೆರಿಯಲ್ ಮುಖವಾಡ, ಸಾಂಪ್ರ ದಾಯಿಕ ಕಲೆಯ ಸಂರಕ್ಷಣೆಗೆ ಯುವಪೀಳಿಗೆ ತರಬೇತಿ ಪಡೆದುಕೊಳ್ಳುವ ಅನಿವಾರ್ಯತೆಯಿದೆ ಎಂದು ಅನಿಸಿಕೆ ವ್ಯಕ್ತಪಡಿಸಿದರು.

ನಿರುಪಯುಕ್ತ ಕಾಗದ ಆಸರೆ

ತ್ಯಾಜ್ಯ ಮತ್ತು ನಿರುಪಯುಕ್ತ ಕಾಗದದಿಂದ ತಯಾರಿಸಲ್ಪಡುವ ‘ಪ್ಯಾಪಿಯರ್ ಮೇಶೆ’ ಎಂಬ ಕಲಾಕೃತಿಗಳ ಬಗ್ಗೆ ಆದ್ದೇಶ್ ಕುಮಾರ್ ತರಬೇತಿ ನೀಡಿದರು. ಯಾವದೇ ವಸ್ತುವೂ ನಿರುಪಯುಕ್ತವಲ್ಲ. ಕಸದಿಂದ ರಸ ಎಂಬಂತೆ ಅದ್ಬುತ ಕಲಾಕೃತಿ ರಚನೆ ಸಾಧ್ಯವಿದೆ ಎಂದು ಆದ್ದೇಶ್ ಅಭಿಪ್ರಾಯ ಹಂಚಿಕೊಂಡರು.

ಘೋಂದ್, ಘೋಂದ್ ಎಂಬ ವಿಭಿನ್ನವಾದ ಚಿತ್ರಕಲೆಯ ತರಬೇತಿ ಯಲ್ಲಿಯೂ ಜಿಲ್ಲೆಯ ಹಲವು ಕಲಾಸಕ್ತರು ವೆಂಕಟರಮಣ್ ಸಿಂಗ್ ಶ್ಯಾಮ್ ನೇತೃತ್ವದಲ್ಲಿ ಪಾಲ್ಗೊಂಡಿದ್ದರು. ಈ ಚಿತ್ರಕಲೆಯಿಂದ ಬದುಕು ಕಂಡುಕೊಳ್ಳಲು, ಅಂತಹ ಕಲಾ ಚಿತ್ರಗಳಿಗಿರುವ ಬೇಡಿಕೆಯಿಂದ ದೃಢವಾಗಿದ್ದಾಗಿ ಅವರು ನೆನಪಿಸಿದರು.

ಬಳ್ಳಾರಿಯ ಸೊಂಡೂರಿನ ಬಸಂತಿ ಮತ್ತು ಗಂಗೂಬಾಯಿ ಪ್ರತಿಕ್ರಿಯಿಸಿ, ಕಸೂತಿ, ನೇಯ್ಗೆ ಕಲೆಯನ್ನು 120 ಕ್ಕೂ ಅಧಿಕ ಮಹಿಳೆಯರಿಗೆ ಹೇಳಿಕೊಡಲಾಗುತ್ತಿದೆ. ಕೊಡಗಿನ ಮಹಿಳೆಯರು ಸಾಂಪ್ರ ದಾಯಿಕ ಕಲೆಯ ಬಗ್ಗೆ ತಿಳಿದು ಕೊಳ್ಳಲು ತೋರಿದ ಆಸಕ್ತಿ ಪ್ರಶಂಸನೀಯ ಎಂದರು. ಬದುಕು ಕಟ್ಟಿಕೊಳ್ಳುವಲ್ಲಿ ಇಂಥ ಕಲಾಪ್ರಕಾರಗಳು ನೆರವಾಗುತ್ತದೆ ಎಂದು ಬಸಂತಿ ಹೇಳಿದರು.

ಕಲರಿಪಯಟ್: ಗುರು ವಾಯೂರಿನ ಚಾವ್ಕಾಡ್ ಗ್ರಾಮದ ಕೃಷ್ಣದಾಸ್ ನೇತೃತ್ವದಲ್ಲಿ ಕೊಡಗಿನ ಮಕ್ಕಳು ಕೇರಳದ ಕಡಲತಡಿಯ ಖ್ಯಾತ ಸಮರಕಲೆ ಕಲರಿ ಪಯಟ್ ಕಲಿತಿದ್ದಾರೆ. ಈ ಕಲೆ ಒಂದು ರೀತಿ ಆಕರ್ಷಣೆಯೊಂದಿಗೆ ಆತ್ಮ ರಕ್ಷಣೆಗೆ ಸಹಕಾರಿ. ಪುರುಷರಿಗೆ ಸರಿಸಾಟಿ ಯಾಗಿ ಹೆಣ್ಣುಮಕ್ಕಳು ಕಲಾ ಚಮತ್ಕಾರ ಪ್ರದರ್ಶಿಸಿದರು.

ಅಂತೆಯೇ, ಹೆಸರಾಂತ ಯಕ್ಷಗಾನ ತರಬೇತುದಾರ ಶ್ರೀನಿವಾಸ ಆಸ್ಥಾನ್ 90 ಕ್ಕೂ ಅಧಿಕ ಮಕ್ಕಳಿಗೆ ಯಕ್ಷಗಾನ ಕಲೆಯಲ್ಲಿ ತರಬೇತಿ ನೀಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಶ್ರೀನಿವಾಸ ಆಸ್ಥಾನ್, ದಕ್ಷಿಣ ಅಥವಾ ಉತ್ತರ ಕರ್ನಾಟಕಕ್ಕೆ ಯಕ್ಷಗಾನ ಕಲೆ ಸೀಮಿತವಲ್ಲ. ಇತ್ತೀಚಿನ ವರ್ಷಗಳಲ್ಲಿ ಭಾರತಾದ್ಯಂತ ಯಕ್ಷಗಾನ ಕಲೆಗೆ ಮನ್ನಣೆ ದೊರಕುತ್ತಿದ್ದು ಅತ್ಯಂತ ಪ್ರಸಿದ್ದ ಕಲೆಗಳಲ್ಲಿ ಕನ್ನಡನಾಡಿನ ಯಕ್ಷಗಾನ ಕೂಡ ಒಂದಾಗಿದೆ. ಯಕ್ಷಗಾನ ಕಲಿಯಬೇಕು ಎಂಬವರ ಸಂಖ್ಯೆ ಹೆಚ್ಚಾಗುತ್ತಿರುವದು ಉತ್ತಮ ಬೆಳವಣಿಗೆ ಎಂದು ತೃಪ್ತಿ ವ್ಯಕ್ತಪಡಿಸಿದರು.

ಸ್ಪಿಕ್ ಮೆಕೆ ಅತ್ಯುತ್ತಮವಾಗಿ ಭಾರತೀಯ ಕಲಾರಂಗದ ಸಂರಕ್ಷಣೆಗೆ ಕಾರ್ಯಪ್ರವೃತ್ತವಾಗಿದ್ದು, ಭಾರತೀಯ ವಿದ್ಯಾಭವನ ಕೂಡ ಈ ನಿಟ್ಟಿನಲ್ಲಿ ಕೈಜೋಡಿಸಿರುವದು ಶ್ಲಾಘನೀಯ ಎಂದೂ ಕಲಾಪರಿಣಿತರು ಮೆಚ್ಚುಗೆ ವ್ಯಕ್ತಪಡಿಸಿದರು.

ಭಾರತೀಯ ವಿದ್ಯಾಭವನ ಕೊಡಗು ಕೇಂದ್ರದ ಅಧ್ಯಕ್ಷ ಕೆ.ಎಸ್. ದೇವಯ್ಯ, ಪ್ರಧಾನ ಕಾರ್ಯದರ್ಶಿ ಬಾಲಾಜಿ ಕಶ್ಯಪ್, ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ಮುಖ್ಯಕಾರ್ಯ ನಿರ್ವಹಣಾಧಿಕಾರಿ ವಿದ್ಯಾಹರೀಶ್, ವ್ಯವಸ್ಥಾಪಕ ರವಿ ಹಾಜರಿದ್ದು, ವಿಭಿನ್ನ ಕಲೆಗಳಿಗೆ ಪ್ರೋತ್ಸಾಹಿಸುತ್ತಿದ್ದಾರೆ.

ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದಲ್ಲಿ ‘ಸ್ಪಿಕ್‍ಮೆಕೆ’ ಸಹಯೋಗದಲ್ಲಿ ಆಯೋಜಿತ ಕ್ರಾಫ್ಟ್ ಮೇಳಕ್ಕಾಗಿ ಶಾಲಾ ಆವರಣವನ್ನು ವೈವಿಧ್ಯಮಯ ಕಲಾಪ್ರಕಾರಗಳಿಂದ ವಿದ್ಯಾರ್ಥಿಗಳು, ಶಿಕ್ಷಕಿಯರು ಅಲಂಕರಿಸಿ ಕಲಾಕಳೆಯನ್ನು ನೀಡಿದ್ದು ವಿಶೇಷವಾಗಿತ್ತು.

ಈ ಬೆಳಿಗ್ಗೆ ವಿದ್ಯಾಲಯದ ಪ್ರವೇಶದ್ವಾರದಲ್ಲಿ ನಾವು ನಿತ್ಯ ಆಹಾರಕ್ಕಾಗಿ ಬಳಸುವ ದಾನ್ಯಗಳಿಂದ ಬಿಡಿಸಲಾಗಿದ್ದ ರಂಗೋಲಿ ಎಲ್ಲರ ಗಮನ ಸೆಳೆಯಿತು. ಅಲ್ಲದೆ ಮೂರು ದಿನಗಳ ಈ ವಿಶೇಷ ಮೇಳಕ್ಕೆ ಇಂದು ತೆರೆ ಬಿದ್ದಿದೆ. ಶಿಬಿರಾರ್ಥಿಗಳಿಂದ ಆ ನಿಮಿತ್ತ ಪ್ರದರ್ಶನ ಕೂಡ ನಡೆಯಿತು.