ಸೋಮವಾರಪೇಟೆ, ಏ. 1: ಆಧುನಿಕ ಯುಗದಲ್ಲೂ ಸ್ತ್ರೀ-ಪುರುಷ ಅಸಮಾನತೆ ಜೀವಂತವಿರುವದು ವಿಷಾದನೀಯ ಎಂದು ಆಲೂರು-ಸಿದ್ದಾಪುರ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಸುಪರ್ಣ ಕೃಷ್ಣಾನಂದ ಹೇಳಿದರು.

ಇಲ್ಲಿನ ರೋಟರಿ ಸಂಸ್ಥೆ ವತಿಯಿಂದ ಮಹಿಳಾ ಸಮಾಜದಲ್ಲಿ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ಭ್ರೂಣ ಹತ್ಯೆ ಮಹಾಪರಾಧವಾಗಿದ್ದರೂ ಸಹ ಹೆಣ್ಣು ಭ್ರೂಣ ಹತ್ಯೆಯಾಗುತ್ತಿರುವದು ದುರಂತ. ಸಮಾಜದ ಎಲ್ಲಾ ಹಂತಗಳಲ್ಲಿಯೂ ಮಹಿಳೆಯರು ಪುರುಷರಿಗೆ ಸಮಾನವಾಗಿ ಬೆಳೆಯಬೇಕು ಮತ್ತು ಸಮಾನವಾದ ಗೌರವಕ್ಕೆ ಪಾತ್ರರಾಗಬೇಕು ಎಂದರು.

ಸೋಮವಾರಪೇಟೆ ರೋಟರಿ ಹಿಲ್ಸ್ ಅಧ್ಯಕ್ಷ ಪಿ. ಕೆ. ರವಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ರೋಟರಿ ಜಿಲ್ಲೆಯ ಸಹಾಯಕ ರಾಜ್ಯಪಾಲ ಧರ್ಮಪುರ ನಾರಾಯಣ್, ವಲಯ ಕಾರ್ಯದರ್ಶಿ ಕ್ರಿಜ್ವಲ್ ಕೋಟ್ಸ್, ಕಾರ್ಯದರ್ಶಿ ಪಿ. ನಾಗೇಶ್ ಉಪಸ್ಥಿತರಿದ್ದರು. ನಂತರ ರೋಟರಿ ಮಹಿಳೆಯರು ಮತ್ತು ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.