ಸೋಮವಾರಪೇಟೆ, ಏ. 1: ಇಲ್ಲಿನ ಪುಷ್ಪಗಿರಿ ಜೆಸಿಐ ಸಂಸ್ಥೆಯ ವತಿಯಿಂದ ‘ಸೆಲ್ಯೂಟ್ ದ ಸೈಲೆಂಟ್ ವರ್ಕರ್’ ಕಾರ್ಯಕ್ರಮದಡಿಯಲ್ಲಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಪೌರಕಾರ್ಮಿಕರಾಗಿ ಸೇವೆ ಸಲ್ಲಿಸುತ್ತಿರುವ ಗಾಂಧಿನಗರದ ರಾಮು ಅವರನ್ನು ಸನ್ಮಾನಿಸಲಾಯಿತು.
ಇಲ್ಲಿನ ಮಹಿಳಾ ಸಮಾಜದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಜೆಸಿಐ ಸಂಸ್ಥೆಯ ಸ್ಥಾಪಕಾಧ್ಯಕ್ಷ ತೇಜಸ್ವಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಪೌರ ಕಾರ್ಮಿಕರು ಪಟ್ಟಣದ ಸ್ವಚ್ಛತೆಯ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಸಮಾಜದ ಶುಚಿತ್ವಕ್ಕೆ ಪ್ರಮುಖ ಕಾರಣಕರ್ತರಾಗಿದ್ದಾರೆ. ನಮ್ಮ ಸುತ್ತಮುತ್ತಲ ವಾತಾವರಣ ಸ್ವಚ್ಛವಾಗಿದ್ದರೆ ಮಾತ್ರ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಜೆಸಿಐ ಅಧ್ಯಕ್ಷ ಬಿ.ಜಿ. ಪುರುಷೋತ್ತಮ್ ಮಾತನಾಡಿ, ಪೌರಕಾರ್ಮಿಕರಾಗಿರುವ ರಾಮು ಅವರು ತಮ್ಮ ಕರ್ತವ್ಯದೊಂದಿಗೆ ಸಮಾಜಮುಖಿಯಾಗಿಯೂ ಸೇವೆ ಸಲ್ಲಿಸುತ್ತಿದ್ದು, ಪಟ್ಟಣದಲ್ಲಿ ವೆಂಕಟರಮಣ ದೇವಾಲಯ ನಿರ್ಮಾಣದಲ್ಲೂ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಶ್ಲಾಘಿಸಿದರಲ್ಲದೆ, ಈ ಹಿನ್ನೆಲೆ ಸಂಸ್ಥೆಯಿಂದ ಗುರುತಿಸಿ ಅವರನ್ನು ಸನ್ಮಾನಿಸಲಾಗುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ನಿಕಟಪೂರ್ವ ಅಧ್ಯಕ್ಷ ಪ್ರಕಾಶ್, ವಲಯ ಅಧಿಕಾರಿ ಮಾಯಾ ಗಿರೀಶ್, ಜೆಸಿಐ ಕಾರ್ಯದರ್ಶಿ ಉಷಾರಾಣಿ ಗುರುಪ್ರಸಾದ್ ಸೇರಿದಂತೆ ಸದಸ್ಯರುಗಳು ಉಪಸ್ಥಿತರಿದ್ದರು.