ಮಡಿಕೇರಿ, ಏ. 1: ಹೆಸರಾಂತ ನೃತ್ಯಪಟು ವೈಜಯಂತಿಕಾಶಿ ಮತ್ತು ಪ್ರತಿಕ್ಷಾ ಕಾಶಿ ಅವರ ಕುಚಿಪುಡಿ ನೃತ್ಯವೈವಿಧ್ಯ ಕ್ರಾಫ್ಟ್ ಮೇಳದ ಅಂಗವಾಗಿ ಸಾಂಸ್ಕøತಿಕ ಕಾರ್ಯಕ್ರಮದ ಎರಡನೇ ದಿನ ಪ್ರೇಕ್ಷಕರ ಮನಸೆಳೆಯಿತು.

ಜಯಜಯ ಗಜಮುಖ ಎಂಬ ಗಣೇಶ ಸ್ತುತಿನೃತ್ಯದಿಂದ ಪ್ರಾರಂಭಗೊಂಡ ಅವರ ನೃತ್ಯ ನಂತರ ಶ್ರೀಕೃಷ್ಣನಿಂದ ಪುತಾನಿ ಸಂಹಾರದ ನೃತ್ಯ ಪ್ರೇಕ್ಷಕರನ್ನು ನೃತ್ಯಲೋಕದಲ್ಲಿ ತೇಲಿಸಿತು. ಕಂಸನ ಆಜ್ಞೆ ಪಾಲಿಸಲು ಪೂತನಿ ಶ್ರೀಕೃಷ್ಣನ ವಧೆಗೆ ಬಂದು ತಾನೇ ಕೊನೆಯುಸಿ ರೆಳೆಯುವ ದೃಶ್ಯವನ್ನು ನೃತ್ಯದ ಮೂಲಕ ಪ್ರದರ್ಶಿಸಿದರು.

ಶ್ರೀ ಕೃಷ್ಣನ ವರ್ಣನೆಯ ನೀಲಮೇಘಶ್ಯಾಮ ಎಂಬ ನೃತ್ಯವೂ ವೈಜಯಂತಿಕಾಶಿ ಮತ್ತು ಪುತ್ರಿ ಪ್ರತಿಕ್ಷಾ ಕಾಶಿ ಅವರಿಂದ ಮನಮೋಹಕವಾಗಿ ಮೂಡಿಬಂತು. ಹರಿವಾಣದ ಮೇಲೆ ನಿಂತುಕೊಂಡು ರೋಮಾಂಚಕಾರಿ ಯಾಗಿ ಈ ನೃತ್ಯವನ್ನು ಪ್ರದರ್ಶಿಸಲಾಯಿತು. ವೈಜಯಂತಿಕಾಶಿ ಹಾಗೂ ಪ್ರತಿಕ್ಷಾ ಕಾಶಿ ಪ್ರಸ್ತುತಿಯಲ್ಲಿ ಉಗ್ರನರಸಿಂಹಾವತಾರ ನೃತ್ಯವೂ ಮನ ಸೆಳೆಯಿತು.

ವಿಧೂಷಿ ರಮ್ಯ ಸೂರಜ್ ಹಿಮ್ಮೇಳದಲ್ಲಿ ಗಾಯಕಿಯಾಗಿದ್ದರೆ, 2017ರಲ್ಲಿ ಸಂಗೀತ ಅಕಾಡೆಮಿಯ ಪ್ರಶಸ್ತಿಗೆ ಭಾಜನರಾದ ವಿದ್ವಾನ್ ಜಿ.ಎಸ್. ನಾಗರಾಜ್ ಅವರಿಂದ ಮೃದಂಗ, ಕೊಳಲಿನಲ್ಲಿ ರಾಕೇಶ್ ದೀಕ್ಷಿತ್ ತಮ್ಮ ಪ್ರತಿಭೆ ತೋರಿದರು.

ಈ ಸಂದರ್ಭ ಮಾತನಾಡಿದ ವೈಜಯಂತಿ ಕಾಶಿ, ಆಂಧ್ರದ ಕೂಚಿಪುಡಿ ಎಂಬ ಗ್ರಾಮದಲ್ಲಿ ಉಗಮಿಸಿದ ಭಾರತೀಯ ಶಾಸ್ತ್ರೀಯ ನೃತ್ಯರೂಪಕ ಧಾರ್ಮಿಕತೆ ಬಿಂಬಿಸುವ ಕಲಾಪ್ರಕಾರವಾಗಿ ದೇವಾಲಯಗಳಲ್ಲಿ ಪ್ರದರ್ಶಿತವಾಗುವ ದೈವೀ ಕಲೆಯಾಗಿದೆ ಎಂದರು.

ಮಡಿಕೇರಿಯಲ್ಲಿ 100 ಕ್ಕೂ ಅಧಿಕ ಮಕ್ಕಳಿಗೆ ಕುಚಿಪುಡಿ ನೃತ್ಯಪ್ರಕಾರದ ಮೂಲ ಅಂಶಗಳನ್ನು ಕ್ರಾಫ್ಟ್ ಮೇಳದ ಮೂಲಕ ತಿಳಿಹೇಳುವ ಅವಕಾಶ ದೊರಕಿದ್ದು ತನ್ನ ಭಾಗ್ಯ ಎಂದು ಹೆಮ್ಮೆಯಿಂದ ಪ್ರತಿಕ್ರಿಯಿಸಿದರು.

ಹೆಸರಾಂತ ಕಲಾವಿದ ಗುಬ್ಬಿ ವೀರಣ್ಣ ವಂಶದ ಕಲಾವಿದೆ ಯಾಗಿರುವ ವೈಜಯಂತಿಕಾಶಿ, ನೃತ್ಯಪಟುವಾಗಿ ಖ್ಯಾತರಾಗಿರು ವದಲ್ಲದೇ ನೃತ್ಯಕಲೆಗೆ ಸಂಬಂಧಿಸಿ ದಂತೆ ಬೋಧನೆ, ನಟನೆ, ಸಂಶೋಧನೆಯಲ್ಲಿಯೂ ಸಕ್ರಿಯರಾಗಿದ್ದಾರೆ. 18 ದೇಶಗಳಲ್ಲಿ ನೃತ್ಯ ಪ್ರದರ್ಶನ ನೀಡಿರುವ ಇವರು, ಬೆಂಗಳೂರಿನಲ್ಲಿ ಶಾಂಭವಿ ನೃತ್ಯಶಾಲೆಯನ್ನೂ ಸ್ಥಾಪಿಸಿದ್ದಾರೆ. ಕೇಂದ್ರ ಸರ್ಕಾರದ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಸಂಗೀತ ನಾಟಕ ಅಕಾಡೆಮಿಯ ಅಧ್ಯಕ್ಷೆಯಾಗಿಯೂ ಕಾರ್ಯನಿರ್ವಹಿಸಿದ್ದಾರೆ.

ವೈಜಯಂತಿ ಕಾಶಿ ಅವರ ಪುತ್ರಿ ಪ್ರತಿಕ್ಷಾ ಕಾಶಿ, ಕಂಪ್ಯೂಟರ್ ಇಂಜಿನಿಯರಿಂಗ್ ಪದವೀಧರೆ ಯಾಗಿದ್ದು, ಯುವಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. 37ನೇ ಅಂತರ್ರಾಷ್ಟ್ರೀಯ ಆರ್ಯಭಟ ಪ್ರಶಸ್ತಿಗೂ ಭಾಜನರಾಗಿದ್ದು, ಚಿತ್ರದಲ್ಲಿನ ನಟನೆಗಾಗಿ ರಾಷ್ಟ್ರಪ್ರಶಸ್ತಿ ಗಳಿಸಿರುವ ಪ್ರತಿಕ್ಷಾ, ಯುವಪೀಳಿಗೆಗೆ ತಾಯಿಯೊಂದಿಗೆ ತರಬೇತಿ ನೀಡುತ್ತಿದ್ದಾರೆ. -ಅನಿಲ್ ಎಚ್.ಟಿ.