ಸೋಮವಾರಪೇಟೆ,ಮಾ.31: ತಾಲೂಕು ಕೇಂದ್ರದಲ್ಲಿರುವ ಇಲ್ಲಿನ ಸಾರ್ವಜನಿಕ ಆಸ್ಪತ್ರೆ ತಜ್ಞ ವೈದ್ಯರುಗಳಿಲ್ಲದೆ ನಲುಗುತ್ತಿದ್ದು, ಸೂಕ್ತ ಚಿಕಿತ್ಸೆಗಾಗಿ ಬಡ ರೋಗಿಗಳು ಪರದಾಡುವಂತಾಗಿದೆ.

300 ಹಾಸಿಗೆಯುಳ್ಳ ಸುಸಜ್ಜಿತ ಆಸ್ಪತ್ರೆಯನ್ನು ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದರೂ ಸಹ ಇದರ ಸದ್ಬಳಕೆ ಮಾತ್ರ ಸಾಧ್ಯವಾಗುತ್ತಿಲ್ಲ. ತಾಲೂಕಿನ 58 ಗ್ರಾಮಗಳ ರೋಗಿಗಳು ಈ ಆಸ್ಪತ್ರೆಯನ್ನು ಅವಲಂಬಿಸಿದ್ದು, ಪ್ರತಿನಿತ್ಯ ಏನಿಲ್ಲವೆಂದರೂ 300ರಿಂದ 400 ರೋಗಿಗಳು ಚಿಕಿತ್ಸೆಗೆ ಆಗಮಿಸುತ್ತಾರೆ. ಆದರೆ ರೋಗಿಗಳನ್ನು ತಪಾಸಣೆ ಮಾಡಬೇಕಾದ ತಜ್ಞ ವೈದ್ಯರುಗಳು ಈ ಆಸ್ಪತ್ರೆಯಲ್ಲಿ ಲಭ್ಯವಿರುವದಿಲ್ಲ.

ಶಸ್ತ್ರಚಿಕಿತ್ಸಾ ಘಟಕ, ಅಪಘಾತ ಹಾಗೂ ತುರ್ತು ಸೇವಾ ಘಟಕ, ಡಯಾಲಿಸಿಸ್ ಸೇವೆ, ಹೆರಿಗೆ ವಿಭಾಗ, ಎಕ್ಸ್ ರೇ ಘಟಕ, ಹೈಟೆಕ್ ರಕ್ತ ಪರೀಕ್ಷಾ ಕೇಂದ್ರದೊಂದಿಗೆ ವೈದ್ಯರಿಗೆ ಸುಸಜ್ಜಿತ ವಸತಿ ಗೃಹವನ್ನು ನಿರ್ಮಿಸಲಾಗಿದ್ದರೂ ಸಹ ಈ ಆಸ್ಪತ್ರೆಗೆ ಬರಲು ವೈದ್ಯರುಗಳು ಹಿಂದೇಟು ಹಾಕುತ್ತಿದ್ದಾರೆ.

ಆಸ್ಪತ್ರೆಗೆ 11 ಹುದ್ದೆ ಮಂಜೂರಾಗಿದ್ದರೂ ಕೇವಲ ಐವರು ವ್ಯೆದ್ಯರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಉಳಿದ 6 ಹುದ್ದೆಗಳು ಖಾಲಿ ಇವೆ. 32 ಮಂದಿ ಡಿ. ಗ್ರೂಪ್ ನೌಕರರ ಪೈಕಿ ಕೇವಲ ಮೂವರು ಖಾಯಂ ನೌಕರರು ಮಾತ್ರ ಸೇವೆಯಲ್ಲಿದ್ದಾರೆ. ಉಳಿದ 29 ಮಂದಿ ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿ ದ್ದಾರೆ.

ಶಸ್ತ್ರಚಿಕಿತ್ಸಕರು, ಮೂಳೆ ತಜ್ಞರ ಹುದ್ದೆ ಖಾಲಿ ಬಿದ್ದು ತಿಂಗಳುಗಳೇ ಕಳೆದಿವೆ. ಜನರಲ್ ಮೆಡಿಸಿನ್ ವಿಭಾಗದ ವ್ಯೆದ್ಯರುಗಳೇ ಇಲ್ಲ. ಅರವಳಿಕೆ ತಜ್ಞರಿಲ್ಲದೆ, ಶಸ್ತ್ರಚಿಕಿತ್ಸಾ ಘಟಕದ ಸಲಕರಣೆಗಳು ತುಕ್ಕು ಹಿಡಿಯುತ್ತಿವೆ. ಒಳರೋಗಿಗಳಿಲ್ಲದೆ ಕೆಲ ವಾರ್ಡ್‍ಗಳಿಗೆ ಬೀಗ ಜಡಿಯ ಲಾಗಿದೆ. ಸಣ್ಣಪುಟ್ಟ ಚಿಕಿತ್ಸೆಗೂ ಜಿಲ್ಲಾ ಕೇಂದ್ರ ಮಡಿಕೇರಿ ಯನ್ನು ಅವಲಂಬಿಸ ಬೇಕಿದೆ. ಎನ್.ಆರ್.ಹೆಚ್.ಎಂ. ಗುತ್ತಿಗೆ ಆಧಾರದ ಮೇಲೆ ನೇತ್ರತಜ್ಞರು, ರೇಡಿಯಾಲಜಿಸ್ಟ್ ಮತ್ತು ದಂತವೈದ್ಯರು ಕರ್ತವ್ಯ ನಿರ್ವಹಿಸುತ್ತಿ ದ್ದಾರೆ. ಇವರಲ್ಲಿ ಈರ್ವರು ವೈದ್ಯರು ಬೆಂಗಳೂರಿನಿಂದ ಆಗಮಿಸುತ್ತಿದ್ದಾರೆ. ಇಲ್ಲಿನ ವ್ಯೆದ್ಯರುಗಳೇ ಎರಡು ದಿನ ನಿರಂತರ ಕೆಲಸ ಮಾಡುವ ಒಪ್ಪಂದ ಮಾಡಿಕೊಂಡಿದ್ದು, ಎಲ್ಲಾ ರೋಗಗಳಿಗೂ ಓರ್ವ ವೈದ್ಯರೇ ಚಿಕಿತ್ಸೆ ನೀಡುವ ಪರಿಸ್ಥಿತಿಯಲ್ಲಿ ಆಸ್ಪತ್ರೆಯಿದೆ.

ಆಸ್ಪತ್ರೆಯಲ್ಲಿ ಸಿಗುವ ವೈದ್ಯರನ್ನು ಭೇಟಿ ಮಾಡಲು ಗಂಟೆಗಟ್ಟಲೆ ಸರದಿ ಸಾಲಿನಲ್ಲಿ ನಿಲ್ಲಬೇಕು. ರೋಗಿಗಳ ಸಂಖ್ಯೆ ಹೆಚ್ಚಾದಂತೆ, ಸೂಕ್ತ ಚಿಕಿತ್ಸೆ ಸಿಗುವದು ಅನುಮಾನ, ವೈದ್ಯರು ಒತ್ತಡದಲ್ಲೇ ಕೆಲಸ ಮಾಡಬೇಕು ಎಂದು ರೋಗಿಗಳೇ ಅಭಿಪ್ರಾಯಿಸುತ್ತಿ ದ್ದಾರೆ. ಒಟ್ಟಿನಲ್ಲಿ ಸುಸಜ್ಜಿತ ಕಟ್ಟಡ, ಅಗತ್ಯ ಸಲಕರಣೆ, ಯಂತ್ರೋಪಕರಣ ಇದ್ದರೂ ಅಗತ್ಯ ಸಿಬ್ಬಂದಿ, ವೈದ್ಯರು ಇಲ್ಲದೇ ಇಲ್ಲಿನ ಆಸ್ಪತ್ರೆ ರೋಗಿಗಳಿಂದ ದೂರವಾಗುತ್ತಿದೆ.

ಇದರೊಂದಿಗೆ ಸಣ್ಣಪುಟ್ಟ ಅಪಘಾತ ಸಂಭವಿಸಿದರೂ ಸಹ ಪ್ರಾಥಮಿಕ ಚಿಕಿತ್ಸೆ ನೀಡಿ ನಂತರ ಮಡಿಕೇರಿ, ಮೈಸೂರು, ಬೆಂಗಳೂರು, ಮಂಗಳೂರಿಗೆ ಶಿಫಾರಸ್ಸು ಮಾಡಲಾಗುತ್ತಿದೆ. ಕೋಟಿ ವೆಚ್ಚದ ತಾಲೂಕು ಕೇಂದ್ರದ ಆಸ್ಪತ್ರೆ ಸಣ್ಣ ಕ್ಲಿನಿಕ್‍ನಂತಾಗಿದೆ. ಅಗತ್ಯ ವೈದ್ಯರನ್ನು ನಿಯೋಜಿಸಲು ಸರ್ಕಾರ ತಕ್ಷಣ ಕ್ರಮಕೈಗೊಳ್ಳಬೇಕು. ಆಸ್ಪತ್ರೆಯ ಅವ್ಯವಸ್ಥೆಗಳ ವಿರುದ್ಧ ಜನಪ್ರತಿನಿಧಿಗಳು ಗಮನ ಹರಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.