ಕರಿಕೆ, ಮಾ. 31: ಕೊಡಗು ಜಿಲ್ಲೆಯ ಗಡಿಭಾಗದ ಗ್ರಾಮಗಳಾದ ಕರಿಕೆ, ಪೆರಾಜೆ, ಸಂಪಾಜೆ, ಚೆಂಬು ಗ್ರಾಮಗಳ ಪ್ರಮುಖ ತೋಟಗಾರಿಕಾ ಬೆಳೆಯಾದ ಗೇರುಬೆಳೆ ಈ ಬಾರಿ ಮಳೆಯ ಕೊರತೆ ಹಾಗೂ ಮೋಡಕವಿದ ವಾತಾವರಣ ದಿಂದಾಗಿ ಸಂಪೂರ್ಣವಾಗಿ ನಶಿಸಿ ಹೋಗಿದ್ದು, ರೈತ ಕಂಗಲಾಗಿದ್ದಾನೆ.

ಗೇರು ಬೆಳೆ ವಾರ್ಷಿಕ ಬೆಳೆಯಾಗಿದ್ದು ನವಂಬರ್, ಡಿಸೆಂಬರ್‍ನಲ್ಲಿ ಹೂ ಬಿಟ್ಟು ಜನವರಿ ಫೆಬ್ರವರಿಯಲ್ಲಿ ಫಸಲು ಬಿಡಲು ಆರಂಭಿಸುತ್ತದೆ ಈ ಸಂದರ್ಭದಲ್ಲಿ ಒಂದು ಅಥವಾ ಎರಡು ಮಳೆಯ ಅಗತ್ಯತೆ ಇರುತ್ತದೆ ಅಲ್ಲದೆ ನಿರಂತರವಾಗಿ ಮೋಡ ಕಾಣಿಸಿಕೊಂಡರೆ ಹೂಗಳು ಸುಟ್ಟು ಕರಕಲಾಗುತ್ತದೆ. ಈ ಭಾಗದ ಬಹುತೇಕ ಕೃಷಿಕರು ತಮ್ಮ ಜೀವನೋಪಾಯಕ್ಕೆ ಗೇರುಬೆಳೆಯನ್ನೆ ನೆಚ್ಚಿಕೊಳ್ಳಲು ಇತ್ತೀಚಿನ ದಿನಗಳಲ್ಲಿ ಅಡಕೆ, ಕಾಳು ಮೆಣಸು ಹಾಗೂ ರಬ್ಬರ್‍ನ ಧಾರಣೆ ಕುಸಿತವೇ ಕಾರಣ.

ಆದರೆ ಈ ಬಾರಿ ಸಕಾಲಕ್ಕೆ ಬೀಳದ ಮಳೆ ಹಾಗೂ ಬಿರು ಬಿಸಿಲಿನ ತಾಪಮಾನಕ್ಕೆ ಉತ್ತಮ ಬೆಳೆಯ ನಿರೀಕ್ಷೆಯಲ್ಲಿದ್ದ ಕೃಷಿಕನಿಗೆ ಬೆಲೆ ಕುಸಿತದ ಹೊಡೆತ ಕೂಡ ಬಿದ್ದಿದೆ. ಕಳೆದ ಸಾಲಿನಲ್ಲಿ ನೂರೈವತ್ತರಷ್ಟು ಇದ್ದ ಬೆಲೆ ಈ ಬಾರಿ ನೂರು ರೂಪಾಯಿಗೆ ಕುಸಿದಿರುವದು ಇನ್ನೂ ಕಂಗಲಾಗಿಸಿದೆ ಫಸಲು ಸಂಪೂರ್ಣವಾಗಿ ನಾಶವಾದ ಹಿನ್ನೆಲೆಯಲ್ಲಿ ಬೆಳೆಗಾರ ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ.

ಇದಲ್ಲದೆ ಈ ಬಾರಿ ಬೆಂಕಿ ರೋಗ ಕಾಣಿಸಿಕೊಂಡಿದ್ದು ಮರಗಳು ಒಣಗುತ್ತಿದೆ. ಕೂಡಲೇ ಸರಕಾರ ಎಚ್ಚೆತ್ತುಕೊಂಡು ಗೇರು ಬೆಳೆಗಾರರಿಗೆ ಬೆಂಬಲ ಬೆಲೆ ಹಾಗೂ ಪರಿಹಾರವನ್ನು ಒದಗಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕೆಂಬದು ಬೆಳೆಗಾರರ ಆಗ್ರಹವಾಗಿದೆ.

- ಹೊದ್ದೆಟ್ಟಿ ಸುಧೀರ್