ಮಡಿಕೇರಿ, ಮಾ. 31: ಕೊಡಗು ಮುಸ್ಲಿಂ ಸ್ಪೋಟ್ರ್ಸ್ ಅಸೋಸಿ ಯೇಷನ್ ಹಾಗೂ ಕಡಂಗದ ಅರಾಫ ಫ್ರೆಂಡ್ಸ್ ಸಂಯುಕ್ತ ಆಶ್ರಯದಲ್ಲಿ 16ನೇ ವರ್ಷದ ಕೊಡಗು ಮುಸ್ಲಿಂ ಕಪ್ ಕ್ರಿಕೆಟ್ ಪಂದ್ಯಾವಳಿ ತಾ. 20 ರಿಂದ 25 ರವರೆಗೆ ಕಡಂಗ ವಿಜಯ ಪ್ರೌಢಶಾಲೆ ಮೈದಾನದಲ್ಲಿ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅಸೋಸಿಯೇಷನ್ ಕಾರ್ಯದರ್ಶಿ ಸೈಫ್ ಆಲಿ ಹಾಗೂ ಇತರರು, ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆಯುವ ತಂಡಕ್ಕೆ ರೂ. 33,313, ದ್ವಿತೀಯ ತಂಡಕ್ಕೆ ರೂ. 22,786 ನಗದು ಹಾಗೂ ಟ್ರೋಫಿ ನೀಡಲಾಗುವದಲ್ಲದೆ, ಸೆಮಿಫೈನಲ್ ಹಂತ ಪ್ರವೇಶಿಸಿದ ತಂಡಕ್ಕೆ ಟ್ರೋಫಿ ಹಾಗೂ ಇತರ ಸಮಾಧಾನಕರ ಬಹುಮಾನಗಳನ್ನು ನೀಡಲಾಗುವದು ಎಂದರು.
ಕಳೆದ ಸಾಲಿನಲ್ಲಿ ಮಡಿಕೇರಿಯಲ್ಲಿ ತ್ಯಾಗ್ ಬಾಯ್ಸ್ ಆಶ್ರಯದಲ್ಲಿ ನಡೆದ ಪಂದ್ಯಾವಳಿಯಲ್ಲಿ ಸುಮಾರು 122 ತಂಡಗಳು ಭಾಗವಹಿಸಿದ್ದು, ಈ ಬಾರಿ 150ಕ್ಕೂ ಅಧಿಕ ತಂಡಗಳ ನಿರೀಕ್ಷೆಯಲ್ಲಿರುವದಾಗಿ ಹೇಳಿದರು.
ಪಂದ್ಯಾವಳಿಯ ಹೆಚ್ಚಿನ ಮಾಹಿತಿ ಹಾಗೂ ತಂಡಗಳ ನೋಂದಣಿಗಾಗಿ 9483834424, 9448270786 ಸಂಪರ್ಕಿಸಬಹುದೆಂದು ತಿಳಿಸಿದರು.
ಗೋಷ್ಠಿಯಲ್ಲಿ ಹಾಜರಿದ್ದ ಕೊಡಗು ಮುಸ್ಲಿಂ ಸ್ಪೋಟ್ರ್ಸ್ ಅಸೋಸಿಯೇಷನ್ನ ಮುಸ್ಲಿಂ ಕಪ್ ಕ್ರಿಕೆಟ್ ಸ್ಥಾಪಕ ಅಧ್ಯಕ್ಷ ಅಬ್ದುಲ್ ರಶೀದ್ ಮಾತನಾಡಿ, ಕಳೆದ ಸಾಲಿನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದ ಹಿನ್ನೆಲೆಯಲ್ಲಿ ಈ ಬಾರಿ ಕ್ರಿಕೆಟ್ ಪಂದ್ಯಾವಳಿ ನಡೆಸದಿರಲು ಚಿಂತನೆ ನಡೆಸಲಾಗಿತ್ತು. ಆದರೆ ಬಳಿಕ ಪಂದ್ಯಾವಳಿ ನಡೆಸುವದರೊಂದಿಗೆ ಇದರಲ್ಲಿ ಉಳಿಕೆಯಾಗುವ ಮೊತ್ತವನ್ನು ಪ್ರಕೃತಿ ವಿಕೋಪದಲ್ಲಿ ಸಂತ್ರಸ್ತರಾದ ಮೂರು ಅತಿ ಕಡುಬಡವ ಕುಟುಂಬಗಳಿಗೆ ನೆರವು ನೀಡಲು ತೀರ್ಮಾನಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಈ ಬಾರಿ ವಿಜೇತ ತಂಡಗಳಿಗೆ ನೀಡುವ ಬಹುಮಾನದ ಮೊತ್ತವನ್ನೂ ಕಡಿತ ಮಾಡಲಾಗಿದೆ ಎಂದು ಹೇಳಿದರು.
ಇದೇ ಸಂದರ್ಭ ಅವರು ಪಂದ್ಯಾವಳಿಯ ಧ್ವಜವನ್ನು ಅರಾಫ ಫ್ರೆಂಡ್ಸ್ ಅಧ್ಯಕ್ಷ ಅಬ್ದುಲ್ ರೆಹಮಾನ್ ಅವರಿಗೆ ಹಸ್ತಾಂತರಿಸಿದರು.
ಗೋಷ್ಠಿಯಲ್ಲಿ ಅಸೋಸಿಯೇಷನ್ ಖಜಾಂಚಿ ಶಮೀರ್, ಅರಾಫ ಪ್ರೆಂಡ್ಸ್ ಅಧ್ಯಕ್ಷ ಅಬ್ದುಲ್ ರೆಹಮಾನ್ ಹಾಗೂ ಸದಸ್ಯ ಸಮದ್ ಉಪಸ್ಥಿತರಿದ್ದರು.