ಸುಂಟಿಕೊಪ್ಪ, ಮಾ. 31: ಸ್ವಸ್ಥ ಪುನರ್ವಸತಿ ಶಾಲೆಯಲ್ಲಿ ಮೈಸೂರಿನ ಜೆಎಸ್‍ಎಸ್ ಕಾಲೇಜಿನ ಸ್ನಾತಕೋತ್ತರ ಕೇಂದ್ರದ ಸಮಾಜ ಕಾರ್ಯ ವಿಭಾಗದ ವತಿಯಿಂದ ಸಮಾಜ ಕಾರ್ಯ ಅಧ್ಯಯನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಡಾ. ನವೀನ್‍ಕುಮಾರ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿ, ನಮ್ಮ ದೇಶದಲ್ಲಿ ಹೆಚ್ಚಾಗಿ ಯುವಕ-ಯುವತಿಯರಿದ್ದು ಯುವ ಪೀಳಿಗೆಯಿಂದ ಕೂಡಿರುವ ದೇಶ ನಮ್ಮದು, ಸಮುದಾಯದಲ್ಲಿ ಸಮಾಜ ಕಾರ್ಯ ಮತ್ತು ಸಮಾಜ ಸೇವೆ ಮಾಡಲು ಸಾಕಷ್ಟು ಅವಕಾಶಗಳು ಇರುವದರಿಂದ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಜೀವನದಲ್ಲಿ ಯಶಸ್ಸನ್ನು ಸಾಧಿಸ ಬೇಕೆಂದರು. ಮತ್ತೊಬ್ಬ ಮುಖ್ಯ ಅತಿಥಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲ ಓ.ಡಿ. ತಿಮ್ಮಯ್ಯ ಮಾತನಾಡಿ, ಇಂದಿನ ಯುವಕರು-ಯುವತಿಯರು ಸಾಮಾಜಿಕ ಚಿಂತನೆಗಳನ್ನು ಬೆಳೆಸಿಕೊಳ್ಳಬೇಕು. ನಮ್ಮ ದೇಶ ಹೆಚ್ಚಾಗಿ ಗ್ರಾಮಗಳಿಂದ ಕೂಡಿರುವ ದರಿಂದ ಸಮಾಜ ಕಾರ್ಯ ಶಿಕ್ಷಣಾರ್ಥಿಗಳು ಹೆಚ್ಚಾಗಿ ತಮ್ಮ ಸೇವೆಗಳನ್ನು ಗ್ರಾಮೀಣ ಭಾಗಗಳಲ್ಲಿ ಮಾಡಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸ್ವಸ್ಥ ಸಂಸ್ಥೆಯ ನಿರ್ದೇಶಕಿ ಆರತಿ ಸೋಮಯ್ಯ ಮಾತನಾಡಿ, ಎಂ.ಎಸ್.ಡಬ್ಲ್ಯು. ಕೋರ್ಸನ್ನು ಮುಗಿಸಿದ ವಿದ್ಯಾರ್ಥಿಗಳು ಸರ್ಕಾರದ ಯೋಜನೆಗಳನ್ನು ಸಮುದಾಯಕ್ಕೆ ತಲಪಿಸುವಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದರು. ಶಾಲೆಯ ವಿಶೇಷ ಶಿಕ್ಷಕ ಮಂಜುನಾಥ, ಶಿಕ್ಷಕಿಯರು ಕಚೇರಿ ಸಿಬ್ಬಂದಿ ತೇಜ, ಪೋಷಕರು ಹಾಜರಿದ್ದರು.