ಮಡಿಕೇರಿ, ಮಾ. 30: ಜೋಡುಪಾಲದ ಕಿರಿಕಿಲು ರಸ್ತೆ ಹಾಗೂ ಉದ್ದಮೊಟ್ಟೆಗೆ ಹೋಗುವ ಸಂಪರ್ಕ ಸೇತುವೆಯನ್ನು ಮಳೆಗಾಲದ ಮುಂಚಿತವಾಗಿ ದುರಸ್ತಿಪಡಿಸಿಕೊಡುವಂತೆ ಒತ್ತಾಯಿಸಿ ಕಿರಿಕಿಲು ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಕಳೆದ ವರ್ಷ ಸಂಭವಿಸಿದ ಪ್ರಾಕೃತಿಕ ವಿಕೋಪದ ಸಂದರ್ಭ ಬೆಟ್ಟದಲ್ಲಿ ಜಲಸ್ಫೋಟಗೊಂಡು ಕಿರಿಕಿಲು ರಸ್ತೆ ಹಾಗೂ ಉದ್ದಮೊಟ್ಟೆಗೆ ಹೋಗುವ ಸೇತುವೆ ಕಲ್ಲುಬಂಡೆ ಮತ್ತು ಮರದ ದಿಮ್ಮಿಗಳಿಂದ ಸಂಪೂರ್ಣವಾಗಿ ಹದಗೆಟ್ಟಿದೆ. ಮುಂದಿನ ಮಳೆಗಾಲದ ಸಂದರ್ಭದಲ್ಲಿ ಮತ್ತೆ ಸಂಪರ್ಕ ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದರು.

ನಿತ್ಯದ ಜೀವನಕ್ಕೆ ತೊಡಕು ಹಾಗೂ ಪ್ರಾಣಭಯವಿರುವದರಿಂದ ಶೀಘ್ರ ಜಿಲ್ಲಾಧಿಕಾರಿಗಳು ಸ್ಥಳ ಪರಿಶೀಲಿಸಿ ಮಳೆಗಾಲದ ಮುಂಚಿತವಾಗಿ ಸಂಪರ್ಕ ಸೇತುವೆಯನ್ನು ದುರಸ್ತಿಪಡಿಸಿಕೊಡುವಂತೆ ಒತ್ತಾಯಿಸಿದರು.

ಈ ಸಂದರ್ಭ ಕಿರಿಕಿಲು ಗ್ರಾಮದ ಪ್ರಮುಖರಾದ ಇಬ್ರಾಹಿಂ, ಪ್ರಮೀಳ, ಸತೀಶ್ ಮತ್ತಿತರರು ಹಾಜರಿದ್ದರು. ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮದ ಭರವಸೆ ನೀಡಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.