ಮಡಿಕೇರಿ, ಮಾ. 30: ಇಂದಿನಿಂದ ಮೂರು ದಿನಗಳ ತನಕ, ಇಲ್ಲಿನ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದಲ್ಲಿ ಆಯೋಜ ನೆಗೊಂಡಿರುವ ವೈವಿಧ್ಯಮಯ ಕಾಫ್ಟ್ ಮೇಳಕ್ಕೆ ಈ ಬೆಳಿಗ್ಗೆ ಸಾಂಪ್ರದಾಯಿಕ ಚಾಲನೆ ದೊರೆಯಿತು. ಅಜ್ಞಾನದಿಂದ ಸುಜ್ಞಾನದೆಡೆಗೆ ಸಾಗುವ, ದೀಪೋಜ್ವಲನ ಮಂತ್ರ ಸಹಿತ ಶಂಬೋದ್ಘೋಷ ಮೊಳಗುವದ ರೊಂದಿಗೆ, ಸುಶ್ರಾವ್ಯ ಹಿಮ್ಮೇಳ ಸಹಿತ ಮೈ - ಮನ ರೋಮಾಂಚನ ಗೊಳಿಸುವ ಕಲರಿ ಪಯಟ್ ಮೂಲಕ ವಿಭಿನ್ನ ಕಲೆಗಳ ಸಂಗಮದ ಈ ಕ್ರಾಫ್ಟ್ ಮೇಳಕ್ಕೆ ಮುಂದಡಿ ಇಡಲಾಯಿತು.ವಿದ್ಯಾಲಯದ ಹೂ ಹರೆಯದ ಹೊಂಗನಸಿನ ಚಿಣ್ಣರಿಂದ ರೂಪು ಗೊಂಡಿರುವ ಅಲಂಕಾರಿಕ ತಳಿರು ತೋರಣಗಳು, ಕಣ್ಮನ ಸೆಳೆಯುವ ಹುಲ್ಲಿನ ಕುಟೀರ ಸಹಿತ ಅಡಿಕೆ ಹಾಳೆಯಿಂದ (ಮೊದಲ ಪುಟದಿಂದ) ರೂಪಿತ ಕಸೂತಿ ಮತ್ತು ಅಲ್ಲಲ್ಲಿ ಎದುರು ಗೊಳ್ಳುತ್ತಿದ್ದ ಪುಷ್ಪ ರಂಗೋಲಿಗಳ ಸ್ವಾಗತ ಎದುರಾಯಿತು. ಈ ನಡುವೆ ನವೋತ್ಸಹದ ಚಟುವಟಿಕೆಗಳ ತಾಣವಾಗಿ ವಿದ್ಯಾಲಯ ರೂಪುಗೊಂಡಿತು.
ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ಅಷ್ಟ ದಿಕ್ಕುಗಳಲ್ಲಿ ದೇಶೀಯ ಕಲಾ ಪ್ರಕಾರಗಳ ತರಬೇತಿ, ನೇಯ್ಗೆಯೊಂದಿಗೆ ನೃತ್ಯ, ಯೋಗ, ಕರಕುಶಲ ವಸ್ತುಗಳ ತಯಾರಿ ಸೇರಿದಂತೆ ಪ್ರತಿಯೊಬ್ಬರ ಅಭಿರುಚಿಗೆ ತಕ್ಕಂತೆ ಕಲಿಕೆಗೆ ಅದ್ಭುತ ವೇದಿಕೆ ಕಲ್ಪಿಸಿರುವದು ಹೆಜ್ಜೆ ಹೆಜ್ಜೆಗೂ ಪರಿಚಯಿಸಿಕೊಳ್ಳುವಂತಾಯಿತು. ಕೊಡಗು ಜಿಲ್ಲೆಯ ವಿವಿದೆಡೆಗಳ 800 ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಕ್ರಾಫ್ಟ್ ಮೇಳದಲ್ಲಿ ದಕ್ಷಿಣ ಭಾರತದ ವಿವಿಧೆಡೆಗಳಿಂದ ಬಂದಿರುವ ವೈವಿಧ್ಯಮಯ ಕಲಾ ತರಬೇತುದಾರರು ತರಬೇತಿ ನೀಡುತ್ತಿದ್ದಾರೆ.
ಕ್ರಾಫ್ಟ್ ಮೇಳ -2019 ನ್ನು ವಿದ್ಯುಕ್ತವಾಗಿ ಸಭಾ ಕಾರ್ಯಕ್ರಮದೊಂದಿಗೆ ಉದ್ಘಾಟಿಸಿದ ಭಾರತೀಯ ವಿದ್ಯಾಭವನ ಆಡಳಿತ ಮಂಡಳಿ ಉಪಾಧ್ಯಕ್ಷ ಕೆ.ಪಿ. ಉತ್ತಪ್ಪ, ಕೊಡಗು ಜಿಲ್ಲೆಯ ವಿದ್ಯಾರ್ಥಿಗಳಿಗೆ ದೊರಕಿರುವ ಕಲಾ ತರಬೇತಿಯ ಈ ಸುವರ್ಣಾವಕಾಶದ ಪ್ರಯೋಜನವನ್ನು ಶಿಬಿರದಲ್ಲಿ ಪಾಲ್ಗೊಂಡಿರುವ ವಿದ್ಯಾರ್ಥಿಗಳು ಸೂಕ್ತ ರೀತಿಯಲ್ಲಿ ಬಳಸಿಕೊಂಡು ಇತರ ವಿದ್ಯಾರ್ಥಿಗಳಿಗೂ ಮಾರ್ಗದರ್ಶನ ನೀಡಬೇಕೆಂದು ಕರೆ ನೀಡಿದರು.
ಭಾರತೀಯ ವಿದ್ಯಾಭವನ ಕೊಡಗು ಕೇಂದ್ರದ ಅಧ್ಯಕ್ಷ ಕೆ.ಎಸ್.ದೇವಯ್ಯ ಮಾತನಾಡಿ, ಸುಪ್ತಪ್ರತಿಭೆ ಹೊಂದಿರುವ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಇಂಥ ಕರಕುಶಲ ಕಾರ್ಯಾಗಾರ ಅತ್ಯಂತ ಹೆಚ್ಚು ಉಪಯುಕ್ತವಾಗಿದ್ದು, ಮೊದಲ ಬಾರಿಗೆ ಮಡಿಕೇರಿಯಲ್ಲಿ ಆಯೋಜಿತ ಕಾರ್ಯಾಗಾರಕ್ಕೆ ಅತ್ಯುತ್ತಮ ಸ್ಪಂದನೆ ದೊರಕಿರುವದು ನಮ್ಮ ಉತ್ಸಾಹ ಇಮ್ಮಡಿಗೊಳಿಸಿದೆ ಎಂದರು.
ಭಾರತೀಯ ವಿದ್ಯಾಭವನ ಕೊಡಗು ಕೇಂದ್ರದ ಗೌರವ ಕಾರ್ಯದರ್ಶಿ ಬಾಲಾಜಿ ಕಶ್ಯಪ್, ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿದ್ಯಾ ಹರೀಶ್, ಶೈಕ್ಷಣಿಕ ವಿಭಾಗದ ಅಧ್ಯಕ್ಷೆ ಊರ್ವಶಿ ಮುದ್ದಯ್ಯ, ಆಡಳಿತ ಮಂಡಳಿ ಪ್ರಮುಖರಾದ ರಘುಮಾದಪ್ಪ, ಶಾರದಾ ಮಂದಪ್ಪ ವೇದಿಕೆಯಲ್ಲಿದ್ದರು. ಇದೇ ಸಂದರ್ಭ ಕೇರಳದ ಗುರೂವಾಯೂರಿನ ಚೌವ್ಕಾಡ್ ಗ್ರಾಮದ ವಲ್ಲಭಾಟ್ ಕಲಾಕೇಂದ್ರದಿಂದ ಹೆಸರಾಂತ ಸಮರ ನೃತ್ಯ ಕಲರಿ ಪಯಟ್ ಪ್ರದರ್ಶನ ಕಲಾಪ್ರೇಮಿಗಳನ್ನು ರೋಮಾಂಚನಗೊಳಿಸಿತು.
ಏಪ್ರಿಲ್ 1 ರ ಸೋಮವಾರದವರೆಗೆ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದಲ್ಲಿ ನಡೆಯುವ ಕ್ಯಾಫ್ಟ್ ಮೇಳದಲ್ಲಿ ವಿವಿಧ ಕಲಾಪ್ರಕಾರಗಳ ಬಗ್ಗೆ ಜಿಲ್ಲೆಯ ಹಲವೆಡೆಗಳಿಂದ ಪಾಲ್ಗೊಂಡಿರುವ ವಿದ್ಯಾರ್ಥಿಗಳಿಗೆ ಸೂಕ್ತ ತರಬೇತಿ ನೀಡಲಾಗುತ್ತಿದೆ.
ನೃತ್ಯ ಕಲೆಯ ಬಗ್ಗೆ ಹೆಸರಾಂತ ಅಂತರರಾಷ್ಟ್ರೀಯ ಕಲಾವಿದೆ ವೈಜಯಂತಿ ಕಾಶಿ, ಪ್ರತಿಕ್ಷಾ ಕಾಶಿ, ಯಕ್ಷಗಾನ ಕಲೆಯ ಬಗ್ಗೆ ಹೆಸರಾಂತ ಯಕ್ಷಕಲಾವಿದ ಬೆಂಗಳೂರಿನ ಶ್ರೀನಿವಾಸ್ ಆಸ್ಥಾನ್, ಮಣ್ಣಿನಲ್ಲಿ ರೂಪಿತ ಚೆರಿಯಲ್ ಮುಖವಾಡ ರಚನೆ ಬಗ್ಗೆ ಆಂಧ್ರ ಪ್ರದೇಶದ ಕಲಾವಿದ ನಾಗೇಶ್ವರ್, ಚಿತ್ತಾರ ಕಲೆಯ ಬಗ್ಗೆ ಸಾಗರದ ಅಂತರರಾಷ್ಟ್ರೀಯ ಕಲಾವಿದ ಈಶ್ವರನಾಯಕ್, ಘೋಂಡಾ ಕಲೆಯ ಬಗ್ಗೆ ವೆಂಕಟರಮಣ್ ಸಿಂಗ್ ಶ್ಯಾಮ್, ಪ್ಯಾಪಿಯರ್ ಮೆಶೆ ಬಗ್ಗೆ ಆದ್ದೇಶ್ ಕುಮಾರ್ ಕರ್ನ್, ಕಸೂತಿ ಬಗ್ಗೆ ಬಳ್ಳಾರಿಯ ಬಸಂತಿ, ಗಂಗೂಬಾಯಿ, ಸಂಗೀತದಲ್ಲಿ ಮೈಸೂರಿನ ವಿದ್ವಾನ್ ಮಂಜುನಾಥ್ , ವಿದ್ವಾನ್ ನಾಗರಾಜ್, ಕಂಸಾಳೆ ಬಗ್ಗೆ ಕರ್ನಾಟಕದ ಹೆಸರಾಂತ ಕಲಾವಿದ ರೇವಣ್ಣ, ಕಲರಿಪಯಟ್ ಬಗ್ಗೆ ಕೇರಳದ ಕೃಷ್ಣದಾಸ್ ಅವರುಗಳಿಂದ ತರಬೇತಿ ನೀಡಲಾಗುತ್ತಿದೆ.
ಸಂಜೆ 4.30 ಗಂಟೆಗೆ ಈ ಕಲಾಪರಿಣಿತರು ತಮ್ಮಕಲಾಕೃತಿಗಳನ್ನು ವಿವಿಧ ಮಳಿಗೆಗಳಲ್ಲಿ ಪ್ರದರ್ಶನ ಮತ್ತು ಮಾರಾಟಕ್ಕೆ ವ್ಯವಸ್ಥೆಗೊಳಿಸಿದ್ದು ಸಾರ್ವಜನಿಕರಿಗೆ ಸಂಜೆ 4 ಗಂಟೆಯ ನಂತರ ಕ್ರಾಫ್ಟ್ ಮೇಳಕ್ಕೆ ಮುಕ್ತ ಪ್ರವೇಶವಿದೆ ಎಂದು ಮೇಳದ ಸಂಚಾಲಕ ಬಾಲಾಜಿ ಕಶ್ಯಪ್ ಮಾಹಿತಿ ನೀಡಿದ್ದಾರೆ.