ಮಡಿಕೇರಿ, ಮಾ. 29: ಮಡಿಕೇರಿಯ ಕನ್ನಂಡಬಾಣೆಯಲ್ಲಿರುವ ಐತಿಹಾಸಿಕ ಹಿನ್ನೆಲೆ ಹೊಂದಿರುವ ಕನ್ನಂಡ ದಳವಾಯಿ ಪಡೆಬೀರ ದೊಡ್ಡಯ್ಯ ಪೂಜೋತ್ಸವ ಕಾರ್ಯಕ್ರಮ ತಾ. 31ರಂದು ಅಪರಾಹ್ನ 2.30ಕ್ಕೆ ಅಲ್ಲಿನ ವೀರಕಲ್ಲು ಆವರಣದಲ್ಲಿ ನಡೆಯಲಿದೆ.
ಐತಿಹಾಸಿಕ ಹಿನ್ನೆಲೆ
ಕನ್ನಂಡ ಪಡೆಬೀರ ದೊಡ್ಡಯ್ಯ ವಿಚಾರಕ್ಕೆ ಸಂಬಂಧಿಸಿದಂತೆ ಐತಿಹಾಸಿಕವಾದ ಹಿನ್ನೆಲೆಯಿದೆ. 1960-66ರ ಅವಧಿಯಲ್ಲಿ ಕೊಡಗಿನಲ್ಲಿ ಮುದ್ದುರಾಜ, ಮುದ್ದಯ್ಯರಾಜ ಆಳ್ವಿಕೆ ಇದ್ದ ಸಂದರ್ಭದಲ್ಲಿ ಕನ್ನಂಡ ದೊಡ್ಡಯ್ಯ ಅವರು ಈ ರಾಜರ ಸೇನೆಯಲ್ಲಿ ಸೇನಾಧಿಕಾರಿ(ದಳಪತಿ)ಯಾಗಿದ್ದರು. ಈ ವೇಳೆಯಲ್ಲಿ ಶ್ರೀರಂಗಪಟ್ಟಣದಲ್ಲಿ ಪಾರುಪತ್ಯ ಮೆರೆದಿದ್ದ ಹೈದರಾಲಿ ಉತ್ತರ ಕೊಡಗನ್ನು ವಶಪಡಿಸಿಕೊಳ್ಳಲು ಮುಂದಾಗಿದ್ದ. ಈ ಸಂದರ್ಭ ಕೊಡಗಿನ ರಾಜರ ಸೇನೆಯಲ್ಲಿ ಸೇನಾಧಿಕಾರಿಯಾಗಿದ್ದ ದೊಡ್ಡಯ್ಯ ಅವರು ಸಾಹಸ ಮೆರೆದಿದ್ದರು. 1765ರಲ್ಲಿ ಹೈದರಾಲಿ ಸೈನ್ಯ ಇತ್ತ ಬಂದಾಗ ಶನಿವಾರಸಂತೆ ಹೋಬಳಿಯಲ್ಲಿ ಕೊಡಗಿನ ಸೈನ್ಯದೊಂದಿಗೆ ಹೋರಾಟ ನಡೆಸಿ ಅವರನ್ನು ಎರಡು ಬಾರಿ ಹಿಮ್ಮೆಟ್ಟಿಸಿದ್ದರು. ಆದರೂ ಪಟ್ಟು ಬಿಡದ ಹೈದರಾಲಿ ಮೂರನೇ ಬಾರಿ ಯುದ್ದಕ್ಕೆ ಬಂದಾಗ ಶನಿವಾರಸಂತೆ ಕಾಜೂರು ಬಾಗಿಲು ಕದನಕ್ಕೆ ದೊಡ್ಡಯ್ಯ ಸಜ್ಜಾದರು. ಈ ಸಂದರ್ಭ ರಾಜರೊಂದಿಗೆ ಚರ್ಚಿಸಿದ ಅವರು, ಹೈದರಾಲಿ ಸೈನ್ಯವನ್ನು ತಾವು 2 ಬಾರಿ ಸೋಲಿಸಿ ಗೌರವ ಉಳಿಸಿರುವೆ. ಈ ಬಾರಿ ಅವರನ್ನು ಸರ್ವನಾಶ ಮಾಡುವದು ಖಂಡಿತ... ಆದರೆ ತಾನು ಹಿಂದೆ ಬರುವ ನಂಬಿಕೆ ಈ ಬಾರಿ ತನಗಿಲ್ಲ ಎಂದು ಹೇಳಿ ತೆರಳಿದ್ದರಂತೆ. ಈ ಕದನದಲ್ಲಿ ಹೈದರಾಲಿ ಸೇನೆ ಬಿಸಿಲೆ ಘಾಟ್ ಮೂಲಕ ಪಲಾಯನ ಮಾಡಿದ್ದರೆ, ದೊಡ್ಡಯ್ಯ ಹುತಾತ್ಮರಾಗಿದ್ದರು. ಈ ಹಿನ್ನೆಲೆಯಲ್ಲಿ ರಾಜ ಮರ್ಯಾದೆಯಂತೆ ಇವರ ಶವ ಸಂಸ್ಕಾರವನ್ನು ಕನ್ನಂಡಬಾಣೆಯಲ್ಲಿ ನೆರವೇರಿಸಲಾಗಿದ್ದು, ಇದರ ನೆನಪಿನಲ್ಲಿ ಈ ಜಾಗದಲ್ಲಿ 1766ರಲ್ಲಿ ವೀರಕಲ್ಲು ಕಟ್ಟಲಾಗಿದೆ ಎಂಬದು ಪುರಾತನವಾದ ಪ್ರತೀತಿಯಾಗಿದೆ. ಈ ಮೂರನೇ ಕಾಜೂರು ಯುದ್ದದಲ್ಲಿ ಮಿಲಿಟರಿ ಕಮಾಂಡರ್ ಆಗಿ ಸಾವನ್ನಪ್ಪಿದ ಪ್ರಥಮ ಕೊಡವ ಸೇನಾಧಿಕಾರಿ ದೊಡ್ಡಯ್ಯ ಅವರಾಗಿದ್ದಾರೆ. ಇದಕ್ಕೆ ಐತಿಹಾಸಿಕವಾದ ದಾಖಲೆಗಳೂ ಇವೆ ಎಂಬದಾಗಿ ಕನ್ನಂಡ ಕುಟುಂಬ ಸಂಘದ ಅಧ್ಯಕ್ಷರಾಗಿರುವ ಭಾರತೀಯ ಸೇನೆಯಲ್ಲಿ ಕೆಲಸ ನಿರ್ವಹಿಸಿ ನಿವೃತ್ತರಾಗಿರುವ ಕರ್ನಲ್ ಅಚ್ಚಪ್ಪ ಅವರು ವಿವರ ನೀಡುತ್ತಾರೆ.
ವೀರಕಲ್ಲು ಸ್ಥಾಪಿಸಿದ ಸುತ್ತಮುತ್ತಲು ಕನ್ನಂಡ ಕುಟುಂಬದ ಜಾಗವಿದ್ದು, ಕೆಲವು ವರ್ಷಗಳ ಹಿಂದೆ ಆಗಿನ ಪುರಸಭೆಯ ಅನುಮತಿಯೊಂದಿಗೆ ಕನ್ನಂಡ ದೊಡ್ಡಯ್ಯ ವೃತ್ತವನ್ನು ಸ್ಥಾಪಿಸಲಾಗಿದೆ ಎಂದು ಅಚ್ಚಪ್ಪ ಅವರು ತಿಳಿಸಿದರು.
ದೊಡ್ಡಯ್ಯ ಅವರ ಶವ ಸಂಸ್ಕಾರ ಮಾಡಿದ ಸ್ಥಳದಲ್ಲಿ ಸ್ಥಾಪಿಸಲಾಗಿರುವ ವೀರಕಲ್ಲು ಸ್ಥಳದಲ್ಲಿ ವಾರ್ಷಿಕವಾಗಿ ಕುಟುಂಬದಿಂದ ಈ ಪೂಜೋತ್ಸವ ನಡೆಯುತ್ತಿದ್ದು, ಈ ಬಾರಿ ತಾ. 31 ರಂದು ಈ ಕಾರ್ಯಕ್ರಮ ಜರುಗಲಿರುವದಾಗಿ ಅವರು ತಿಳಿಸಿದ್ದಾರೆ.