ಮಡಿಕೇರಿ, ಮಾ. 29: ಲೋಕಸಭಾ ಸಾರ್ವತ್ರಿಕ ಚುನಾವಣೆಯ ಮತದಾನ ಏಪ್ರಿಲ್ 18 ರಂದು ನಡೆಯಲಿದ್ದು, ಜಿಲ್ಲೆಯ 543 ಮತಗಟ್ಟೆಗಳಿಗೆ ನಿಯೋಜಿಸಿರುವ ವಿವಿಧ ಹಂತದ ಅಧಿಕಾರಿಗಳು ಚುನಾವಣಾ ಆಯೋಗದ ನಿರ್ದೇಶನ ಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಸೂಚಿಸಿದ್ದಾರೆ.
ಲೋಕಸಭಾ ಚುನಾವಣೆ ಹಿನ್ನೆಲೆ ಪಿಆರ್ಒ, ಎಪಿಆರ್ಒ, 2ನೇ, 3ನೇ ಮತ್ತು 4ನೇ ಮತಗಟ್ಟೆ ಅಧಿಕಾರಿಗಳಿಗೆ ನಗರದ ಸಂತ ಜೋಸೆಫರ ಶಾಲೆ ಹಾಗೂ ವೀರಾಜಪೇಟೆಯ ಸಂತ ಅನ್ನಮ್ಮ ಶಾಲೆಯಲ್ಲಿ ಏರ್ಪಡಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಚುನಾವಣೆಯಲ್ಲಿ ಮತಗಟ್ಟೆ ಅಧಿಕಾರಿಗಳ ಜವಾಬ್ದಾರಿ ಮಹತ್ತರ ವಾಗಿದ್ದು, ಮಸ್ಟರಿಂಗ್ ದಿನ ಮತ್ತು ಮತಗಟ್ಟೆಗಳಲ್ಲಿ ನಿರ್ವಹಿಸಬೇಕಾದ ಕರ್ತವ್ಯ ಮತ್ತು ಡಿಮಸ್ಟರಿಂಗ್ ಸಂದರ್ಭ ಅನುಸರಿಸಬೇಕಾದ ಕಾರ್ಯಗಳ ಬಗ್ಗೆ ಅವರು ಮಾಹಿತಿ ನೀಡಿದರು.
ವಿದ್ಯುನ್ಮಾನ ಮತಯಂತ್ರಗಳು, ಅಣುಕು ಮತದಾನ, ಅಂಚೆ ಮತಪತ್ರ, ಮಸ್ಟರಿಂಗ್ ಮತ್ತು ಡಿಮಸ್ಟರಿಂಗ್ ಮತ್ತಿತರ ಬಗ್ಗೆ ಹೆಚ್ಚಿನ ನಿಗಾವಹಿಸ ಬೇಕಿದೆ. ಆ ನಿಟ್ಟಿನಲ್ಲಿ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸುವಂತೆ ನಿರ್ದೇಶನ ನೀಡಿದರು. ಮತಗಟ್ಟೆ ಅಧಿಕಾರಿಗಳು ಮತಗಟ್ಟೆ ಕೇಂದ್ರದ ಸಂಪೂರ್ಣ ಜವಾಬ್ದಾರಿ ನೋಡಿಕೊಳ್ಳಬೇಕಿದೆ, ಎಲ್ಲಾ ಹಂತದ ಮತಗಟ್ಟೆ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಬೇಕು. ಮತದಾರರು ಚುನಾವಣಾ ಆಯೋಗ ನೀಡಿರುವ ಮತದಾರರ ಭಾವಚಿತ್ರದ ಗುರುತಿನ ಚೀಟಿ ಅಥವಾ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾನ ಮಾಡುವದಕ್ಕೆ ಅವಕಾಶ ನೀಡಬೇಕಿದೆ ಎಂದು ಅವರು ತಿಳಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಪಿ. ಶಿವರಾಜು ಮಾತನಾಡಿ, ಮಸ್ಟರಿಂಗ್ ದಿನದಂದು ಮತಗಟ್ಟೆಯ ಎಲ್ಲಾ ಸಿಬ್ಬಂದಿ ಕಡ್ಡಾಯವಾಗಿ ನಿಗದಿತ ಸಮಯಕ್ಕೆ ಹಾಜರಾಗಬೇಕು. ತಮ್ಮ ತಮ್ಮ ಮತಗಟ್ಟೆಗೆ ಸಂಬಂಧಿಸಿದ ಸಿಬ್ಬಂದಿಗಳನ್ನು ಸೇರಿಸಿಕೊಂಡು ಪರಸ್ಪರ ಪರಿಚಯ ಮಾಡಿಕೊಳ್ಳಬೇಕು, ಹಾಜರಾತಿ ಪುಸ್ತಕದಲ್ಲಿ ಕಡ್ಡಾಯವಾಗಿ ಸಹಿ ಮಾಡುವದು. ಯಾವದೇ ಮತಗಟ್ಟೆ ಅಧಿಕಾರಿ ಇತರ ಸಿಬ್ಬಂದಿ ಗೈರಾದಲ್ಲಿ ಸಹಾಯಕ ಚುನಾವ ಣಾಧಿಕಾರಿ ಹಾಗೂ ತಹಶೀಲ್ದಾರರಿಗೆ ತಿಳಿಸುವದು. ರಜೆ ಹೋದಲ್ಲಿ ಬದಲಿ ವ್ಯವಸ್ಥೆ ಮಾಡಿಕೊಳ್ಳುವದು ಮಸ್ಟರಿಂಗ್ ಪಟ್ಟಿಯಿಂದ ದೃಢಪಡಿಸಿಕೊಳ್ಳಬೇಕು ಎಂದರು.
ಉಪ ವಿಭಾಗಾಧಿಕಾರಿ ಹಾಗೂ ಮಡಿಕೇರಿ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಟಿ. ಜವರೇಗೌಡ ಮಾತನಾಡಿ, ಮತಗಟ್ಟೆ ಅಧಿಕಾರಿಗಳು ಶಾಂತಿ ಮತ್ತು ನಿಷ್ಪಕ್ಷಪಾತವಾಗಿ ಚುನಾವಣಾ ಕರ್ತವ್ಯ ನಿರ್ವಹಿಸಬೇಕು. ಚುನಾವಣಾ ಅಧಿಕಾರಿಯಿಂದ ಮತದಾನಕ್ಕೆ ಸಂಬಂಧಿಸಿದ ಎಲ್ಲಾ ಸಾಮಗ್ರಿಗಳನ್ನು ಪಡೆದು ಚುನಾವಣೆ ಕರ್ತವ್ಯ ನಿರ್ವಹಿಸಬೇಕು. ಮಸ್ಟರಿಂಗ್ ಮತ್ತು ಡಿಮಸ್ಟರಿಂಗ್ ದಿನ ಚುನಾವಣೆಗೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಬೇಕು ಎಂದರು. ಸಾಮಗ್ರಿ ಪಡೆದ ನಂತರ ಮತ್ತೊಮ್ಮೆ ಸಾಮಗ್ರಿ ಪರಿಶೀಲಿಸಿಕೊಳ್ಳುವದು. ಮತಗಟ್ಟೆಗೆ ತಲಪುವ ವಾಹನ ಗುರುತಿಸಿ ಸ್ಥಳ ಕಾಯ್ದಿರಿಸಿಕೊಳ್ಳುವಂತೆ ಹೇಳಿದರು.
ಮಾಸ್ಟರ್ ತರಬೇತಿದಾರರಾದ ವಾಲ್ಟರ್ ಡಿಮೆಲ್ಲೊ ಮತ್ತು ಷಂಶುದ್ದಿನ್ ವಿದ್ಯುನ್ಮಾನ ಮತಯಂತ್ರ, ಅಣಕು ಮತದಾನ, ಕಂಟ್ರೋಲ್ ಹಾಗೂ ಬ್ಯಾಲೆಟ್ ಯೂನಿಟ್, ವಿವಿಪ್ಯಾಟ್ ಅಳವಡಿಸುವದು.
ಮತಗಟ್ಟೆ ಕೇಂದ್ರದಲ್ಲಿ ಮತದಾನದಂದು ಪೂರ್ವ ಸಿದ್ಧತೆ ಮಾಡಿಕೊಳ್ಳುವ ಬಗ್ಗೆ ಮಾಹಿತಿ ನೀಡಿದರು. ತಹಶೀಲ್ದಾರರಾದ ನಟೇಶ್, ಗೋವಿಂದರಾಜು ಇತರರು ಇದ್ದರು.