ಮಡಿಕೇರಿ, ಮಾ. 30: ಗೃಹಿಣಿಯೊಬ್ಬರ ಮೊಬೈಲ್‍ನಿಂದ, ಆಕೆಯ ಪತಿ ಪೊಲೀಸ್ ಸಹಾಯಕ ಠಾಣಾಧಿಕಾರಿಯೊಬ್ಬರಿಗೆ ಆಮಿಷವೊಡ್ಡಿ ಮನೆಗೆ ಕರೆಸಿಕೊಂಡು ಮನಬಂದಂತೆ ಥಳಿಸಿದ್ದಲ್ಲದೆ, ಗಂಭೀರ ಗಾಯಗೊಳಿಸಿರುವ ಸಂಬಂಧ ಪೊಲೀಸ್ ಪತ್ನಿ ಇಲಾಖೆಯ ಮೇಲಿನ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.
ತಾ. 27ರಂದು ಸಿದ್ದಾಪುರ ಠಾಣೆಯ ಸಹಾಯಕ ನಿರೀಕ್ಷಕರಾಗಿ ರುವ ವಸಂತ ಅವರನ್ನು ಮನೆಗೆ ಕರೆಸಿಕೊಂಡಿರುವ ವ್ಯಕ್ತಿ, ತನ್ನ ಸ್ನೇಹಿತರೊಂದಿಗೆ ಮುಖಕ್ಕೆ ಖಾರದ ಪುಡಿ ಎರಚಿದ್ದಲ್ಲದೆ, ತೀವ್ರ ಹಲ್ಲೆ ನಡೆಸಿ, ಬಳಿಕ ಗ್ರಾಮಾಂತರ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.
ಅಲ್ಲದೆ, ಸಂಬಂಧಿಸಿದ ವ್ಯಕ್ತಿ ತನ್ನ ಪತ್ನಿ ಮೂಲಕ ಪೊಲೀಸ್ ಠಾಣೆಗೆ ಪುಕಾರು ಸಲ್ಲಿಸಿ, ಎಎಸ್‍ಐ ವಿರುದ್ಧ ಕ್ರಮಕ್ಕೆ ಒತ್ತಾಯಿಸಿರುವ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ತನ್ನ ಪತಿಯನ್ನು ಉದ್ದೇಶಪೂರ್ವಕ ಬರಮಾಡಿಕೊಂಡು ದೈಹಿಕ ಹಿಂಸೆ ನೀಡಲಾಗಿದೆ ಎಂದು ಇಲಾಖೆಯ ವರಿಷ್ಠಾಧಿಕಾರಿ ಬಳಿ ಮಹಿಳೆ ಅಳಲು ತೋಡಿಕೊಂಡಿದ್ದಾರೆ.
ಇದೀಗ ಮೇಲಿನ ಪ್ರಸಂಗದಿಂದ ಸಂಬಂಧಿಸಿದ ವ್ಯಕ್ತಿಗಳು ಇಕ್ಕಟ್ಟಿನಲ್ಲಿ ಸಿಲುಕಿಕೊಂಡಿದ್ದು, ತಮ್ಮ ದೂರನ್ನು ಹಿಂಪಡೆಯುವ ಮೂಲಕ ಹಲ್ಲೆಗೊಳಗಾಗಿರುವ ಎಎಸ್‍ಐ ಜತೆ ರಾಜಿ ಸಂಧಾನಕ್ಕೆ ಯತ್ನಿಸುತ್ತಿರುವ ಕುರಿತು ಮೂಲಗಳಿಂದ ‘ಶಕ್ತಿ’ಗೆ ಮಾಹಿತಿ ಲಭಿಸಿದೆ.