ಮಡಿಕೇರಿ, ಮಾ. 29: ಜೀವನದಿ ಕಾವೇರಿಯ ಉಗಮ ಸ್ಥಳ ತಲಕಾವೇರಿಯಲ್ಲಿ ಏ. 5 ರಿಂದ 11 ರವರೆಗೆ ನಡೆಯುವ ಬ್ರಹ್ಮ ಕಲಶೋತ್ಸವಕ್ಕೆ ಭಾಗಮಂಡಲ, ತಲಕಾವೇರಿ ದೇವಾಲಯ ವ್ಯವಸ್ಥಾಪನಾ ಸಮಿತಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದು, ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಕ್ಷೇತ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಭಾಗಮಂಡಲದ ತ್ರಿವೇಣಿ ಸಂಗಮ ಹಾಗೂ ತಲಕಾವೇರಿಯಲ್ಲಿ ಪೂಜೆ ಸಲ್ಲಿಸಿದ ಜಿಲ್ಲಾಧಿಕಾರಿಗಳು ಬ್ರಹ್ಮಗಿರಿ ಬೆಟ್ಟಕ್ಕೆ ತೆರಳಿ ಅಲ್ಲಿನ ವ್ಯವಸ್ಥೆಗಳ ಬಗ್ಗೆ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ಎಸ್. ತಮ್ಮಯ್ಯ ಅವರಿಂದ ಮಾಹಿತಿ ಪಡೆದರು.
ಕ್ಷೇತ್ರ ವ್ಯಾಪ್ತಿಯಲ್ಲಿ ಸುಣ್ಣಬಣ್ಣ ಬಳಿಯುವದರೊಂದಿಗೆ ಬ್ರಹ್ಮ ಕಲಶೋತ್ಸವಕ್ಕೆ ಮೆರಗು ನೀಡುವಂತೆ ತಿಳಿಸಿದ ಜಿಲ್ಲಾಧಿಕಾರಿ, ವಾಹನ ನಿಲುಗಡೆಗೆ ಅಗತ್ಯ ವ್ಯವಸ್ಥೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು.
ತಲಕಾವೇರಿಯಲ್ಲಿರುವ ಕೆಎಸ್‍ಟಿಡಿಸಿಯ ಹಳೆಯ ಕಟ್ಟಡವನ್ನು ತೆರವುಗೊಳಿಸಲು ಈಗಾಗಲೇ ಆದೇಶ ನೀಡಲಾಗಿದೆ. ಆದರೆ ಇಲ್ಲಿಯವರೆಗೆ ಕಟ್ಟಡ ತೆರವು ಆಗಿಲ್ಲವೆಂದು ಆಕ್ಷೇಪ ವ್ಯಕ್ತಪಡಿಸಿದ ಅವರು, ತಕ್ಷಣ ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಿದರು.
ಶೌಚಾಲಯ ಮತ್ತು ಬಟ್ಟೆ ಬದಲಿಸುವ ಕೋಣೆಯನ್ನು ಪರಿಶೀಲಿಸಿದರಲ್ಲದೆ ಭಾಗಮಂಡಲ ದೇವಾಲಯ ಹಾಗೂ ತ್ರಿವೇಣಿ ಸಂಗಮಕ್ಕೆ ತೆರಳಿ ಅಲ್ಲಿನ ವ್ಯವಸ್ಥೆಗಳ ಬಗ್ಗೆ ಚರ್ಚಿಸಿದರು.
ದೇವಾಲಯದ ಪೌಳಿಯ ಒಳಗೆ ಮಳೆಗಾಲದಲ್ಲಿ ನೀರು ಸೋರುತ್ತಿದೆ ಎಂದು ಗಮನ ಸೆಳೆದಾಗ ತಕ್ಷಣ ದುರಸ್ತಿ ಕಾರ್ಯ ಕೈಗೊಳ್ಳಬೇಕು ಮತ್ತು ತಲಕಾವೇರಿ ಕ್ಷೇತ್ರದ ಎಲ್ಲಾ ಕಡೆ ಸಿಸಿ ಕ್ಯಾಮರ ಅಳವಡಿಸುವಂತೆ ಸೂಚಿಸಿದರು.
ಸಮಿತಿಯ ಅಧ್ಯಕ್ಷ ಬಿ.ಎಸ್. ತಮ್ಮಯ್ಯ ಮಾತನಾಡಿ, ಏ. 10 ರಂದು ಅಗಸ್ತ್ಯೇಶ್ವರ ಪ್ರತಿಷ್ಠಾಪನೆ ಹಾಗೂ ಏ. 11 ರಂದು ರುದ್ರಹೋಮ ನಡೆಯಲಿದೆ ಎಂದು ತಿಳಿಸಿದರು.
ಈ ಸಂದರ್ಭ ಪಾರುಪತ್ತೆದಾರ ಕೊಂಡೀರ ಪೊನ್ನಣ್ಣ, ಅರ್ಚಕ ನಾರಾಯಣ ಆಚಾರ್ ಹಾಗೂ ಶ್ರೀನಿಧಿ ಆಚಾರ್ ಹಾಜರಿದ್ದರು.