ವೀರಾಜಪೇಟೆ, ಮಾ. 29: ಜಿಲ್ಲೆಯಲ್ಲಿ ಸಂಭವಿಸಿದ ಜಲಪ್ರಳಯಕ್ಕೆ ತುತ್ತಾದವರಿಗೆ ಪುನರ್ ವಸತಿ ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಸ್ಥಾಪನೆಗೊಂಡ ಅಮ್ಮತ್ತಿ ಮೂಲದ ‘ರೀ ಬಿಲ್ಡ್ ಕೊಡಗು’ ಮಾರುಕಟ್ಟೆಯಲ್ಲಿ ಅಗ್ಗದ ದರದಲ್ಲಿ ಕೈ ಚೀಲ ಬಿಡುಗಡೆಗೊಳಿಸಿತು.
ಅಮ್ಮತ್ತಿ ಗ್ರಾಮದ ರಿ ಬಿಲ್ಡ್ ಕೊಡಗು ಸಂಸ್ಥೆಯ ವತಿಯಿಂದ ಸರ್ಕಾರಿ ಪ್ರೌಢಶಾಲೆಯ ಸಭಾಂಗಣದಲ್ಲಿ ಆಯೋಜನೆಗೊಂಡ ಸಮಾರಂಭದಲ್ಲಿ ಅಗ್ಗದ ದರದ ಬಟ್ಟೆ ಕೈಚೀಲವನ್ನು ಸ್ಥಳೀಯರಾದ ರೀಟಾ ಚೆಂಗಪ್ಪ ಬಿಡುಗಡೆಗೊಳಿಸಿ, ಕೊಡಗಿನಲ್ಲಿ ಸಂಭವಿಸಿದ ದುರಂತಕ್ಕೆ ಹಲವು ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಸ್ನೇಹಿತರಿಂದ ದೇಣಿಗೆ ಸಂಗ್ರಹಿಸಿ ನೊಂದವರಿಗೆ ಸಹಾಯ ಹಸ್ತ ನೀಡಿರುವ ಸಂಸ್ಥೆಯು ಮುಂದೆ ಹಲವು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮುನ್ನಡೆಯಲಿ ಎಂದು ನುಡಿದರು. ಸಂಸ್ಥೆಯ ಮುಖ್ಯಸ್ಥೆ ಪಾಲಂದಿರ ರಾಧಾ ಮಾತನಾಡಿ, ಜಿಲ್ಲೆಯ ಆಯ್ದ ಸರ್ಕಾರಿ ಶಾಲೆಗಳಲ್ಲಿ ಸಂಸ್ಥೆಯ ವತಿಯಿಂದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದು, ಬಡ ಹೆಣು
್ಣ ಮಕ್ಕಳನ್ನು ಗುರುತಿಸಿ ಶಾಲಾ ವೆಚ್ಚ ಭರಿಸುವ ಕಾರ್ಯಕ್ರಮ ಮುಂದೆ ಹಮ್ಮಿಕೊಳ್ಳಲಾಗುವದು ಎಂದು ಹೇಳಿದರು,
ಸಂಸ್ಥೆಯ ಸ್ಥಾಪಕ ಕೆ.ಎ. ಕುಶಾಲಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಸ್ನೇಹಿತರಿಂದ ಸಂಗ್ರಹಗೊಂಡ ಹಣವನ್ನು ನೇರವಾಗಿ ಸಂತ್ರಸ್ತರಿಗೆ ವಸ್ತುಗಳ ರೂಪದಲ್ಲಿ ವಿತರಿಸಲಾಗಿದ್ದು, ಕೊಡಗು ಜಿಲ್ಲೆಯನ್ನು ಪುನರ್ ಚೇತನಗೊಳಿಸುವ ನಿಟ್ಟಿನಲ್ಲಿ ಸಂತ್ರಸ್ತ ಕುಟುಂಬಗಳ ಜೀವನ ನಿರ್ವಹಣೆಗೆ ಹೊಲಿಗೆ ಯಂತ್ರ ಪರಿಕರಗಳನ್ನು ಉಚಿತವಾಗಿ ನೀಡಿ ಮಹಿಳಾ ಸಂಘಗಳ ಮೂಲಕ ಬಟ್ಟೆ ಕೈ ಚೀಲಗಳನ್ನು ವಿನ್ಯಾಸಗೊಳಿಸಲಾಗುತ್ತಿದೆ ಹಾಗೂ ಸದಸ್ಯರಿಗೆ ಗೌರವ ಧನ ನೀಡಲಾಗುತ್ತಿದೆ ಎಂದು ಹೇಳಿದರು. ವೇದಿಕೆಯಲ್ಲಿ ಬೋಜಿ ಸುಬ್ಬಯ್ಯ, ಕರ್ನಲ್ ಸುಬ್ಬಯ್ಯ ಉಪಸ್ಥಿತರಿದ್ದರು. ಸಂಸ್ಥೆಯ ನಿರ್ವಾಹಕ ಅನೀಶ್ ಸ್ವಾಗತಿಸಿ, ವಂದಿಸಿದರು.