ಬದ್‍ಕ್ ನಾಟಕ ಪ್ರದರ್ಶನ

ಮಡಿಕೇರಿ, ಮಾ. 28: ಯಾವದೇ ಕಲೆಯನ್ನು ಪ್ರೋತ್ಸಾಹಿಸಲು ಒಳ್ಳೆಯ ಕೇಳುಗ ಮತ್ತು ನೋಡುಗರ ಅವಶ್ಯಕತೆಯಿದೆ ಎಂದು ಕೊಡಗು ಪ್ರೆಸ್‍ಕ್ಲಬ್‍ನ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಅಭಿಪ್ರಾಯಪಟ್ಟರು.

ಮಡಿಕೇರಿಯ ಭಾರತೀಯ ವಿದ್ಯಾಭವನ ರಂಗಮಂದಿರದಲ್ಲಿ ರಂಗಭೂಮಿ ಪ್ರತಿಷ್ಠಾನ ಕೊಡಗು, ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ಕರ್ನಾಟಕ ಅಕಾಡೆಮಿ ಮಡಿಕೇರಿ ಸಂಯುಕ್ತಾಶ್ರಯದಲ್ಲಿ ರಂಗ ಕಲಾವಿದ ದಿವಂಗತ ಮದ್ರೀರ ಸಂಜು ನೆನಪಿನಲ್ಲಿ ವಿಶ್ವ ರಂಗಭೂಮಿ ದಿನವನ್ನು ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ರಮೇಶ್ ಕುಟ್ಟಪ್ಪ ಯಾವದೇ ಕಲೆಗೆ ಭಾಷೆಯ ಹಂಗಿಲ್ಲ. ಆಸಕ್ತಿ ಮತ್ತು ಭಾವನೆಗಳು ಬೇಕು. ದುರಾದೃಷ್ಟವಶಾತ್, ಕೊಡಗಿನಲ್ಲಿ ಕಲೆ ಸಂಸ್ಕೃತಿ ವಿಚಾರಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ಪ್ರೋತ್ಸಾಹವಿಲ್ಲ ಎಂದು ವಿಷಾಧಿಸಿದರು.

ಕೊಡಗಿನಲ್ಲಿ ಹರದಾಸ ಅಪ್ಪನೆರವಂಡ ಅಪ್ಪಚ್ಚಕವಿಯ ನಾಲ್ಕು ನಾಟಕಗಳು ವಿಶ್ವಮಟ್ಟದಲ್ಲಿ ಗಮನಸೆಳೆಯುವ ರಚನೆಗಳಾಗಿದ್ದು ಇತ್ತೀಚೆಗೆ ಅವರ ನೂರೈವತ್ತನೆ ಜನ್ಮಜಯಂತಿಯನ್ನು ಕೂಡ ಆಚರಿಸಿದ್ದೇವೆ ಎಂದು ಹೇಳಿದ ಅವರು, ಇತಿಹಾಸ ಮತ್ತು ಪರಂಪರೆ ಇರುವ ಕೊಡಗಿನ ರಂಗಭೂಮಿಯನ್ನು ಇನ್ನಷ್ಟು ವಿಸ್ತೃತವಾಗಿ ಬೆಳೆಸುವ ಅಗತ್ಯವಿದೆ ಎಂದು ಕರೆ ನೀಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಭಾರತೀಯ ವಿದ್ಯಾಭವನ ಕೊಡಗು ಕೇಂದ್ರದ ಅಧ್ಯಕ್ಷ ಕೆ.ಎಸ್. ದೇವಯ್ಯ ಮಾತನಾಡಿ, ಕೊಡಗಿನ ಯಾವದೇ ಭಾಷೆ, ಸಾಹಿತ್ಯ, ಸಂಗೀತಗಳಿಗೆ ವಿದ್ಯಾಭವನ ಸಭಾಂಗಣವನ್ನು ಉಚಿತವಾಗಿ ನೀಡಲಾಗುವದೆಂದು ಘೋಷಿಸಿದರು.

ಕಾರ್ಯಕ್ರಮದಲ್ಲಿ ರಂಗಪ್ರತಿಷ್ಠಾನ ಪುರಸ್ಕಾರವನ್ನು ರಂಗ ಸಂಗೀತದಲ್ಲಿ ಚಕ್ಕೇರ ತ್ಯಾಗರಾಜ್ ಮತ್ತು ರಂಗನಟಿ ಮಾದೇಟಿರ ವೀಣಾ ಬೆಳ್ಳಿಯಪ್ಪ ಅವರಿಗೆ ಅತಿಥಿ ಗಣ್ಯರು ನೀಡಿ ಗೌರವಿಸಿದರು.

ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯರೂ ಆಗಿರುವ, ರಂಗಭೂಮಿ ಪ್ರತಿಷ್ಠಾನದ ಅಧ್ಯಕ್ಷ ಅಡ್ಡಂಡ ಕಾರ್ಯಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ವಿಶ್ವ ರಂಗಭೂಮಿ ದಿನಾಚರಣೆ 1962ರಿಂದ ಹೇಗೆ ವಿಶ್ವ ಮಟ್ಟದಲ್ಲಿ ಚಾಲನೆಗೆ ಬಂತು. ಈ ಬಾರಿಯ ವಿಶ್ವ ರಂಗಭೂಮಿಯ ಪುರಸ್ಕಾರ ಕ್ಯೂಬಾ ದೇಶದ ರಂಗ ಕಲಾವಿದ ಕಾರ್ಲೋಸ್ ಸಲ್ದಾನಾ ಅವರಿಗೆ ಸಂದಿದ್ದು ಎಂದು ನೆನಪಿಸಿದರು.

ಕಲಾವಿದ ಮದೀರ ಸಂಜು ಅವರನ್ನು ನೆನೆದು ಅಡ್ಡಂಡ ಕಾರ್ಯಪ್ಪ ಮತ್ತು ಅನೀತಾ ಬಾವುಕರಾದರು. ಕಾರ್ಯಕ್ರಮದಲ್ಲಿ ಪಂಚಮ್ ತ್ಯಾಗರಾಜ್ ಪ್ರಾರ್ಥಿಸಿ, ಪರಿಚಯವನ್ನು ಪ್ರತಾಪ್ ಮತ್ತು ಶರವಣ ಮಾಡಿದರು. ಸಭಾ ಕಾರ್ಯಕ್ರಮದ ಬಳಿಕ, ಅಡ್ಡಂಡ ಕಾರ್ಯಪ್ಪ ನಿರ್ದೇಶನದ ಕೊಡವ ನಾಟಕ ‘ಬದ್‍ಕ್’ ಪ್ರದರ್ಶನಗೊಂಡು ನೆರೆದಿದ್ದವರನ್ನು ಮುದಗೊಳಿಸಿತು.