ಮಡಿಕೇರಿ, ಮಾ. 28: ಜಿಲ್ಲೆಗೆ ಮಾರಕವಾಗಿರುವ ಕಸ್ತೂರಿ ರಂಗನ್ ವರದಿ ಜಾರಿಗೆ ಸಂಬಂಧಿಸಿದಂತೆ ಕೇಂದ್ರ ಸಮಿತಿ ರಚಿಸಿದ್ದು, ವರದಿ ಕೇಂದ್ರದಲ್ಲಿ ಅಂಗೀಕಾರವಾಗಿದೆ. ಆದರೆ ಜಾರಿಯಾಗಿರುವ ಬಗ್ಗೆ ಅಧಿಕೃತ ಆದೇಶ ಬಂದಿಲ್ಲ; ಸದ್ಯಕ್ಕೆ ಯಥಾಸ್ಥಿತಿಯಲ್ಲಿದೆ ಎಂದು ಕಾಂಗ್ರೆಸ್ - ಜೆಡಿಎಸ್ ಮೈತ್ರಿಕೂಟದ ಲೋಕಸಭಾ ಅಭ್ಯರ್ಥಿ ಸಿ.ಹೆಚ್. ವಿಜಯಶಂಕರ್ ಹೇಳಿದರು.ಇಲ್ಲಿನ ಖಾಸಗಿ ಹೊಟೇಲೊಂದರಲ್ಲಿ ಏರ್ಪಡಿಸ ಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸದ್ಯಕ್ಕೆ ವರದಿ ಯಥಾಸ್ಥಿತಿಯಲ್ಲಿದೆ. ಈ ಸಂಬಂಧ ಮತ್ತೊಮ್ಮೆ ಪಶ್ಚಿಮಘಟ್ಟ ವ್ಯಾಪ್ತಿ ಗೊಳಪಡುವ ರಾಜ್ಯಗಳ ಪ್ರತಿನಿಧಿಗಳನ್ನು ಕರೆದು ಅಭಿಪ್ರಾಯ ಪಡೆಯಬೇಕಾಗಿದೆ. ತಾನು ಅರಣ್ಯಮಂತ್ರಿಯಾಗಿದ್ದರಿಂದ ಸಾಧಕ - ಬಾಧಕಗಳ ಬಗ್ಗೆ ಅರಿವಿದೆ. ಈ ಬಗ್ಗೆ ಪರಿಶೀಲನೆ ಆಗಬೇಕಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ (ಮೊದಲ ಪುಟದಿಂದ) ಅವಕಾಶಗಳಿದ್ದರೂ, ಕೇಂದ್ರ ದಿಂದ ಯಾವದೇ ಅಭಿವೃದ್ಧಿ ಪೂರಕ ಯೋಜನೆಗಳು ಜಾರಿಯಾಗುತ್ತಿಲ್ಲ. ರಾಜ್ಯ ಸರಕಾರ ಮಹತ್ವ ನೀಡುತ್ತಿದೆ. ಈ ಸಂಬಂಧ ಸಮಿತಿ ರಚಿಸಿ ವರದಿ ತಯಾರಿ ಮಾಡಿ ಪೂರಕವಾಗಿ ಸ್ಪಂದಿಸುವ ಪ್ರಯತ್ನ ಮಾಡುವದಾಗಿ ಹೇಳಿದರು.

ಅತಿವೃಷ್ಟಿ ಹಾನಿಗೆ ಸಂಬಂಧಿಸಿ ದಂತೆ ಸಿ.ಆರ್.ಎಫ್. ನಿಯಮಾನುಸಾರ ಸೂಕ್ತ ಪರಿಹಾರ ಸಿಗುವದಿಲ್ಲ. ಈ ನಿಟ್ಟಿನಲ್ಲಿ ಕೇಂದ್ರದಿಂದ ಹೆಚ್ಚಿಗೆ ಪರಿಹಾರ ಬಿಡುಗಡೆಯಾಗಬೇಕಿದೆ ಎಂದು ಹೇಳಿದರು.

ಕಾವೇರಿ ಶುದ್ಧೀಕರಣಕ್ಕೆ, ಕಾವೇರಿ ಪಾವಿತ್ರ್ಯತೆ ಉಳಿಸಲು ಯೋಜನೆ ರೂಪಿಸಬೇಕಿದೆ ಎಂದ ಅವರು, ಇದೀಗ ಕಾಂಗ್ರೆಸ್‍ನೊಂದಿಗೆ ಜೆಡಿಎಸ್ ಶಕ್ತಿ ಸೇರಿದೆ. ಒಂದಾಗಿ ಚುನಾವಣೆ ಎದುರಿಸಲಿದ್ದು, ಈ ಬಾರಿ ಅವಕಾಶ ಮಾಡಿಕೊಟ್ಟರೆ ಕೊಟ್ಟ ಮಾತಿಗೆ ಧಕ್ಕೆ ಬಾರದ ಹಾಗೆ ಜಿಲ್ಲೆಯ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸುವದಾಗಿ ಹೇಳಿದರು.

ರೈಲ್ವೇ ಆಗುವದಿಲ್ಲ

ಮೈಸೂರು - ಕುಶಾಲನಗರ ರೈಲ್ವೆ ಯೋಜನೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕೇಂದ್ರ ರೈಲ್ವೆ ಸಚಿವರೇ ಈ ಬಗ್ಗೆ ಸ್ಪಷ್ಟಪಡಿಸಿದ್ದಾರೆ. ಪರಿಸರದ ದೃಷ್ಟಿಯಿಂದ ಯೋಜನೆ ಯೋಗ್ಯವಲ್ಲವೆಂದು ಸದನದಲ್ಲೇ ಮಾಹಿತಿ ನೀಡಿದ್ದಾರೆ. ಹಾಗಾಗಿ ರೈಲ್ವೇ ಆಗುವದಿಲ್ಲ ಎಂದು ಹೇಳಿದರು.

ಕೊಡಗು ಜಿಲ್ಲೆಯ ಜನತೆ ತೀರಾ ಸಂಕಷ್ಟದಲ್ಲಿದ್ದಾರೆ. ಕೊಡಗಿನ ವಾಣಿಜ್ಯ ಬೆಳೆಗಳಾದ ಕಾಫಿ, ಕರಿಮೆಣಸು, ಏಲಕ್ಕಿ ಮತ್ತು ಕಿತ್ತಳೆ ಸೇರಿದಂತೆ ಇತರ ಬೆಳೆಗಳ ಇಳುವರಿಯೊಂದಿಗೆ ನಿಗದಿತ ಬೆಲೆಯೂ ಇಲ್ಲದೆ ಕೊಡಗಿನವರ ಜೀವನ ಕೂಡ ಸಂಕಷ್ಟಕ್ಕೀಡಾಗಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.

ಲೋಕಸಭೆಯನ್ನು ಕೊಡಗು ಜಿಲ್ಲೆಯನ್ನು ಪ್ರತಿನಿಧಿಸುತ್ತಿದ್ದ ಸಂಸದರು ಕೇಂದ್ರದ ವಾಣಿಜ್ಯ ಸಚಿವಾಲಯದ ಮೂಲಕ ಸೂಕ್ತ ರೀತಿಯಲ್ಲಿ ಸ್ಪಂದಿಸಲಿಲ್ಲ ಮತ್ತು ಕಾಫಿ ಮಂಡಳಿ ಮೂಲಕವೂ ಕಾಫಿ ಬೆಳೆಗಾರರ ಹಿತವನ್ನು ಗಮನದಲ್ಲಿರಿಸಿ ಸಹಕರಿಸಲು ಸ್ಪಂದಿಸಲಿಲ್ಲ. ಕೇಂದ್ರ ಸರಕಾರ ಸಂಬಾರ ಮಂಡಳಿಯಿಂದ ಆಮದು ಮತ್ತು ರಪ್ತು ವ್ಯವಸ್ಥೆಯನ್ನು ಮಾಡದ್ದರಿಂದ ಕಾಳುಮೆಣಸಿಗೆ ಅಗತ್ಯ ಬೆಲೆಯನ್ನು ಬೆಳೆಗಾರರಿಗೆ ಕೊಡಿಸಲಿಲ್ಲ ಎಂದು ಟೀಕಿಸಿದ ಅವರು, ವಿಶ್ವದಲ್ಲಿ ಅತ್ಯಂತ ಉತ್ಕøಷ್ಟ ಹಾಗೂ ಉತ್ತಮ ಗುಣಮಟ್ಟದ ಕಾಳುಮೆಣಸು ಕೊಡಗಿನಲ್ಲಿ ಮಾತ್ರ ಉತ್ಪಾದನೆಯಾಗುತ್ತಿದೆ ಎಂದರು.

1975ರ ಕಾರ್ಯಸೂಚಿ ಇನ್ನೂ ಜೀವಂತವಾಗಿರುವದರಿಂದ ಕಳೆದ ಸಾಲಿನ ಮಳೆಗಾಲದಲ್ಲಿ ಸಂಭವಿಸಿದ ಸಂತ್ರಸ್ತರಿಗೆ ಸಮರ್ಪಕವಾಗಿ ದೊರೆಯಲಿಲ್ಲ. 1975ರ ಕಾರ್ಯಸೂಚಿ ಪ್ರಕಾರ ಒಂದು ಹೆಕ್ಟೇರಿಗೆ 37.500 ರೂ.ಗಳು ಸಿಗುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಈ ಪುರಾತನ ಕಾರ್ಯಸೂಚಿಯನ್ನು ತಿದ್ದುಪಡಿ ಮಾಡದಿರುವದು ದುರದೃಷ್ಟಕರ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಿಧಾನಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಕೆ. ಮಂಜುನಾಥ್ ಕುಮಾರ್, ಕೆಪಿಸಿಸಿ ಪದಾಧಿಕಾರಿಗಳಾದ ಕೆ.ಪಿ. ಚಂದ್ರಕಲಾ, ಟಿ.ಪಿ. ರಮೇಶ್, ಸುರಯ್ಯ ಅಬ್ರಾರ್, ಕೆ.ಎ. ಆದಂ, ಅಬ್ದುಲ್ ರಜಾಕ್, ವಿ.ಪಿ. ಸುರೇಶ್, ಅಜೀಜ್ ರೆಹಮಾನ್, ಎಂ.ಎ. ಉಸ್ಮಾನ್, ಅಪ್ರು ರವೀಂದ್ರ, ಬೇಕಲ್ ರಮಾನಾಥ್ ಇನ್ನಿತರರಿದ್ದರು.