ಸೋಮವಾರಪೇಟೆ, ಮಾ. 28: ಅಜ್ಜ ಮಾಡಿದ್ದ 10 ಏಕರೆ ಆಸ್ತಿಯಲ್ಲಿ ಮೂವರು ಪುತ್ರರಿಗೂ ಪಾಲಾಗಿತ್ತು. ಅದರಲ್ಲಿ ಒಂದಿಷ್ಟು ಹೆಚ್ಚು ಪಾಲು ಇವನ ಅಪ್ಪನಿಗೇ ಬಂದಿತ್ತು. ಆದರೂ ಸಹ 40 ಸೆಂಟ್ಸ್ ಜಾಗದ ಮೇಲಿನ ವ್ಯಾಮೋಹ ಇವನನ್ನು ಬಿಟ್ಟಿರಲಿಲ್ಲ. ಆ ಜಾಗಕ್ಕಾಗಿ ಪದೇ ಪದೇ ತಗಾದೆ ತೆಗೆದು ಜಗಳ ಮಾಡುತ್ತಿದ್ದವನು ನಿನ್ನೆ ದಿನ ಎರಡು ಜೀವಗಳನ್ನು ಬಲಿ ಪಡೆದು ತನ್ನ ಕೊರಳನ್ನೂ ನೇಣಿಗೊಡ್ಡಿ 40 ಸೆಂಟ್ಸ್ ಜಾಗದ ಬದಲು ಆರಡಿ-ಮೂರಡಿ ಜಾಗಕ್ಕೆ ಇಳಿದ!ಇದು ನಿನ್ನೆ ಸಂಜೆ ಸೋಮವಾರಪೇಟೆ ತಾಲೂಕಿನ ಆಲೂರುಸಿದ್ದಾಪುರದಲ್ಲಿ ನಡೆದ ಭೀಭತ್ಸ್ಯ ಘಟನೆಯ ಸಂಕ್ಷಿಪ್ತ ಚಿತ್ರಣ. ನಿವೃತ್ತ ಪೊಲೀಸ್: ಜಿಲ್ಲೆಯ ವಿವಿಧ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡಿ, ವೀರಾಜಪೇಟೆ ತಾಲೂಕಿನಲ್ಲಿ ಎಎಸ್‍ಐ ಆಗಿದ್ದ ಸಂದರ್ಭ ನಿವೃತ್ತಿಗೊಂಡು, ಆಲೂರುಸಿದ್ದಾಪುರಕ್ಕೆ ಕಳೆದ 1 ವರ್ಷದ ಹಿಂದೆ ಆಗಮಿಸಿದ ಸೂದನ ಗಣೇಶ್ ಕುಟುಂಬ ಪಿತ್ರಾರ್ಜಿತವಾಗಿ ತಮ್ಮ ಪಾಲಿಗೆ ಬಂದ ಗದ್ದೆಯನ್ನು ಭೋಗ್ಯಕ್ಕೆ ಕೊಟ್ಟು ಜೀವನ ಸಾಗಿಸುತ್ತಿತ್ತು. ಇವರ ಮನೆಯ ಪಕ್ಕದಲ್ಲೇ ಗಣೇಶ್ ಅವರ ಸಹೋದರ ಬೋಜಪ್ಪ ಅವರ ಕುಟುಂಬವೂ ನೆಲೆಸಿತ್ತು.

ಗಣೇಶ್ ಮತ್ತು ಬೋಜಪ್ಪ ಅವರುಗಳ ತಂದೆ ನಿಂಗಪ್ಪ ಅವರು ಆಲೂರು ಸಿದ್ದಾಪುರದಲ್ಲಿ ಸುಮಾರು 10 ಏಕರೆ ಆಸ್ತಿ ಮಾಡಿದ್ದು, ಇದರಲ್ಲಿ ತನ್ನ ಮೂವರು ಪುತ್ರರಿಗೆ (ಹಿರಿಯ ಪುತ್ರ ಸೋಮಣ್ಣ) ಆಸ್ತಿಯನ್ನು ವಿಂಗಡಿಸಿ ನೀಡಲಾಗಿತ್ತು. ಗಣೇಶ್ ಅವರು ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಕಳೆದ ಒಂದೂವರೆ ವರ್ಷದ ಹಿಂದೆ ಪಾಶ್ರ್ವವಾಯು ಪೀಡಿತರಾದ ಸಂದರ್ಭ ಕೆಲಸದಿಂದ ಸ್ವಯಂ ನಿವೃತ್ತಿ ಪಡೆದು, ಸ್ವಗ್ರಾಮವಾದ ಆಲೂರು ಸಿದ್ದಾಪುರದಲ್ಲಿ ಪತ್ನಿ ಸರೋಜ, ಪುತ್ರ ಹರ್ಷಿತ್‍ನೊಂದಿಗೆ ನೆಲೆಕಂಡು ಕೊಂಡಿದ್ದರು. ಈರ್ವರು ಪುತ್ರಿಯರಲ್ಲಿ ಓರ್ವಳಿಗೆ ವಿವಾಹವಾಗಿದ್ದರೆ, ಮತ್ತೋರ್ವಳು ಮೈಸೂರಿನಲ್ಲಿ ಕೆಲಸ ಮಾಡುತ್ತಿದ್ದಳು.

ಆಸ್ತಿಗಾಗಿ ತಗಾದೆ : ಇವರ ಕುಟುಂಬ ಆಲೂರುಸಿದ್ದಾಪುರಕ್ಕೆ ಬಂದಾಗಿನಿಂದಲೂ ಆಸ್ತಿ ವಿಚಾರದಲ್ಲಿ ಬೋಜಪ್ಪ ಮತ್ತು ಮೋಹಿನಿ ಅವರ ಪುತ್ರ ದಿಲೀಪ್ ತಗಾದೆ ತೆಗೆಯುತ್ತಿದ್ದ. (ಮೊದಲ ಪುಟದಿಂದ) ಈ ಬಗ್ಗೆ ಹಲವಷ್ಟು ಬಾರಿ ಗಣೇಶ್ ಅವರು ಪೊಲೀಸ್ ದೂರು ನೀಡಿದ್ದರು. ಅಜ್ಜನ ಆಸ್ತಿಯಲ್ಲಿ ಒಂದಿಷ್ಟು ಜಾಗವನ್ನು ಹೆಚ್ಚಾಗಿಯೇ ಬೋಜಪ್ಪ ಅವರಿಗೆ ನೀಡಲಾಗಿತ್ತು. ಹಳೆಯ ಮನೆಯಲ್ಲಿ ನೆಲೆಸಿದ್ದ ಗಣೇಶ್ ಅವರು, ತನ್ನ ಅಣ್ಣನ ಮಗ ದಿಲೀಪ್‍ನ ಕಿರುಕುಳ ತಾಳಲಾರದೆ ಮನೆಗೆಂದು 3 ಲಕ್ಷ ಹಣವನ್ನೂ ಸಹ ನೀಡಿದ್ದರು.

40 ಸೆಂಟ್ಸ್‍ಗಾಗಿ ಗಲಾಟೆ : ಈ ಮಧ್ಯೆ ಮೊರಾರ್ಜಿ ವಸತಿ ಶಾಲೆಯ ಬಳಿ ಇರುವ 80 ಸೆಂಟ್ಸ್ ಜಾಗ ಗಣೇಶ್ ಅವರ ಉಸ್ತುವಾರಿಯಲ್ಲಿತ್ತು. ಈ ಜಾಗವನ್ನು ತಮಗೆ ನೀಡುವಂತೆ ದಿಲೀಪ್ ಆಗಾಗ್ಗೆ ಗಣೇಶ್ ಅವರಲ್ಲಿ ಗಲಾಟೆ ಮಾಡುತ್ತಿದ್ದ. ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಕುಟುಂಬಸ್ಥರ ಸಮ್ಮುಖದಲ್ಲಿ ಮಾತುಕತೆ ನಡೆದು, ಇರುವ 80 ಸೆಂಟ್ಸ್ ಜಾಗದಲ್ಲಿ 40 ಸೆಂಟ್ಸ್ ಜಾಗವನ್ನು ದಿಲೀಪ್‍ಗೆ ನೀಡುವ ಬಗ್ಗೆಯೂ ಗಣೇಶ್ ಅವರು ಮಾತು ಕೊಟ್ಟಿದ್ದರು.

ಎರಡು ಜೀವ ತೆಗೆದ : ಇಷ್ಟಕ್ಕೆ ಆಸ್ತಿಯ ಗಲಾಟೆ ಮುಗಿಯಿತು ಎನ್ನುವಷ್ಟರಲ್ಲಿ ವಿಕೃತ ಮನಸ್ಸಿನ ದಿಲೀಪ್ ಸುಮ್ಮನಾಗಲಿಲ್ಲ. ಆಗಾಗ್ಗೆ ಗಣೇಶ್ ಅವರೊಂದಿಗೆ ಗಲಾಟೆ ಮುಂದುವರೆಸಿ, ಬೆದರಿಕೆ ಹಾಕುತ್ತಿದ್ದ. ನಿನ್ನೆ ಮಧ್ಯಾಹ್ನ ಊಟ ಮುಗಿಸಿ ಗಣೇಶ್ ಮತ್ತು ಸರೋಜ ದಂಪತಿ ಕೊಠಡಿಯಲ್ಲಿ ವಿಶ್ರಾಂತಿಗೆ ತೆರಳಿದ್ದರು. ತನ್ನ ಮನೆಯಿಂದ ಕತ್ತಿಯೊಂದಿಗೆ ತೆರಳುವಾಗ ತೋಟಕ್ಕೆ ಹೋಗುವದಾಗಿ ತಿಳಿಸಿ ತನ್ನ ಚಿಕ್ಕಪ್ಪನ ಮನೆಯೊಳಗೆ ಕಳ್ಳಹೆಜ್ಜೆಯೊಂದಿಗೆ ಕಾಲಿಟ್ಟ ದಿಲೀಪ್, ದಂಪತಿಯ ಮೇಲೆ ಕತ್ತಿಯಿಂದ ಮನಸೋಯಿಚ್ಛೆ ಪ್ರಹಾರ ನಡೆಸಿದ. ಈರ್ವರ ಮುಖ, ಕುತ್ತಿಗೆ, ತಲೆ ಭಾಗಕ್ಕೆ 20ಕ್ಕೂ ಅಧಿಕ ಬಾರಿ ಕಡಿದಿದ್ದು, ರಕ್ತದ ಮಡುವಿನಲ್ಲಿ ಸ್ಥಳದಲ್ಲೇ ಸಾವನ್ನಪ್ಪುವಂತೆ ಮಾಡಿದ.

ರಕ್ತದಲ್ಲಿ ಕೃತ್ಯಕ್ಕೆ ಸಾಕ್ಷಿ : ಮನಸ್ಸಿನ ತುಂಬೆಲ್ಲಾ ಕ್ರೋಧ ತುಂಬಿಕೊಂಡಿದ್ದ ದಿಲೀಪ್, ತನ್ನ ಚಿಕ್ಕಪ್ಪ ಮತ್ತು ಚಿಕ್ಕಮ್ಮನನ್ನು ರಕ್ತದ ಮಡುವಿನಲ್ಲಿ ಮಲಗಿಸಿ, ಅವರದೇ ರಕ್ತದಿಂದ ಗೋಡೆಯ ಮೇಲೆ “ನಾನೇ ಗಣೇಶ ಮತ್ತು ಸರೋಜನ ಕೊಂದಿದ್ದು, ನಾನೇ ದಿಲೀಪ್ ಕೊಂದಿದ್ದು” ಎಂದು ಬರೆದಿದ್ದಾನೆ. ಸುಮಾರು ಸಂಜೆ 3 ರಿಂದ 4 ಗಂಟೆಯ ಒಳಗೆ ಈ ಕೃತ್ಯ ನಡೆಸಿದ ಹಂತಕ, ಮನೆಯ ಮುಂಬಾಗಿಲಿಗೆ ಬೀಗ ಜಡಿದು, ಹಿಂಬಾಗಿಲಿನಿಂದ ಒಳ ತೆರಳಿ, ಇವರ ಪುತ್ರ ಹರ್ಷಿತ್ ಬರುವದನ್ನೇ ಮೃತದೇಹಗಳ ನಡುವೆ ಕಾದು ಕುಳಿತಿದ್ದ.

ಹರ್ಷಿತ್ ಮೇಲೆ ಧಾಳಿ : ಸಂಜೆ 5.30ರ ಸುಮಾರಿಗೆ ಮನೆಗೆ ಆಗಮಿಸಿದ ಹರ್ಷಿತ್, ಮುಂಬಾಗಿಲಿಗೆ ಬೀಗ ಜಡಿದಿರುವದನ್ನು ಕಂಡು ಮನೆಯ ಹಿಂಬದಿಗೆ ತೆರಳಿ ಬಾಗಿಲು ತಳ್ಳಿದ್ದಾನೆ. ಈ ಸಂದರ್ಭ ಹರ್ಷಿತ್‍ನ ಮೇಲರಗಿದ ದಿಲೀಪ್ ಮನಸೋಯಿಚ್ಚೆ ತಲೆ, ಕುತ್ತಿಗೆ, ಕೈಗಳಿಗೆ ಕೊಚ್ಚಿದ್ದಾನೆ. ಪರಿಣಾಮ ತಲೆ ಭಾಗಕ್ಕೆ ಗಂಭೀರ ಗಾಯವಾಗಿದ್ದರೆ, ಕೈ ಬೆರಳುಗಳು ಛಿದ್ರಗೊಂಡಿದ್ದು, ಕಿವಿ ಕಿತ್ತು ಬಂದಿದೆ.

ಜೀವ ತೆಗೆದು ಜೀವ ಬಿಟ್ಟ ಹಂತಕ : ಜೀವನ್ಮರಣದ ಸ್ಥಿತಿಯಲ್ಲಿ ಚೀರಾಡುತ್ತಲೇ ಪ್ರಜ್ಞಾಹೀನನಾದ ಹರ್ಷಿತ್ ಸಹ ಸಾವನ್ನಪ್ಪಿದ್ದಾನೆ ಎಂದು ಭಾವಿಸಿದ ಹಂತಕ, ನಂತರ ಗ್ಯಾಸ್ ಸಿಲಿಂಡರ್‍ಗೆ ಸಂಪರ್ಕ ಕಲ್ಪಿಸುವ ಗ್ಯಾಸ್ ಪೈಪ್‍ನೊಂದಿಗೆ ಮನೆಯ ಅಟ್ಟಕ್ಕೆ ತೆರಳಿ ಅಲ್ಲಿ ನೇಣು ಬಿಗಿದುಕೊಂಡಿದ್ದಾನೆ. ಕಳೆದ ಒಂದು ವರ್ಷದಿಂದ ಆಸ್ತಿಗಾಗಿ ಕಾದಾಟ ನಡೆಸುತ್ತಿದ್ದ ದಿಲೀಪ್, ಕ್ಷಣಮಾತ್ರದಲ್ಲಿ ಪ್ರಾಣ ಬಿಡುವ ಮೂಲಕ ತನ್ನ ಆಸ್ತಿಯ ಆಸೆಯನ್ನು ಕೈಬಿಟ್ಟಿದ್ದಾನೆ!

ಹರ್ಷಿತ್‍ನ ಚೀರಾಟ ಕೇಳಿಸಿಕೊಂಡ ಸ್ಥಳೀಯರು ಕೆಲ ಸಮಯದ ನಂತರ ಮನೆಯತ್ತ ಆಗಮಿಸಿದ್ದು, ಮನೆಯೊಳಗೆ ಜೀವನ್ಮರಣ ಸ್ಥಿತಿಯಲ್ಲಿದ್ದ ಹರ್ಷಿತ್‍ನನ್ನು ತಕ್ಷಣ ಶನಿವಾರಸಂತೆ ಆಸ್ಪತ್ರೆಗೆ ದಾಖಲಿಸಿ, ಪ್ರಾಥಮಿಕ ಚಿಕಿತ್ಸೆ ಕೊಡಿಸಿದ ನಂತರ ಹೆಚ್ಚಿನ ಚಿಕಿತ್ಸೆಗೆ ಹಾಸನಕ್ಕೆ ಸಾಗಿಸಿದರು.

ಅಜ್ಜನಿಂದ ಪಾಲುದಾರಿಕೆ ಮೂಲಕ ಬಂದ ಆಸ್ತಿಯೊಂದಿಗೆ ಚಿಕ್ಕಪ್ಪನ ಆಸ್ತಿಯ ಮೇಲೂ ಆಸೆಪಟ್ಟಿದ್ದ ದಿಲೀಪ್, ತನ್ನ ಮನೋವಿಕೃತಿ ಯಿಂದ ಕೇವಲ 40 ಸೆಂಟ್ಸ್ ಜಾಗಕ್ಕಾಗಿ ಹಿರಿ ಜೀವಗಳನ್ನು ಕೊಂದ. ಜೀವಂತವಿದ್ದ ಸಂದರ್ಭ ಸದಾ ಜಾಗಕ್ಕಾಗಿ ಗಲಾಟೆ ನಡೆಸುತ್ತಿದ್ದ ಈತ ಕೊನೆಗೆ 6/3 ಅಡಿಯ ಜಾಗ ಮಾತ್ರ ತನಗೆ ಎಂಬದನ್ನು ಮರೆತಿದ್ದ!

ಘಟನಾ ಸ್ಥಳಕ್ಕೆ ನಿನ್ನೆ ರಾತ್ರಿಯೇ ಜಿಲ್ಲಾ ಎಸ್.ಪಿ. ಡಾ. ಸುಮನ್, ಪೊಲೀಸ್ ವೃತ್ತ ನಿರೀಕ್ಷಕ ನಂಜುಂಡೇಗೌಡ, ಶನಿವಾರಸಂತೆ ಠಾಣಾಧಿಕಾರಿ ತಿಮ್ಮಶೆಟ್ಟಿ ಅವರುಗಳು ತೆರಳಿ ಪರಿಶೀಲನೆ ನಡೆಸಿದ್ದು, ಮೃತ ದೇಹಗಳನ್ನು ಶನಿವಾರಸಂತೆ ಆಸ್ಪತ್ರೆಗೆ ಸಾಗಿಸಲಾಗಿತ್ತು. ಇಂದು ಶವಗಳನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ ನಂತರ ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದು, ಆಲೂರುಸಿ ದ್ದಾಪುರದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು.

ಹಂತಕನ ಕತ್ತಿಯೇಟಿನಿಂದ ಗಂಭೀರ ಸ್ಥಿತಿಗೆ ತಲುಪಿರುವ ಹರ್ಷಿತ್‍ಗೆ ಹಾಸನದ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದ್ದು, ಜೀವ ಉಳಿಸಲು ವೈದ್ಯರು ಹರಸಾಹಸ ನಡೆಸುತ್ತಿದ್ದಾರೆ. ದಿಲೀಪ್‍ನ ಈ ಕೃತ್ಯ ಇಡೀ ಆಲೂರುಸಿದ್ದಾಪುರದ ಜನತೆಯನ್ನು ಕಂಗೆಡಿಸಿದ್ದು, ದಂಪತಿಗಳ ಸಾವಿಗೆ ಕಂಬನಿ ಮಿಡಿಯುತ್ತಿದ್ದರೆ, ಹಂತಕನ ಮನಸ್ಥಿತಿಗೆ ಅಸಹನೆ ವ್ಯಕ್ತಪಡಿಸುತ್ತಿದ್ದಾರೆ.

-ವಿಜಯ್ ಹಾನಗಲ್