ಮಡಿಕೇರಿ, ಮಾ. 28: ಎಮ್ಮೆಮಾಡು ಜಮಾಅತ್‍ನಲ್ಲಿ ಕಳೆದ ಮೂರು ವರ್ಷಗಳ ಕಾಲ ಆಡಳಿತ ನಡೆಸಿದ 11 ಸದಸ್ಯರ ಸಮಿತಿ ಭಾರೀ ಅವ್ಯಹಾರ ನಡೆಸಿದೆ ಎಂದು ಆರೋಪಿಸಿರುವ ಮಾಜಿ ಸದಸ್ಯರುಗಳು ಹಳೆಯ ಸಮಿತಿ ವಿರುದ್ಧ ಸೂಕ್ತ ಕ್ರಮಕ್ಕಾಗಿ ಒತ್ತಾಯಿಸಿ ಜಿಲ್ಲಾಧಿಕಾರಿಗಳು ಹಾಗೂ ವಕ್ಫ್ ಮಂಡಳಿಗೆ ದೂರು ಸಲ್ಲಿಸುವದಾಗಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸದಸ್ಯ ಸಿ.ಎ. ಇಸ್ಮಾಯಿಲ್, 2016 ರಲ್ಲಿ ಚುನಾವಣೆಯ ಮೂಲಕ ಎಮ್ಮೆಮಾಡು ಜಮಾಅತ್‍ಗೆ ಆಯ್ಕೆಯಾದ ಆಡಳಿತ ಮಂಡಳಿ 2017 ರಲ್ಲಿ ಮೊದಲ ಮಹಾಸಭೆ ನಡೆಸಿದಾಗ ಲೆಕ್ಕ ಪರಿಶೋಧನೆಯ ಆಧಾರದಲ್ಲಿ ಅವ್ಯವಹಾರ ಪ್ರಕರಣ ಬೆಳಕಿಗೆ ಬಂದಿದೆ ಎಂದು ಆರೋಪಿಸಿದರು.

ಜಮಾಅತ್‍ಗೆ ಕೋಟ್ಯಾಂತರ ಹಣ ಸಂದಾಯ ರಶೀದಿ ಪುಸ್ತಕಗಳು ನಾಪತ್ತೆಯಾಗಿರುವ ವಿಚಾರ ಬಹಿರಂಗಗೊಂಡಿದ್ದು, ಸುಮಾರು ರೂ. 3.60 ಲಕ್ಷ ಅವ್ಯವಹಾರ ವಾಗಿರುವದನ್ನು ಒಪ್ಪಿಕೊಂಡ ಅಂದಿನ ಕಾರ್ಯದರ್ಶಿ ಆ ಮೊತ್ತವನ್ನು ತಾನೇ ಭರಿಸುವದಾಗಿ ಒಪ್ಪಿಕೊಂಡಿದ್ದರು. ಈ ನಡುವೆ ಸದಸ್ಯರೊಬ್ಬರು ರೂ. 4.60 ಲಕ್ಷ ದುರುಪಯೋಗ ಪಡಿಸಿಕೊಂಡಿರುವದು ಬೆಳಕಿಗೆ ಬಂದಿತ್ತು. ಗ್ರಾಮಸ್ಥರ ಒತ್ತಾಯದ ಹಿನ್ನೆಲೆ ಅವರನ್ನು ಸದಸ್ಯತ್ವದಿಂದ ವಜಾಗೊಳಿಸಲಾಗಿತ್ತು ಎಂದರು. ತಕ್ಷಣ ಜಿಲ್ಲಾಡಳಿತ ಅಧಿಕೃತ ಲೆಕ್ಕಪರಿಶೋಧಕರನ್ನು ನೇಮಿಸಿ ಸಮಗ್ರ ತನಿಖೆ ನಡೆಸಿ ಜಮಾಅತ್ ಅವ್ಯವಹಾರವನ್ನು ಬಯಲಿಗೆಳೆದು ನ್ಯಾಯ ಒದಗಿಸಿಕೊಡಬೇಕೆಂದು ಒತ್ತಾಯಿಸಿದರು.

ಗೋಷ್ಠಿಯಲ್ಲಿ ಮಾಜಿ ಸದಸ್ಯರುಗಳಾದ ಎನ್.ಕೆ. ಉಸ್ಮಾನ್, ಪಿ.ಎ. ಆಲಿಕುಟ್ಟಿ, ಕೆ.ಎ. ಉಮ್ಮರ್ ಹಾಗೂ ಕೆ.ಎಂ. ಅಶ್ರಫ್ ಉಪಸ್ಥಿತರಿದ್ದರು.