ಮಡಿಕೇರಿ, ಮಾ. 28: ಪಿತ್ರಾರ್ಜಿತ ಆಸ್ತಿ ವಿಷಯಕ್ಕೆ ಸಂಬಂಧಿಸಿದಂತೆ ಸಹೋದರನನ್ನು ಗುಂಡು ಹಾರಿಸಿ ಹತ್ಯೆಗೈದ ಆರೋಪಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.ಸುಂಟಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಹೋದರರಾದ ಸುರೇಶ್ ಹಾಗೂ ಕಾವೇರಪ್ಪ ನಡುವೆ ಜಾಗದ ವಿಚಾರಕ್ಕೆ ಆಗಿಂದಾಗ್ಗೆ ಜಗಳವಾಗುತ್ತಿತ್ತು. ದಿನಾಂಕ 15.7.2017ರಂದು ಬೆಳಿಗ್ಗೆ ಆರೋಪಿ ಕಾವೇರಪ್ಪ ತನ್ನ ತಾಯಿ ಪಾರ್ವತಿ ಅವರ ಬಳಿ ಖಾಲಿ ಹಾಳೆಗೆ ಹೆಬ್ಬೆಟ್ಟು ಸಹಿ ಹಾಕಿಕೊಡುವಂತೆ ಕೇಳಿದ್ದು, ಇದಕ್ಕೆ ಸುರೇಶ್ ವಿರೋಧವೊಡ್ಡಿದ ಹಿನ್ನೆಲೆಯಲ್ಲಿ ಕಾವೇರಪ್ಪ ಎಸ್‍ಬಿಬಿಎಲ್ ಬಂದೂಕಿನಿಂದ ಅದೇ ದಿನ 8 ಗಂಟೆ ವೇಳೆಗೆ ಗದ್ದೆ ಕಡೆಗೆ ತೆರಳುತ್ತಿದ್ದ ಸುರೇಶ್ ಮೇಲೆ ಗುಂಡು ಹಾರಿಸಿ ಹತ್ಯಗೈದಿದ್ದ. ಮಾತ್ರವಲ್ಲದೆ ಫಿರ್ಯಾದಿ ಸುರೇಶ್ ಪತ್ನಿ ಶಾರದ ಎಂಬವರಿಗೂ ಕೊಲೆ ಬೆದರಿಕೆ ಒಡ್ಡಿದ್ದ. ಈ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿ ಕಾವೇರಪ್ಪನನ್ನು ಸೆಕ್ಷನ್ 302, 506 ಮತ್ತು ಭಾರತ ಬಂದೂಕು ಕಾಯ್ದೆ 3, 25, 27ರಡಿ ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಪವನೇಶ್ ಅವರು ಆರೋಪಿ ಕಾವೇರಪ್ಪಗೆ ಜೀವಾವಧಿ ಶಿಕ್ಷೆ ಹಾಗೂ ರೂ. 55 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರ ಅಭಿಯೋಜಕರಾದ ಕೃಷ್ಣವೇಣಿ ವಾದಿಸಿದರು.