ಸಿದ್ದಾಪುರ, ಮಾ. 28: ರಸ್ತೆ ಕಾಮಗಾರಿಯೊಂದಕ್ಕೆ ಅಡ್ಡಿಪಡಿಸು ತ್ತಿರುವ ಗ್ರಾಮ ಪಂಚಾಯಿತಿ ಸದಸ್ಯೆ ವಿರುದ್ಧ ಅರಣ್ಯ ಪ್ರದೇಶದೊಳಗೆ ವಾಸ ಮಾಡುವ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾಲ್ದಾರೆ ಗ್ರಾಮ ಪಂಚಾಯಿತಿಯ ವ್ಯಾಪ್ತಿಗೆ ಒಳಪಡುವ ದೊಡ್ಡಹಡ್ಲುವಿನ ಅರಣ್ಯ ಪ್ರದೇಶದೊಳಗೆ ಅಲ್ಲಿನ ನಿವಾಸಿಗಳಿಗೆ ಸಮರ್ಪಕವಾದ ರಸ್ತೆ ಇಲ್ಲದೇ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಈ ಹಿನ್ನೆಲೆ ಈ ಭಾಗದ ನಿವಾಸಿಗಳು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಬಳಿ ಅಂಗಲಾಚಿ ರಸ್ತೆ ದುರಸ್ತಿ ಪಡಿಸುವಂತೆ ಮನವಿ ಸಲ್ಲಿಸಿದರು. ಇದಕ್ಕೆ ಸ್ಪಂದಿಸಿದ ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ದೊಡ್ಡಹಡ್ಲು ಹಾಡಿಯ ರಸ್ತೆ ದುರಸ್ತಿಗೆ ಹಣ ಮಂಜೂರಾತಿ ಮಾಡಿದ್ದಾರೆ. ರಸ್ತೆ ದುರಸ್ತಿ ಕಾಮಗಾರಿ ಪ್ರಾರಂಭಿಸುವ ಸಂದರ್ಭ ಮಾಲ್ದಾರೆಯ ಗ್ರಾ.ಪಂ. ಸದಸ್ಯೆಯೋರ್ವರು ಏಕಾಏಕಿ ರಸ್ತೆ ದುರಸ್ತಿ ಪಡಿಸದಂತೆ ಕೆಲವರಿಗೆ ಕುಮ್ಮಕ್ಕು ನೀಡಿ ಕಾಮಗಾರಿಗೆ ತಡೆ ಯೊಡ್ಡಿದ್ದಾರೆಂದು ದೊಡ್ಡಹಡ್ಲುವಿನ ನಿವಾಸಿಗಳು ಆರೋಪಿಸಿದ್ದಾರೆ.