ಮಡಿಕೇರಿ, ಮಾ. 28 : ಇಂದು ಮಡಿಕೇರಿಯಲ್ಲಿ ನಡೆದದ್ದು ಜೆಡಿಎಸ್ ಕಾರ್ಯಕರ್ತರ ಸಮಾವೇಶ..., ಆದರೆ ಒಂದು ಹಂತದಲ್ಲಿ ವೇದಿಕೆ ಹಂಚಿಕೊಂಡಿದ್ದು ಜೆಡಿಎಸ್ ಹಾಗೂ ಕಾಂಗ್ರೆಸ್ ಮುಖಂಡರು. ಒಂದು ಕಡೆ ಜೆಡಿಎಸ್ ಸಮಾವೇಶ ನಡೆಯುತ್ತಿದ್ದರೆ ಮತ್ತೊಂದೆಡೆ ಕಾಂಗ್ರೆಸ್ ಸಭೆ ಏರ್ಪಾಡಾಗಿತ್ತು. ಸಭೆಗೆ ಬಂದಿದ್ದ ಕಾಂಗ್ರೆಸ್ ಪ್ರಮುಖರು ಸೇರಿದಂತೆ ಮೈತ್ರಿಕೂಟದ ಲೋಕಸಭಾ ಅಭ್ಯರ್ಥಿ ವಿಜಯಶಂಕರ್ ಅವರೂ ಕೂಡ ಜೆಡಿಎಸ್ ಸಮಾವೇಶಕ್ಕೆ ಆಗಮಿಸಿ ಜೆಡಿಎಸ್ ವೇದಿಕೆ ಹಂಚಿಕೊಂಡರು.

ಮದುವೆ ಗಂಡಿನ ಕಡೆಯವರು ಹೆಣ್ಣಿನ ಮನೆಗೆ ಬರುವಂತೆ ಸಾಂಪ್ರದಾಯಿಕವಾಗಿ ಫಲ, ತಾಂಬೂಲ, ಹೂವಿನ ಹಾರದೊಂದಿಗೆ ಆಗಮಿಸಿ ಜೆಡಿಎಸ್ ರಾಜ್ಯಾಧ್ಯಕ್ಷ ಅಡಗೂರು ವಿಶ್ವನಾಥ್ ಅವರಿಗೆ ಫಲ-ತಾಂಬೂಲ ನೀಡಿ ಆಲಂಗಿಸಿಕೊಂಡರೆ, ಇತ್ತ ನೂತನ ಅಧ್ಯಕ್ಷ ಕೆ.ಎಂ. ಗಣೇಶ್ ಅವರಿಗೂ ಹೂವಿನ ಹಾರ ಹಾಕಿ ಅಭಿನಂದಿಸಿದರು.

(ಮೊದಲ ಪುಟದಿಂದ) ಮೈತ್ರಿಕೂಟದ ಪ್ರಮುಖರ ಈ ಮಿಲನ ಅಚ್ಚರಿಯೊಂದಿಗೆ ಔಚಿತ್ಯಪೂರ್ಣವೂ ಆಗಿತ್ತು.ಈ ಬಗ್ಗೆ ತಮ್ಮ ಮಾತಿನಲ್ಲಿ ವ್ಯಾಖ್ಯಾನಿಸಿದÀ ಅಡಗೂರು ವಿಶ್ವನಾಥ್ ಅವರು, ‘ಕೋಮುವಾದ ಮಣಿಸಬೇಕೆಂಬ ಪ್ರಯತ್ನಕ್ಕೆ ಜಾತ್ಯತೀತವಾಗಿ ಸೆಟೆದು ನಿಂತಿರುವ ಕಾಲಘಟ್ಟದಲ್ಲಿ ಎರಡೂ ಪಕ್ಷಗಳು ಒಂದಾಗಿರುವದು ಯೋಗಾನುಯೋಗ, ಗೆಲುವಿನ ಸುಯೋಗ’ ಎಂದು ಹೇಳಿದರು.

‘ಫಲ - ತಾಂಬೂಲ - ಪ್ರೀತಿಯೊಂದಿಗೆ ಕಾಂಗ್ರೆಸ್‍ನವರು ಬಂದಿದ್ದಾರೆ. ಇದೇ ಮೈತ್ರಿಕೂಟದ ಅಭ್ಯರ್ಥಿಯ ಗೆಲುವಿಗೆ ನಾಂದಿಯಾಗಲಿ’ ಎಂದು ಆಶಯ ವ್ಯಕ್ತಪಡಿಸಿದರು.