ಮಡಿಕೇರಿ, ಮಾ. 28: ಕರ್ನಾಟಕ ಪ್ರದೇಶ ಜನತಾದಳ (ಜಾತ್ಯತೀತ)ದ ಕೊಡಗು ಜಿಲ್ಲಾ ಘಟಕದ ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ಕೆ.ಎಂ. ಗಣೇಶ್ ಅವರ ಆಯ್ಕೆಯಲ್ಲಿ ಯಾವದೇ ಬದಲಾವಣೆಯಿಲ್ಲ ಎಂದು ಪಕ್ಷದ ರಾಜ್ಯಾಧ್ಯಕ್ಷ ಅಡಗೂರು ಹೆಚ್. ವಿಶ್ವನಾಥ್ ಸ್ಪಷ್ಟಪಡಿಸಿದ್ದಾರೆ.ಇಲ್ಲಿನ ಬಾಲಭವನ ಉದ್ಯಾನದ ಬಳಿಯ ಮೈದಾನದಲ್ಲಿ ಹಮ್ಮಿಕೊಳ್ಳ ಲಾಗಿದ್ದ ನೂತನ ಅಧ್ಯಕ್ಷರ ಅಧಿಕಾರ ಸ್ವೀಕಾರ ಸಮಾರಂಭ ಹಾಗೂ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅಧ್ಯಕ್ಷರ ನೇಮಕಾತಿ ಬಗ್ಗೆ ಕಾರ್ಯಕರ್ತರು ಯಾವದೇ ಊಹಾ ಪೋಹಗಳಿಗೆ ಕಿವಿಗೊಡಬಾರದು. ಗಣೇಶ್ ಅವರನ್ನು ಪಕ್ಷದ ರಾಷ್ಟ್ರಾಧ್ಯಕ್ಷ ಹೆಚ್.ಡಿ. ದೇವೇಗೌಡ ಅವರ ಆದೇಶದ ಮೇರೆಗೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಸಚಿವ ಹೆಚ್.ಡಿ. ರೇವಣ್ಣ ಅವರುಗಳ ಆಶಯದ ಮೇರೆಗೆ ಆಯ್ಕೆ ಮಾಡಲಾಗಿದೆ ಎಂದರು.
ಯಾರೋ ಸುಖಾಸುಮ್ಮನೆ ಹೇಳುವ ಮಾತಿಗೆ ಯಾರೂ ಕಿವಿಕೊಡಬೇಕಾಗಿಲ್ಲ. ಅಧ್ಯಕ್ಷರ ನೇತೃತ್ವದಲ್ಲಿ ಒಗ್ಗಟ್ಟಿನಿಂದ ಸಂಘಟನೆ ಮೂಲಕ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಗೆಲುವು ಮೈತ್ರಿ ಪಕ್ಷದ ಅಭ್ಯರ್ಥಿಯದ್ದಾಗಬೇಕಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರುಗಳ ಸಾಧನೆ ಹಾಗೂ ಕೇಂದ್ರ ಸರಕಾರದ ವೈಫಲ್ಯವನ್ನು ಜನತೆಯ ಮುಂದಿಟ್ಟು ಪ್ರಚಾರ ಮಾಡುವಂತೆ ಕಾರ್ಯಕರ್ತರಿಗೆ ಕರೆ ನೀಡಿದರು.
ಕೋಮುವಾದ ಮಣಿಸಲು ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಒಂದಾಗಿರುವದು ಸಂಘಟನೆಯ ದಿಕ್ಸೂಚಿಯಾಗಿದೆ ಯಲ್ಲದೆ, ರಾಜಕಾರಣದಲ್ಲಿ ಇದೊಂದು ಯುಗಾಂತರವಾಗಿದೆ ಎಂದು ಅವರು ಹೇಳಿದರು. ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭ ರೈತರು ಮನೆ ಕಟ್ಟಲೆಂದು ಪಡೆದಿದ್ದ ಸಾಲವನ್ನು ಮನ್ನಾ ಮಾಡಿದ್ದರು. ಈಗಿನ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೂ ಕೂಡ ಸಾಲ ಮನ್ನಾ ದೊಂದಿಗೆ ಜಿಲ್ಲೆಯ ಜನತೆಯ ಬಹು ವರ್ಷಗಳ ಬೇಡಿಕೆಯಾಗಿದ್ದ ಎರಡು ಹೊಸ ತಾಲೂಕುಗಳ ರಚನೆ ಮಾಡಿದ್ದಾರೆ. ಕೊಡವ ಸಮುದಾಯದ ಅಭಿವೃದ್ಧಿಗೆ ರೂ. 10 ಕೋಟಿ ಅನುದಾನ, ಅರೆಭಾಷೆ ಗೌಡರು ಸೇರಿದಂತೆ ಇತರ 25 ಸಮುದಾಯದ ಅಭಿವೃದ್ಧಿಗೆ 134 ಕೋಟಿ ಅನುದಾನ ಹಾಗೂ ಕ್ರೀಡೆಗೆ ಉತ್ತೇಜನಕ್ಕಾಗಿ ಹಾಕಿ ಕ್ರೀಡಾಂಗಣಕ್ಕೆ
(ಮೊದಲ ಪುಟದಿಂದ) ರೂ. 1 ಕೋಟಿ ಅನುದಾನವನ್ನು ಬಜೆಟ್‍ನಲ್ಲಿ ಮೀಸಲಿಡಲಾಗಿದೆ. ಸಮ್ಮಿಶ್ರ ಸರಕಾರ ಜಿಲ್ಲೆಗೆ ಅಪಾರ ಕೊಡುಗೆ ನೀಡಿದೆ ಎಂದು ಹೇಳಿದರು. ಪ್ರಜಾತಂತ್ರ ವ್ಯವಸ್ಥೆಯಡಿ ಜನಾದೇಶವೇ ದೊಡ್ಡದು. ಪ್ರತಿಷ್ಠೆ ದೊಡ್ಡದಲ್ಲ ಎಂಬ ಸಂದೇಶವನ್ನು ಸಂಘಟಿತವಾಗಿ ಸಾರಬೇಕಿದೆ ಎಂದು ಇದೇ ಸಂದರ್ಭದಲ್ಲಿ ಹೇಳಿದರು.
ಜಗ್ಗುವದಿಲ್ಲ-ಕುಗ್ಗುವದಿಲ್ಲ
ಪಕ್ಷದ ನಿಕಟ ಪೂರ್ವ ಅಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಅವರಿಂದ ಅಧಿಕಾರ ಸ್ವೀಕಾರ ಮಾಡಿ ಮಾತನಾಡಿದ ನೂತನ ಅಧ್ಯಕ್ಷ ಕೆ.ಎಂ. ಗಣೇಶ್ ಅವರು, ತನ್ನ ಮೇಲೆ ಪಕ್ಷದ ಕೆಲವು ಮುಖಂಡರು ಇಲ್ಲ-ಸಲ್ಲದ ಆರೋಪ ಮಾಡುತ್ತಿದ್ದಾರೆ. ಜೀವಿಜಯ ಅವರು ನಮ್ಮ ನಾಯಕರು. ಈಗಲೂ ಅವರಿಗೆ ಗೌರವ ನೀಡುತ್ತೇನೆ. ಆದರೂ ತನ್ನನ್ನು ಅವಹೇಳನ ಮಾಡುತ್ತಿದ್ದಾರೆ. ತನ್ನ ವಿರುದ್ಧ ಹೇಳಿಕೆ ನೀಡುತ್ತಾರೆ. ಪಕ್ಷದ ಬಗ್ಗೆ ಮಾತನಾಡಲು ವೇದಿಕೆ ಇದೆ. ಅಲ್ಲಿ ಚರ್ಚೆ ಮಾಡೋಣ. ಬಗೆಹರಿಸುವದು ಬಹಳಷ್ಟಿದೆ. ಅದು ಬಿಟ್ಟು ನನ್ನ ಜಾತಿ, ವೈಯಕ್ತಿಕ ವಿಚಾರಗಳ ಬಗ್ಗೆ ಮಾತನಾಡುವದು ಸರಿಯಲ್ಲ. ತನಗೆ ಪಕ್ಷ ಸಂಘಟನೆಯ ಜವಾಬ್ದಾರಿ ಕೊಟ್ಟಿದ್ದಾರೆ. ಅದಕ್ಕಾಗಿ ಶ್ರಮಿಸುವೆ. ಯಾವದೇ ನಿಂದನೆಗಳಿಗೆ ಜಗ್ಗುವದೂ ಇಲ್ಲ; ಕುಗ್ಗುವದೂ ಇಲ್ಲ. ಪಕ್ಷ ನನಗೆ ಮುಖ್ಯ. ಕಾರ್ಯಕರ್ತರೇ ನನಗೆ ಶಕ್ತಿ ಎಂದು ಹೇಳಿದರು.
ಇಂದಿನ ಕಾರ್ಯಕ್ರಮಕ್ಕೂ ಮುಖ್ಯಮಂತ್ರಿಗಳು ಬರುವದಿಲ್ಲ. ಯಾರೂ ಬರುವದಿಲ್ಲ ಎಂದು ಕಾರ್ಯಕ್ರಮಕ್ಕೆ ಆಗಮಿಸಲಿದ್ದ ಕಾರ್ಯಕರ್ತರನ್ನು ತಡೆದಿದ್ದಾರೆ. ಅಧಿಕಾರ ಯಾರಿಗೂ ಶಾಶ್ವತ ಅಲ್ಲ. ನನ್ನಿಂದ ಎಲ್ಲವೂ, ಎಲ್ಲ ನನ್ನಿಂದಾಗಿಯೇ ಅಗಲಿದೆ ಎಂಬ ಮನಸು ಇರಬಾರದು ಎಂದು ಪರೋಕ್ಷವಾಗಿ ಜೀವಿಜಯ ಅವರಿಗೆ ಕುಟುಕಿದರಲ್ಲದೆ, ಮುಂಬರುವ ನಗರಸಭೆ ಸೇರಿದಂತೆ ಯಾವದೇ ಚುನಾವಣೆಯಲ್ಲೂ ತಾನು ಸ್ಪರ್ಧಿಸುವದಿಲ್ಲ ಎಂದರು.
ನಮ್ಮ ಶಾಸಕರನ್ನು ಗೆಲ್ಲಿಸಿ
ಪಕ್ಷದ ಅಲ್ಪಸಂಖ್ಯಾತ ಘಟಕದ ರಾಜ್ಯಾಧ್ಯಕ್ಷ ಅಲ್ತಾಫ್ ಮಾತನಾಡಿ, ಅಧ್ಯಕ್ಷರು ಕಾರ್ಯಕರ್ತರೊಂದಿಗೆ ಸಂಪರ್ಕವಿರಿಸಿಕೊಳ್ಳಬೇಕಾಗಿದೆ. ಪಕ್ಷ ಬೆಳೆಸಲು ಕಚೇರಿ ತೆರೆದು ಕಾರ್ಯಕರ್ತರ ಬೇಕು-ಬೇಡಿಕೆಗಳನ್ನು ಆಲಿಸಬೇಕಾಗುತ್ತದೆ ಎಂದರು.
ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಧರ್ಮ ಪರಿಪಾಲನೆಯೊಂದಿಗೆ ಮೈತ್ರಿ ಕೂಟದ ಅಭ್ಯರ್ಥಿಯನ್ನು ಗೆಲ್ಲಿಸಬೇಕಿದೆ ಎಂದು ಹೇಳಿದರು.
ಪಕ್ಷದ ರಾಜ್ಯ ಮುಖಂಡರಾದ ಪದ್ಮಿನಿ ಪೊನ್ನಪ್ಪ ಅವರು, ಪಕ್ಷದ ವರಿಷ್ಠರು ಗಣೇಶ್ ಅವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಅವರ ಆದೇಶಕ್ಕೆ ಎಲ್ಲರೂ ತಲೆಬಾಗಲೇ ಬೇಕಿದೆ. ಪಕ್ಷದಲ್ಲಿ ಆ ಗುಂಪು, ಈ ಗುಂಪು ಎಂಬ ಮಾತು ಕೇಳಿ ಬರುತ್ತಿದೆ. ನಾನು ಯಾವದೇ ಗುಂಪಿನವಳಲ್ಲ. ಎಲ್ಲರೂ ದೇವೇಗೌಡರ ಗುಂಪು ಎಂದು ಹೇಳಿದರು.
ಸಿ.ವಿ. ನಾಗೇಶ್ ಅವರೂ ಕೂಡ ಪಕ್ಷದ ಅಧ್ಯಕ್ಷರ ಆಯ್ಕೆಯಲ್ಲಿ ವರಿಷ್ಠರ ತೀರ್ಮಾನಕ್ಕೆ ಬದ್ಧರಾಗಿರಬೇಕಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ನಿಕಟಪೂರ್ವ ಅಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಅವರು, ಜೆಡಿಎಸ್ ಎಂದಿಗೂ ಚುನಾವಣೆ ಕೇಂದ್ರೀಕೃತ ರಾಜಕಾರಣ ಮಾಡಿಲ್ಲ. ಈಗಿನ ಮೈತ್ರಿ ಸರಕಾರದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಜಿಲ್ಲೆಗೆ 100 ಕೋಟಿ ಅನುದಾನ ನೀಡಿದ್ದಾರೆ ಎಂದರು ಹೇಳಿದರು.
ಈಗಿನ ಸಂಸದರು ಅತ್ಯಂತ ನಿಷ್ಕ್ರಿಯ ಸಂಸದರಾಗಿದ್ದಾರೆ. ಬೆಳೆಗಾರರ ಸಮಸ್ಯೆಗೆ ಸ್ಪಂದಿಸಿಲ್ಲ ಎಂದು ಆರೋಪಿಸಿದ ಅವರು, ಪಕ್ಷದ ಅಧ್ಯಕ್ಷರ ಆಯ್ಕೆ ಸಂದರ್ಭ ಬಿನ್ನಾಭಿಪ್ರಾಯಗಳು ಸಹಜ. ಅವುಗಳನ್ನು ಬದಿಗೊತ್ತಿ ವರಿಷ್ಠರ ತೀರ್ಮಾನಕ್ಕೆ ಬದ್ಧರಾಗಿ ಪಕ್ಷ ಸಂಘಟನೆಯೊಂದಿಗೆ ಸಂಸದರು, ಶಾಸಕರನ್ನು ಆಯ್ಕೆ ಮಾಡಿ ಕಳುಹಿಸುವಂತಾಗಬೇಕೆಂದು ಹೇಳಿದರು.
ಮಾಜಿ ಸಚಿವ ಹೆಚ್.ಸಿ ಮಹದೇವಪ್ಪ ಮಾತನಾಡಿ, ಮತದಾರರು ಜಾಗೃತಿಗೊಂಡಿದ್ದಾರೆ. ಅಭಿವೃದ್ದಿ ಪರ ಮತ ಹಾಕುತ್ತಾರೆ. ಇದುವರೆಗೂ ಯಾವ ಪಕ್ಷವೂ ಸ್ಪಷ್ಟ ಬಹುಮತ ಪಡೆದುಕೊಂಡಿಲ್ಲದಿರುವದೇ ಇದನ್ನು ಸಾಬೀತುಪಡಿಸಿದೆ ಎಂದು ಹೇಳಿದರು. ದೇಶದಲ್ಲಿ ಪ್ರಜಾಪ್ರಭುತ್ವ, ಸಂವಿಧಾನಕ್ಕೆ ಧಕ್ಕೆ ಬಂದಿದೆ. ಸಂವಿಧಾನ ವಿರೋಧಿ ಚುನಾವಣೆಗಳು ನಡೆದಿದೆ. ಸಂವಿಧಾನವನ್ನು ದುರ್ಬಲಗೊಳಿಸುವ ಕೆಲಸವಾಗುತ್ತಿದೆ. ವಿಜಯ ಶಂಕರ್ ಅವರು ಗೆಲುವು ಕಂಡರೆ ಕ್ಷೇತ್ರದಲ್ಲಿ ಬದಲಾವಣೆಯ ಪರ್ವ ಶುರುವಾಗುತ್ತದೆ, ಅಭಿವೃದ್ಧಿ ಮಾಡುತ್ತಾರೆ ಎಂದು ಹೇಳಿದರು.
ವೇದಿಕೆಯಲ್ಲಿ ಪಕ್ಷದ ಪ್ರಮುಖರುಗಳಾದ ಮನ್ಸೂರ್ ಆಲಿ, ಇಸಾಕ್ ಖಾನ್, ಎಂ.ಎಂ. ಶರೀಫ್, ಪಾರೆಮಜಲು ಕುಸುಮ್, ಪುಷ್ಪಾ ನಾಗರಾಜ್, ಎಸ್.ಹೆಚ್. ಮತೀನ್, ಲೀಲಾ ಶೇಷಮ್ಮ ಇನ್ನಿತರರಿದ್ದರು.