ರಾಜಕಾರಣದಲ್ಲಿ ಕೆಲವೊಮ್ಮೆ ಶತ್ರುಗಳು ಮಿತ್ರರಾಗುತ್ತಾರೆ, ಮಿತ್ರರು ಶತ್ರುಗಳಾಗುತ್ತಾರೆ. ಆಯಾ ಸನ್ನಿವೇಶಕ್ಕೆ ಅನುಗುಣವಾಗಿ ದಿಕ್ಕು ಬದಲಾಗುತ್ತದೆ. ಈ ಪೀಠಿಕೆ ಯಾಕೆಂದರೆ ಗುರುವಾರ ಮಡಿಕೇರಿ ನಗರದಲ್ಲಿ ನಡೆದ ಜೆಡಿಎಸ್ ನೂತನ ಜಿಲ್ಲಾಧ್ಯಕ್ಷರ ಪದಗ್ರಹಣ ಮತ್ತು ಕಾರ್ಯಕರ್ತರ ಸಮಾವೇಶದಲ್ಲಿ ಒಂದು ಕಾಲದಲ್ಲಿ ಪ್ರತಿಸ್ಪರ್ಧಿಗಳಾಗಿ ಇದೇ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋತವರು ಹಾಗೂ ವಿಜಯಶಾಲಿಯಾದವರು ಒಂದೇ ವೇದಿಕೆಯಲ್ಲಿದ್ದರು.

2009ರಲ್ಲಿ ಅಡಗೂರು ಹೆಚ್. ವಿಶ್ವನಾಥ್ ಸ್ಪರ್ಧಿಸಿದಾಗ ಇವರ ಪ್ರತಿಸ್ಪರ್ಧಿ ಬಿಜೆಪಿಯ ಸಿ.ಹೆಚ್.ವಿಜಯಶಂಕರ್ ಪರಾಭವಗೊಂಡಿದ್ದರು. ಅಂದು ಕಾಂಗ್ರೆಸ್‍ನಲ್ಲಿದ್ದ ವಿಶ್ವನಾಥ್ ಇಂದು (ಮೊದಲ ಪುಟದಿಂದ) ಜೆಡಿಎಸ್ ರಾಜ್ಯಾಧ್ಯಕ್ಷರಾಗಿದ್ದಾರೆ ಹಾಗೂ ಹುಣಸೂರು ಕ್ಷೇತ್ರದ ಶಾಸಕರಾಗಿದ್ದಾರೆ. ಅಂದು ಬಿಜೆಪಿಯಲ್ಲಿದ್ದ ವಿಜಯಶಂಕರ್ ಇಂದು ಮೈತ್ರಿಕೂಟದ ಕಾಂಗ್ರೆಸ್ ಪಕ್ಷದ ಲೋಕಸಭಾ ಅಭ್ಯರ್ಥಿಯಾಗಿದ್ದಾರೆ. ಅಂದು ಜೆಡಿಎಸ್‍ನಲ್ಲಿದ್ದ ಮಾಜಿ ಸಚಿವ ಡಾ| ಹೆಚ್.ಸಿ. ಮಹದೇವಪ್ಪ ಕಾಂಗ್ರೆಸ್ ಸೇರಿ ಇಂದು ಜೆಡಿಎಸ್ ಸಮಾವೇಶದಲ್ಲಿ ವಿಜಯಶಂಕರ್ ಪರವಾಗಿ ಮತಯಾಚಿಸಿದ್ದಾರೆ. ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಕೆ.ಎಂ.ಗಣೇಶ್ ಇಂದು ಜೆಡಿಎಸ್ ಸೇರಿ ಜಿಲ್ಲಾಧ್ಯಕ್ಷರಾಗಿದ್ದಾರೆ. ಅಂದು ಜೆಡಿಎಸ್ ಜಿಲ್ಲಾಧ್ಯಕ್ಷರಾಗಿದ್ದ ವಿ.ಪಿ.ಶಶಿಧರ್ ಇಂದು ಕಾಂಗ್ರೆಸ್‍ನ ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದಾರೆ. ಜೆಡಿಎಸ್‍ನಲ್ಲೇ ಪರಸ್ಪರ ಬದ್ದ ವೈರಿಗಳಾಗಿದ್ದ ವಿ.ಪಿ.ಶಶಿಧರ್ ಮತ್ತು ಸಿ.ವಿ.ನಾಗೇಶ್ ಇಂದು ಒಂದೇ ವೇದಿಕೆಯನ್ನು ಹಂಚಿಕೊಂಡಿದ್ದಾರೆ. ಸಿ.ವಿ. ನಾಗೇಶ್ ಇಂದು ಜೆಡಿಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿದ್ದಾರೆ.

ಹೀಗೆ ಗುರುವಾರ ಮಡಿಕೇರಿಯಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಕಾಂಗ್ರೆಸ್‍ನಲ್ಲಿದ್ದವರು ಜೆಡಿಎಸ್‍ನಲ್ಲಿ ಗುರುತಿಸಿಕೊಂಡರೆ, ಜೆಡಿಎಸ್‍ನಲ್ಲಿದ್ದವರು ಕಾಂಗ್ರೆಸ್‍ನಲ್ಲಿ ಗುರುತಿಸಿಕೊಂಡು ಒಟ್ಟಿಗೆ ಸಮಾವೇಶದಲ್ಲಿ ಪರಸ್ಪರ ಮಾತನಾಡಿಕೊಳ್ಳುತ್ತ ಮೈತ್ರಿ ಕೂಟದ ಅಭ್ಯರ್ಥಿಯ ಪರ ಮತಯಾಚಿಸಿದ್ದು ವಿಶೇಷವಾಗಿತ್ತು. ಅದಕ್ಕೆ ಹೇಳುವದು ‘ರಾಜಕಾರಣದಲ್ಲಿ ಯಾರೂ ಶತ್ರುಗಳಿಲ್ಲ, ಯಾರೂ ಮಿತ್ರರೂ ಇಲ್ಲ’ ಎಂದು. ಕಾಲಕ್ಕೆ ತಕ್ಕಂತೆ ಬದಲಾವಣೆಯಾಗುತ್ತ ಪ್ರಕೃತಿಯ ನಿಯಮಕ್ಕೆ ಬದ್ದರಾಗಿರಬೇಕಾಗುತ್ತದೆ. - ಶ್ರೀವತ್ಸ